ಗೊಂದಲಕ್ಕೆ ಒಳಗಾಗಬೇಡಿ, ಯಶಸ್ವಿ ಚುನಾವಣೆ ನಡೆಸಿ: ಡಿಸಿ ಗಂಗೂಬಾಯಿ

| Published : May 03 2024, 01:02 AM IST

ಗೊಂದಲಕ್ಕೆ ಒಳಗಾಗಬೇಡಿ, ಯಶಸ್ವಿ ಚುನಾವಣೆ ನಡೆಸಿ: ಡಿಸಿ ಗಂಗೂಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮತಗಟ್ಟೆಗಳಲ್ಲಿ ಮತ್ತು ಮತದಾನದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಡಿಸಿ ಗಂಗೂಬಾಯಿ ಮಾನಕರ ತಿಳಿಸಿದರು.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 7ರಂದು ನಡೆಯುವ ಮತದಾನದ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ತರಬೇತಿಯ ಅವಧಿಯಲ್ಲಿ ತಮ್ಮಲ್ಲಿರುವ ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಂಡು, ಮತದಾನದ ಯಾವುದೇ ಗೊಂದಲಗಳಿಗೆ ಒಳಗಾಗದೇ ಅತ್ಯಂತ ಯಶಸ್ವಿಯಾಗಿ ಚುನಾವಣೆ ನಡೆಯುವಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಗಂಗೂಬಾಯಿ ಮಾನಕರ ತಿಳಿಸಿದರು.

ನಗರದ ಸೈಂಟ್ ಮೈಕಲ್ ಶಾಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಗುರುವಾರ ನಡೆದ 2ನೇ ಹಂತದ ತರಬೇತಿ ವೀಕ್ಷಿಸಿ ಮಾತನಾಡಿ, ತರಬೇತಿ ಸಮಯದಲ್ಲಿ ಇವಿಎಂ ಬಳಕೆ, ವಿವಿ ಪ್ಯಾಟ್ ಬಳಕೆ ಸೇರಿದಂತೆ ಮತದಾನ ದಿನದಂದು ಚುನಾವಣಾ ಆಯೋಗದ ನಿರ್ದೇಶನಗಳ ಅನ್ವಯ ನಡೆಯುವ ಎಲ್ಲ ಪ್ರಕ್ರಿಯೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸವಿವರವಾಗಿ ತಿಳಿದುಕೊಳ್ಳಬೇಕು. ಚುನಾವಣಾ ಪ್ರಕ್ರಿಯೆಯ ಯಶಸ್ಸಿಗೆ ಮತಗಟ್ಟೆ ಮಟ್ಟದಲ್ಲಿ ನಡೆಯುವ ಕಾರ್ಯವು ಅತ್ಯಂತ ಪ್ರಮುಖವಾಗಿರುವುದರಿಂದ ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಪರಸ್ಪರ ಸಮನ್ವಯದಿಂದ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ತಮ್ಮ ಕರ್ತವ್ಯ ಕಾರ್ಯನಿರ್ವಹಿಸಬೇಕು ಎಂದರು.

ಮತಗಟ್ಟೆಗಳಲ್ಲಿ ಮತದಾನ ಮಾಡುವ ಸ್ಥಳವನ್ನು ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಸೂಕ್ತ ರೀತಿಯಲ್ಲಿ ಸಿದ್ಧಪಡಿಸಬೇಕು. ಮತಗಟ್ಟೆಗಳಲ್ಲಿ ಮತ್ತು ಮತದಾನದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಬೇಕು.

ಜಿಲ್ಲೆಯಲ್ಲಿ ಮತದಾನ ಪ್ರಮಾಣದ ಹೆಚ್ಚಳಕ್ಕೆ ಜಿಲ್ಲಾಡಳಿತದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಿಂದಾಗಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ಸಾಧ್ಯತೆಯಿದೆ. ಮತ ಚಲಾಯಿಸಲು ಆಗಮಿಸುವ ಮತದಾರರು ತಮ್ಮ ಎಪಿಕ್ ಕಾರ್ಡ್ ಅಥವಾ ಚುನಾವಣಾ ಆಯೋಗ ಸೂಚಿಸಿರುವಂತೆ ಬಳಸಬಹುದಾದ ಪರ್ಯಾಯ ಗುರುತಿನ ದಾಖಲೆಗಳ ಕುರಿತಂತೆ ಎಲ್ಲ ಮತಗಟ್ಟೆ ಅಧಿಕಾರಿಗಳು ಸಮಗ್ರ ಮಾಹಿತಿ ಹೊಂದಿರಬೇಕು. ಮತದಾನದ ಅವಧಿ ಮುಕ್ತಾಯದ ನಂತರವೂ ಸರದಿ ಸಾಲಿನಲ್ಲಿ ಇರುವವರಿಗೆ ಟೋಕನ್‌ಗಳನ್ನು ನೀಡುವ ಮೂಲಕ ಅವರಿಗೆ ಮತದಾನ ಮಾಡಲು ಅವಕಾಶ ನೀಡಬೇಕು ಎಂದು ಸೂಚಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಕಾರವಾರ ತಹಸೀಲ್ದಾರ್ ಪುರಂದರ, ವಿವಿಧ ಸೆಕ್ಟರ್ ಅಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಇದ್ದರು.