ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಕಣ್ಣು ಪ್ರಮುಖವಾದ ಅಂಗವಾಗಿದ್ದು, ಉದ್ಯಮಿ ಅಯ್ಯೂಈಭ ಮನಿಯಾರ ಅವರ ಮನಿಯಾರ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ದೃಷ್ಠಿದೋಷದಿಂದ ಬಳಲುತ್ತಿರುವ ಅಸಹಾಯಕ ಬಡವರಿಗೆ ನೇತ್ರ ಚಿಕಿತ್ಸೆ ಮೂಲಕ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕಣ್ಣು ಪ್ರಮುಖವಾದ ಅಂಗವಾಗಿದ್ದು, ಉದ್ಯಮಿ ಅಯ್ಯೂಈಭ ಮನಿಯಾರ ಅವರ ಮನಿಯಾರ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ದೃಷ್ಠಿದೋಷದಿಂದ ಬಳಲುತ್ತಿರುವ ಅಸಹಾಯಕ ಬಡವರಿಗೆ ನೇತ್ರ ಚಿಕಿತ್ಸೆ ಮೂಲಕ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.ಪಟ್ಟಣದ ಮನಿಯಾರ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಜಯಪುರ ಅನುಗ್ರಹ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸ ಶಿಬಿರದಲ್ಲಿ ಉಚಿತ ಕನ್ನಡಕ ಹಾಗೂ ಮಾಶಾಸನ ವಿತರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಕಣ್ಣಿನ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಾದ ಅಗತ್ಯವಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯಕ್ಕೂ ಉದಾಸೀನ ತೋರದೆ ತಕ್ಷಣವೇ ವೈದ್ಯರ ಸಲಹೆ ಪಡೆದು ಆರೋಗ್ಯದ ಬಗ್ಗೆ ಗಮನವನ್ನು ಹರಿಸಬೇಕು. ಮನಿಯಾರವರಂತೆ ದುಡಿದ ಒಂದಿಷ್ಟು ಭಾಗವನ್ನು ಸಾಮಾಜಿಕ ಕಾರ್ಯಕ್ಕೆ ಬಳಸಿದರೆ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ, ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆ ದೊರಕಿಸುವಲ್ಲಿ ನಮ್ಮ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್‌ಗಳನ್ನು ಬಳಸಿಕೊಳ್ಳುವ ಮೂಲಕ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಪಡೆದುಕೊಳ್ಳಬಹುದಾಗಿದೆ. ಜತೆಗೆ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ತೊಂದರೆ ಕೊಡದೇ ಗೌರವಿಸುವಂತಾಗಬೇಕು. ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮೇಲೆ ದೌರ್ಜನ್ಯವೆಸಗುವ ಪ್ರಕರಣಗಳು ಹೆಚ್ಚಾಗಿದ್ದು, ಇದರಿಂದಾಗಿ ಎಲ್ಲ ಸೌಲಭ್ಯಗಳಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಕಳೆದ ಬಾರಿ ನಮ್ಮ ಸರ್ಕಾರ ವೈದ್ಯಕೀಯ ಶಿಕ್ಷಣ ಪಡೆದವರು ಮೊದಲು ಗ್ರಾಮೀಣ ಪ್ರದೇಶದಲ್ಲಿ ಜನರ ಸೇವೆ ಮಾಡಬೇಕು ಎಂದು ಆದೇಶ ಮಾಡಿದೆ. ಖಾಸಗಿ ಆಸ್ಪತ್ರೆಗಳಿಂದಾಗಿ ಇಂದು ಹಣವಿಲ್ಲದೇ ಬಡವರಿಗೆ ಆರೋಗ್ಯ ಸೇವೆ ದೊರಕುತ್ತಿಲ್ಲ ಎಂದು ಹೇಳಿದರು.ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಪಾಟೀಲ(ಲಿಂಗದಳ್ಳಿ) ಮಾತನಾಡಿ, ನಲವತ್ತು ವರ್ಷ ಮೀರಿದ ಪ್ರತಿಯೊಬ್ಬರು ತಪ್ಪದೆ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ವ್ಯಕ್ತಿಯ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಇಂತಹ ವ್ಯಕ್ತಿಗಳು ಕಾಲ ಕಾಲಕ್ಕೆ ದೃಷ್ಟಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರವಚನಕಾರ ಲಾಲಹುಸೇನ ಕಂದಗಲ್ಲ, ಶಂಕರಗೌಡ ಹೊಸಮನಿ, ರೂಪಸಿಂಗ್ ಲೋಣಾರಿ, ಸಾಮಾಜಿಕ ಕಾರ್ಯಕರ್ತ ಅಯ್ಯೂಬ ಮನಿಯಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಅಬ್ಧೂಲಖಾದರಸಾಬ ಎತ್ತಿನಮನಿ, ಐ.ಎಲ್.ಮಮದಾಪೂರ, ಅಪ್ತಾಬ ಮನಿಯಾರ, ಮೈಭೂಬ ನಾಲತವಾಡ ಸೇರಿ ಹಲವರು ಇದ್ದರು.