ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಪಡೆದಿದೆ. ಈ ಭಾಷೆಯನ್ನು ಉಳಿಸಿ ಬೆಳೆಸುವ ಮೂಲಕ ಆಧುನಿಕ ಯಗದಲ್ಲಿ ಯುವಕರಲ್ಲಿ ಕನ್ನಡ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ನಡೆದ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಜಗತ್ತಿನಲ್ಲಿ ವಿಜ್ಞಾನ ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಮಧ್ಯ ಕನ್ನಡ ಬಳಕೆ ಕ್ರಮೇಣ ಕುಂಟಿತಕ್ಕೆ ಕಾರಣವಾಗುತ್ತಿದೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ, ವಿಜ್ಞಾನ ಎಷ್ಟೇ ಮುಂದುವರೆದರೂ ಮಾತೃಭಾಷೆಯನ್ನು ಯಾರೂ ಮರೆಯಬಾರದು. ಈ ಮೊದಲು ಹಲವು ಪ್ರಾಂತಗಳನ್ನು ಒಂದುಗೂಡಿಸುವ ಮೂಲಕ ಅಖಂಡ ಕರ್ನಾಟಕ ಮಾಡಿಕೊಟ್ಟಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮೈಸೂರ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ ಎಂದು ವಿಭಾಗಗಳಿದ್ದರು ಆಡುವ ಭಾಷೆಯ ಸ್ಪರೂಪ ಬೇರೆಯೇ ಆಗಿದೆ. ಉತ್ತರ ಕರ್ನಾಟಕ ಭಾಷೆಯೂ ಗಂಡು ಭಾಷೆ ಅತ್ಯಂತ ಒರಟಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ, ನೈಜ ಕನ್ನಡ ಉಳಿದಿದೆ ಎಂಬುದಾದರೇ ಅದು ಉತ್ತರ ಕರ್ನಾಟಕದಲ್ಲಿ ಮಾತ್ರ ಎಂದರು.ಸಧ್ಯ ಮುದ್ದೇಬಿಹಾಳ ತಾಲೂಕಿನ ಬಗ್ಗೆ ಒಬ್ಬೊಬ್ಬರು ಸಾಹಿತಿಗಳು ಒಂದೊಂದು ಇತಿಹಾಸ ಹೇಳುತ್ತಾರೆ. ತಾಲೂಕಿನ ಕೃಷ್ಣಾ ನದಿ ತೀರದ ಈಗಿನ ಅಮರಗೋಳ ಗ್ರಾಮದ ವ್ಯಾಪ್ತಿಯಲ್ಲಿ ನಿಜಾಮರ ಕಾಲದಲ್ಲಿ ಹಿಂದೆ 67 ಜನ ಜಂಗಮ ಶರಣರನ್ನು ಹತ್ಯೆ ಮಾಡಲಾಗಿತ್ತು. ಆ ಕಾರಣ ಅದಕ್ಕೆ ಅಮರಗಣಂಗಳ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಅಮರಗಣಂಗಳ ಹೋಗಿ ಅಮರಗೋಳ ಎಂದಾಗಿದೆ. ನಮ್ಮ ಭಾಗದ ಯುವ ಸಾಹಿತಿಗಳಾಗಲಿ ಅಥವಾ ಹಿರಿಯ ಸಾಹಿತಿಗಳಾಗಲಿ ತಾಲೂಕಿನ ಬಗ್ಗೆ ಸಂಪೂರ್ಣ ಸಂಶೋಧನೆ ನಡೆಸಿ ಮೂಲ ಇತಿಹಾಸವನ್ನು ತಿಳಿಸಿದರೇ ಇಂದಿನ ಯುವ ಪೀಳಿಗೆಗೆ ಅನುಕೂಲವಾಗಲಿದೆ ಎಂಬ ಅಭಿಲಾಷೆ ವ್ಯಕ್ತಪಡಿಸಿದರು.ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದ ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಇಂದು ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಒಳ್ಳೆಯ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು. ದೇಶಾಭಿಮಾನ, ಸಂಸ್ಕಾರ, ಪರಂಪರೆಯ ಬಗ್ಗೆ ತಿಳಿಸಬೇಕಿದೆ. ಈ ಭಾಗದಲ್ಲಿ ಅತಿ ಹೆಚ್ಚು ಶರಣರು, ಸಂತರು ಜನಿಸಿದ್ದಾರೆ. ಇಂದು ನಮ್ಮ ಉತ್ತರ ಕರ್ನಾಟಕ ಭಾಷೆಯನ್ನೇ ತಿರುಚಿ ಅಪಸ್ವರ ಸೃಷ್ಠಿಸುವ ಜಾನಪದ ಗೀತೆಗಳ ಹಾವಳಿಯಿಂದಾಗಿ ಉತ್ತರ ಕರ್ನಾಟಕ ಭಾಗದ ನಿಜವಾದ ಜಾನಪದ ಸಾಹಿತ್ಯಕ್ಕೆ ಅಗೌರವ ತೋರುವ ಪ್ರಸಂಗಗಳು ನಡೆದಿವೆ. ನಿಜವಾದ ಜಾನಪದ ಕಲೆ ಹಾಗೂ ಸಾಹಿತ್ಯಕ್ಕೆ ಅಪಮಾನಿಸಲಾಗುತ್ತಿದೆ. ಅಪಸ್ವರ ಹೊಂದಿದ ಸಾಹಿತ್ಯದ ಹಾಡುಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಮಾತನಾಡಿ, ಪಟ್ಟಣದಲ್ಲಿ ವೈಭವೋಪೇತ ಸಮ್ಮೇಳನ ನಡೆಸುವ ಮೂಲಕ ಕನ್ನಡದ ಮನಸುಗಳಿಗೆ ಮತ್ತು ಯುವ ಸಾಹಿತಿಗಳಿಗೆ ಗೌರವಿಸುವಂತಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಜಿಲ್ಲಾ ಮಟ್ಟದಂತಹ ಸಮ್ಮೇಳನದ ಜವಾಬ್ದಾರಿ ಹೊತ್ತಿರುವ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸಂಘಟನೆ ಶ್ಲಾಘನೀಯ ಎಂದರು.ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಜಾತಿ, ಮತ, ಪಂಥ, ಎಲ್ಲ ಪಕ್ಷಗಳ ರಾಜಕಾರಿಣಿಗಳನ್ನು ಗೌರವದಿಂದ ಒಂದೇ ವೇದಿಕೆಯಡಿ ಸೇರುವಂತೆ ಮಾಡುವುದೇ ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯವೇದಿಕೆ. ಮುದ್ದೇಬಿಹಾಳ ತಾಲೂಕು ಪೂರ್ವದಿಂದಲೂ ಶರಣುರು, ದಾರ್ಶನಿಕರು, ಸಂತರು, ಹಲವಾರು ಜನಪ್ರಿಯತೆ ಪಡೆದ ಪೂಣ್ಯ ಭೂಮಿ. ಪಟ್ಟಣವನ್ನು ಸಿಂಗಾರಗೊಳಿಸಿ ಸಮ್ಮೇಳನ ನಡೆಸಿದ್ದು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಯುವ ಹಾಗೂ ಹಿರಿಯ ಸಾಹಿತಿಗಳಿಗೆ ಗೌರವಸುವಂತಾಗಲಿ ಎಂದು ಆಶಿಸಿದರು.ಕುಂಟೋಜಿ ಹಿರೇಮಠ ಡಾ.ಚನ್ನವೀರ ಶಿವಾಚಾರ್ಯರು, ಖರಿಮೊಹಮ್ಮದ ಇಸಾಕ ಮಾಗಿ ಸಾನಿಧ್ಯ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಸಿ.ಬಿ.ಅಸ್ಕಿ, ಇಒ ನಿಂಗಪ್ಪ ಮಸಳಿ, ಬಿಇಒ ಬಿ.ಎಸ್.ಸಾವಳಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ, ತಾಲಘು ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಮುದ್ನೂರ ಹಲವರು ಇದ್ದರು.ಬಾಕ್ಸ್‌ಕನ್ನಡ ಕಡ್ಡಾಯ ಬಳಕೆಗೆ ಕ್ರಮಕೈಗೊಳ್ಳಿ: ಸಮ್ಮೇಳನಾಧ್ಯಕ್ಷಮುದ್ದೇಬಿಹಾಳ: ಅನ್ಯ ಭಾಷೆಗಳ ಪ್ರೀತಿಸಿ ಮಾತೃ ಭಾಷೆಯನ್ನು ಅಪ್ಪಿಕೊಳ್ಳುವ ಮೂಲಕ ನಾಡು ನುಡಿ, ಜಲ, ಭಾಷೆಯನ್ನು ಗೌರವಿಸುವ ಮೂಲಕ ಕನ್ನಡ ಉಳಿಸಿ ಬೆಳೆಸಬೇಕಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಅಶೋಕ ಮಣಿ ಹೇಳಿದರು. ಇತ್ತೀಚೆಗೆ ನ್ಯಾಯಾಲಯಗಳು ಕೂಡ ಕನ್ನಡದಲ್ಲಿಯೇ ತೀರ್ಪುಗಳನ್ನು ನೀಡುತ್ತಿರುವುದು ಸಂತಸ ತಂದಿದೆ. ನ್ಯಾಯಾಲಯಗಳಿಗೆ ಮತ್ತು ಬಡ ಹಾಗೂ ಹಿಂದುಳಿದ ಅಲ್ಪ ಸಂಖ್ಯಾತ ಜೈನ ಧರ್ಮದ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕಾಮರಾಜ ಬಿರಾದಾರ ಸೇರಿ ಪದಾಧಿಕಾರಿಗಳಿಗೆ, ಸಾಹಿತಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕನ್ನಡ ಹಳೆ ತಲೆಮಾರಿನಿಂದಲೂ ಶರಣರು, ಸಂತರು, ವಚನಕಾರರು ಹೀಗೇ ಅನೇಕ ಅಗ್ರಗಣ್ಯ ಸಾಹಿತಿಗಳು ತಮ್ಮ ವಚನಗಳ ಮೂಲಕ ಗೌರವ ತಂದು ಕೊಟ್ಟಿದ್ದಾರೆ. ಇಂದು ನಾವು ಇಂಗ್ಲೀಷ್ ವ್ಯಾಮೋಹಕ್ಕೊಳಗಾಗಿ ಕನ್ನಡವನ್ನೇ ಮರೆಯುತ್ತಿದ್ದೇವೆ. ಇಂದರಿಂದ ಕನ್ನಡ ಭಾಷೆ ಬಳಕೆಗೆ ಧಕ್ಕೆಯುಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸರ್ಕಾರ ಎಲ್ಲ ಇಲಾಖೆಗಳಲ್ಲಿ ಕನ್ನಡವನ್ನು ಕಡ್ಡಾಯ ಬಳಸುವಂತೆ ಅದೇಶಿಸಬೇಕು. ಗಡಿನಾಡು ಪ್ರದೇಶಗಳ ಕನ್ನಡ ಶಾಲೆಗಳನ್ನುಅಭಿವೃದ್ಧಿ ಪಡಿಸಬೇಕು. ಗ್ರಾಮೀಣ ಪ್ರದೇಶಗಳ ಕನ್ನಡ ಶಾಲೆಗಳನ್ನು ಸುಸಜ್ಜಿತಗೊಳಿಸಿ ಉತ್ತಮ ಶಿಕ್ಷಕರನ್ನು ನೇಮಿಸಬೇಕು. ಪ್ರತಿಯೊಂದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಾಚನಾಲಯಗಳನ್ನು ಸ್ಥಾಪಿಸಿ ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಓದುವ, ಜ್ಞಾನ ಬೆಳೆಸಿಕೊಳ್ಳುವ ಅಭಿರುಚಿ ಮೂಡಿಸಲು ಕ್ರಮ ಕೈಗೊಳ್ಳಬೇಕು. ಕನ್ನಡ ಪುಸ್ತಕಗಳನ್ನು ಶೇ.50 ರಷ್ಟು ಕೊಂಡುಕೊಳ್ಳುವಂತೆ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ ಹಾಗೂ ಶಾಲೆ, ಕಾಲೇಜುಗಳಿಗೆ ಸೂಚಿಸಬೇಕು. ಬರೆಯುವವನ ಕೈ ಬರಿಗೈ ಎಂಬಂತೆ ಬಡ ಬರಹಗಾರರಿಗೆ, ಸಾಹಿತಿಗಳಿಗೆ, ಸಾಹಿತ್ಯದ ಅಧ್ಯಯನಕ್ಕಾಗಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಉಚಿತ ಬಸ್ ಪಾಸ್‌ಗಳನ್ನು ನೀಡಬೇಕು. ಇದರಿಂದ ಅವರ ಸಾಹಿತ್ಯ ರಚನೆಗೆ ಸಹಾಯವಾಗುತ್ತದೆ ಎಂಬುದಾಗಿ ತಿಳಿಸಿದರು.