ಸಾರಾಂಶ
ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಜೆ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜನಕೆರೆ ಗ್ರಾಮದ ವಿಶೇಷಚೇತನ ಕೀರ್ತನಾ ಹಾಗೂ ಅವರನ್ನು ವಿವಾಹವಾದ ನರಸಿಂಹ ಮೂರ್ತಿ ದಂಪತಿಗಳಿಗೆ 50,000 ರು. ಪ್ರೋತ್ಸಾಹ ಧನದ ಬಾಂಡ್ ಅನ್ನು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಇಒ ರವಿಕುಮಾರ್ ವಿತರಿಸಿದರು.ಈ ವೇಳೆ ಮಾತನಾಡಿದ ಅವರು, ವಿಶೇಷಚೇತನ ಯುವಕ, ಯುವತಿಯರನ್ನು ಸಾಮಾನ್ಯ ವ್ಯಕ್ತಿಗಳು ವಿವಾಹವಾಗುವ ಬಗ್ಗೆ ನಿರ್ಲಕ್ಷ್ಯತೆ ತೋರಬಾರದು. ಇದರಿಂದ ವಿಶೇಷಚೇತನರು ವೈವಾಹಿಕ ಜೀವನದಿಂದ ವಂಚಿತರಾಗದೆ ಸಾಮಾನ್ಯರಂತೆ ವೈವಾಹಿಕ ಜೀವನ ಸಾಗಿಸಬೇಕು ಎಂದರು. ವಿಶೇಷಚೇತನ ಯುವಕ-ಯುವತಿಯರನ್ನು ಸಾಮಾನ್ಯ ವ್ಯಕ್ತಿಗಳು ಮದುವೆಯಾಗುವುದಕ್ಕೆ ಪ್ರೋತ್ಸಾಹ ನೀಡುವುದರಿಂದ ಹೆಚ್ಚು ವಿಕಲಚೇತನರ ವೈವಾಹಿಕ ಜೀವನ ಸುಗುಮವಾಗಿ ನಡೆಸಲು ಅನುಕೂಲವಾಗುತ್ತದೆ. ಸರ್ಕಾರವು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಕ ವಿವಾಹವಾಗುವ ಸಾಮಾನ್ಯ ಯುವಕ/ಯುವತಿಯರಿಗೆ ನಿರಂತರವಾಗಿ ಮಾಸಿಕ ಒಂದಷ್ಟು ಸಹಾಯ ದೊರಕಿಸಲು ವಿಕಲಚೇತನರ ವ್ಯಕ್ತಿಯ ಹೆಸರಿನಲ್ಲಿ 50,000 ರು. ಗಳನ್ನು ಹೂಡಿಕೆಯ ರೂಪದಲ್ಲಿ ಪ್ರೋತ್ಸಾಹ ನೀಡಲು ಹಾಗೂ ಅದರಿಂದ ಬರುವ ಬಡ್ಡಿ ಹಣವನ್ನು ಭತ್ಯೆಯಾಗಿ ಮದುವೆಯಾದ ಸಾಮಾನ್ಯ ವ್ಯಕ್ತಿ ಪಡೆಯಲು ಅನುವಾಗುವಂತೆ ಯೋಜನೆ ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ರಾಘವೇಂದ್ರ, ತಾಪಂ ವ್ಯವಸ್ಥಾಪಕ ಇರ್ಫಾನ್ ಹಾಗೂ ಎಂಆರ್ ಡಬ್ಲೂ ಮೈಲಾರಪ್ಪ ಇದ್ದರು.