ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಚಿಂತನೆ ಶ್ರೇಷ್ಠವಾದುದು: ವೀರಸಂಗಮೇಶ್ವರ ಶಿವಾಚಾರ್ಯರು

| Published : Feb 16 2025, 01:47 AM IST

ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಚಿಂತನೆ ಶ್ರೇಷ್ಠವಾದುದು: ವೀರಸಂಗಮೇಶ್ವರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಬನಶಂಕರಿದೇವಿ ವಿದ್ಯಾಸಂಸ್ಥೆ ಪ್ರಾರಂಭಿಸಿರುವ ಬಸವರಾಜ ಖೋತ ಅವರಿಗೆ, ಶಿಕ್ಷಣ ಕ್ಷೇತ್ರದ ಮೇಲೆ ಅತಿ ಹೆಚ್ಚು ಪ್ರೀತಿ ಇದೆ. ಈ ಕ್ಷೇತ್ರವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಸುವ ಶ್ರೇಷ್ಠ ಕೆಲಸ ಮಾಡುತ್ತಿದ್ದಾರೆ ಎಂದು ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಶ್ರೀ ಬನಶಂಕರಿದೇವಿ ವಿದ್ಯಾಸಂಸ್ಥೆಯ ಬಿ.ಎನ್. ಖೋತ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ, ಬಿ. ಎನ್. ಖೋತ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜಯ ವಿಕ್ರಮ ಉತ್ಸವ-೨೦೨೫ರ ಸಾನ್ನಿಧ್ಯ ವಹಿಸಿ ಮಾತನಾಡಿ, ಶೈಕ್ಷಣಿಕ ಸಾಧನೆ ಹಿಂದೆ ಖೋತ ಅವರ ಬಹುದೊಡ್ಡ ಶ್ರಮವಿದೆ ಎಂದ ಅವರು, ಈ ವಿದ್ಯಾ ಸಂಸ್ಥೆಯಲ್ಲಿ ಕಲಿತ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ಎಸ್. ಪಟ್ಟಣಶೆಟ್ಟಿ ಮಾತನಾಡಿ, ವಿಜಯ ವಿಕ್ರಂ ಉತ್ಸವವನ್ನು ಸಾಂಸ್ಕೃತಿಕ ಹಬ್ಬದಂತೆ ಸಡಗರ, ಸಂಭ್ರಮದಿಂದ ಆಚರಿಸುತ್ತಿರುವುದು ಸಂತಸ ತಂದಿದೆ. ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಕೊಟ್ಟ ಸಂಸ್ಥೆ ಇದಾಗಿದ್ದು, ಬನಶಂಕರಿ ವಿದ್ಯಾ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮನುಷ್ಯನಿಗೆ ಜ್ಞಾನ ಬಹಳ ಮುಖ್ಯವಾದದ್ದು, ವಿದ್ಯೆ ಜೀವನಕ್ಕೆ ಮೋಕ್ಷವನ್ನು ಕೊಡತಕ್ಕಂತದ್ದು. ಜ್ಞಾನದ ಜ್ಯೋತಿಯನ್ನು ಈ ಸಂಸ್ಥೆ ಬೆಳಗುತ್ತಿದೆ. ನಿರ್ಗತಿಕರ, ಬಡವರ, ದೀನ ದಲಿತರ ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕಾಗಿ ಜೀವನ ಮುಡುಪಿಟ್ಟ ಬಸವರಾಜ ಖೋತ ಅವರಿಗೆ ಶುಭ ಕೋರಿದರು.

ಬನಶಂಕರಿದೇವಿ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಖೋತ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರುವ ಜೂನ್‌ದಿಂದ ಬಿಸಿಎ ಡಿಗ್ರಿ ಕಾಲೇಜು ಪ್ರಾರಂಭವಾಗಲಿದೆ. ಇಲ್ಲಿನ ಬೋಧಕರ ಪ್ರಾಮಾಣಿಕ ಸೇವೆಯಿಂದ ಸಂಸ್ಥೆ ಜಿಲ್ಲೆಯಲ್ಲಿ ೨ನೇ ರ್‍ಯಾಂಕ್ ಪಡೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸಿಬ್ಬಂದಿ ಹಗಲು ರಾತ್ರಿಯನ್ನದೇ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ವಕೀಲ ಎನ್. ಬಿ. ಬನ್ನೂರ ಮಾತನಾಡಿದರು. ಪ್ರಾಚಾರ್ಯ ಸುರೇಶ ಹವಾಲ್ದಾರ ಪ್ರಾಸ್ತಾವಿಕ ನುಡಿ ಹೇಳಿದರು. ಮಕ್ಕಳ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳು ನೆರೆದ ಪಾಲಕರ ಗಮನ ಸೆಳೆದವು. ಇದೇ ವೇಳೆ ಶಿಕ್ಷಣ ಹರಿಕಾರ ಬಸವರಾಜ ಖೋತ ಅವರ ೬೮ನೇ ಹುಟ್ಟುಹಬ್ಬದ ನಿಮಿತ್ತ ಗಣ್ಯರು, ಅಭಿಮಾನಿಗಳು ಶುಭಾಶಯ ಕೋರಿದರು.

ಅತಿಥಿಗಳಾಗಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಐ.ಎಸ್. ಗೋಡಿ, ನಿರ್ದೇಶಕರಾದ ಶೋಭಾ ಖೋತ, ವಿಕ್ರಂಕುಮಾರ ಖೋತ, ವಿಜಯಕುಮಾರ ಖೋತ, ಬಸವರಾಜ ಬಡಿಗೇರ ವೇದಿಕೆ ಮೇಲಿದ್ದರು. ಅನೀಲ ಕೋರಿ ಸ್ವಾಗತಿಸಿದರು. ಸೀತಾ ಜೋಶಿ, ವಿನಯ ಶೀಲವಂತ ನಿರೂಪಿಸಿದರು. ರಿಯಾನಾ ಗಬ್ಬೂರ ವಂದಿಸಿದರು.