ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕಲುಷಿತ ಈ ಸಮಾಜ ಸುಧಾರಣೆಯಾಗಬೇಕಾದರೆ ಯಾವುದು ಸತ್ಯ?, ಯಾವುದು ಅಸತ್ಯ ಎಂಬುವುದನ್ನು ಅವಲೋಕಿಸಿ ನೈಜ ವರದಿ ಮಾಡುವ ಮೂಲಕ ಸರಿಯಾದ ಮಾರ್ಗದಲ್ಲಿ ಚಲಿಸುವಂತೆ ಮಾಡುವುದು ಮಾಧ್ಯಮದ ಕರ್ತವ್ಯವಾಗಿದೆ. ಆದರೆ, ತಪ್ಪು ದಾರಿಯಲ್ಲಿ ನಡೆಯುವವರನ್ನು ಹೀರೊ ಆಗಿ ಬಿಂಬಿಸಲು ಹೊರಟರೇ ನಿಜವಾದ ಮಾಧ್ಯಮದ ಕರ್ತವ್ಯವನ್ನು ಮರೆತಂತಾಗುತ್ತದೆ ಎಂದು ಶಾಸಕ, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಪಟ್ಟಣದ ಟಾಪ್ ಇನ್ ಟೌನ್ ಹಾಲ್‌ನಲ್ಲಿ ಬುಧವಾರ ಕರ್ನಾಟಕ ಮಾಧ್ಯಮ ಒಕ್ಕೂಟ(ರಿ) ವಿಜಯಪುರ ಜಿಲ್ಲಾ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಪ್ಪುದಾರಿಯಲ್ಲಿ ನಡೆಯುವರನ್ನು ಹಿರೋ ಆಗಿ ಹೊರಟರೇ ನಿಜವಾಗಿ ಆ ಗುಣಗಳ ವ್ಯಕ್ತಿ ಬೆಳೆಯಲಿಕ್ಕೆ ಸಾಧ್ಯವಿಲ್ಲ. ದೇಶದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಪತ್ರಿಕಾರಂಗ ಮಾಡ್ತಾಯಿದೆ. ಪ್ರತಿನಿತ್ಯ ಜಗತ್ತಿನಲ್ಲಿ ನಡೆಯುವ ವಿದ್ಯಮಾನವನ್ನುತೋರಿಸುವ ಮೂಲಕ ದೇಶವನ್ನು ಅಭಿವೃದ್ಧಿ ಕಡೆಗೆ ಒಯ್ಯುತ್ತಿದ್ದಾರೆ. ಭಾರತದ ಸಂವಿಧಾನ, ಸಾಮರಸ್ಯವನ್ನು ಕಾಪಡಿಕೊಂಡು ಬರುತ್ತಿರುವುದು ಪತ್ರಿಕೆಯಾಗಿದೆ ಎಂದರು.ನಾನು ಮೊದಲು ಮಂತ್ರಿಯಾದ ಸಂದರ್ಭದಲ್ಲಿ ಪತ್ರಕರ್ತರು ಬಂದರೇ ಮಂತ್ರಿಗಳು ಎದ್ದು ನಿಂತು ಗೌರವ ಕೊಡುತ್ತಿದ್ದರು. ಯಾವುದಾದರು ಸುದ್ದಿ ಬರೆದರೇ ಅದು ಪಾರ್ಲಿಮೆಂಟ್‌ನಲ್ಲಿ ಚರ್ಚೆಯಾಗುತಿತ್ತು. ಆದರೆ, ಈಗ ಅಂತಹ ವಾತಾವರಣವಿಲ್ಲ. ಎಲ್ಲೊ ಒಂದು ಕಡೆ ಪತ್ರಕರ್ತರ ಸಾಮಾಜಿಕ ಕಳಕಳಿ ಕಡಿಮೆಯಾಗುವ ರೀತಿ ಕಾಣಿಸುತ್ತಿದೆ. ಪತ್ರಿಕಾ ಹಾಗೂ ಟಿವಿ ವರದಿಗಾರರಾದರೇ ನಾವು ಯಾವ ರೀತಿ ವರದಿ ಕೊಡಬೇಕು ಎಂದು ತಿಳಿಸಲು ಈಗ ಜರ್ನಲಿಸಂ ಕೋರ್ಸ್‌ಗಳಿಗೆ ಅದನ್ನು ಕಲಿಯಬೇಕು. ಜರ್ನಲಿಸಂ ಕಲಿಯದಿದ್ದರೂ ಪರವಾಗಿಲ್ಲ. ಆದರೆ, ಕನಿಷ್ಠ ಪಕ್ಷ ಸತ್ಯ ಸಂಗತಿಯ ಸುದ್ದಿಗಳನ್ನು ನೀಡುವರಾಗಬೇಕು ಎಂದು ತಿಳಿಸಿದರು.ನ್ಯೂಸ್ 18 ಸುದ್ದಿವಾಹಿನಿಯ ನಿರೂಪಕಿ ನವೀತಾ ಜೈನ ಮಾತನಾಡಿ, ಯಾವುದೇ ಪತ್ರಕರ್ತರಾಗಿರಲಿ ಯಾವುದೇ ಸಂಘದವರಾಗಿರಲಿ ಪತ್ರಕರ್ತರಿಗೆ ಅನ್ಯಾಯವಾದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪತ್ರಕರ್ತರ ರಕ್ಷಣೆಗೆ ನಿಲ್ಲಬೇಕು. ಆಗ ಮಾತ್ರ ಎಲ್ಲ ಪತ್ರಕರ್ತರಿಗೂ ಗೌರವ ಲಭಿಸುತ್ತದೆ. ಇಂದು ಮಾಧ್ಯಮಗಳು ತನಿಖಾ ವರದಿಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲದಿರುವುದು ಕಂಡು ಬರುತ್ತಿದೆ. ಎಲ್ಲ ಮಾಧ್ಯಮಗಳು ಸಹಿತ ನೈಜ ವರದಿಗಾರಿಕೆ ಮತ್ತು ಸಾಮಾಜಿಕ ನ್ಯಾಯ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಬಂದಿವೆಯಾದರೂ ಕೆಲವೊಂದು ಸಲ ತಪ್ಪುಗಳ ಸವಾಲನ್ನೂ ಕೂಡ ಎದುರಿಸಬೇಕಾದ ಪ್ರಸಂಗವೂ ಎದುರಿಸಬೇಕಾಗುತ್ತದೆ ಎಂದರು.ಈ ವೇಳೆ ಪತ್ರಕರ್ತ ದಿ.ನಾಗರಾಜ ಜಮಖಂಡಿ ಸ್ಮರಣಾರ್ಥ ವಿಜಯಪುರ ಪತ್ರಕರ್ತ ಬಸವರಾಜ ಉಳ್ಳಾಗಡ್ಡಿಯವರಿಗೆ ಮಾಧ್ಯಮ ಸಾಧಕ ಪ್ರಶಸ್ತಿ, ಪತ್ರಕರ್ತೆ ನಿರೂಪಕಿ ನವಿತಾ ಜೈನ, ಪತ್ರಕರ್ತರಾದ ಜಗದೀಶ ವೀರಕ್ತಮಠ, ಶ್ರೀಶೈಲ ಬಿರಾದಾರ, ಅಂಬಾಜಿ ಘೋರ್ಪಡೆ, ಬಸವರಾಜ ಕುಂಬಾರ ಅವರಿಗೆ ಮಾಧ್ಯಮ ರತ್ನ, ವಿಜಯಪುರದ ವಿಜಯವಾಣಿಯ ಪುಟ ವಿನ್ಯಾಸಗಾರ ದತ್ತಾತ್ರೇಯ ಕುಲಕರ್ಣಿ ವಿನ್ಯಾಸ ಭೂಷಣ ಪ್ರಶಸ್ತಿ, ಸಚಿನ ಚಲವಾದಿ ಅವರಿಗೆ ಯವರಿಗೆ ಅತ್ಯುತ್ತಮ ಪತ್ರಿಕಾ ವಿತರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ತುಳಸಿಮಾಲಾರವರು, ಸಾಧಕರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ವಿಜಯಪುರ ಅನುಗ್ರಮ ಆಸ್ಪತ್ರೆಯ ನೇತ್ರತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಮಾಜ ಸೇವಕ ಅಯ್ಯೂಬ್ ಮನಿಯಾರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡ ಸಿ.ಬಿ.ಅಸ್ಕಿ, ರಾಯನಗೌಡ ತಾತರಡ್ಡಿ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ, ತಾಲೂಕು ಕಸಾಪ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ, ವೈ.ಎಚ್.ವಿಜಯಕರ, ಸಿಕಂದರ್ ಜಾನ್ವೇಕರ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಒಕ್ಕೂಟದ ಸದಸ್ಯರಾದ ಶ್ರೀಪಾದ ಜಂಬಗಿ, ಯೂನುಸ್ ಮೂಲಿಮನಿ, ಶಿವುಕುಮಾಶರ ಶಾರದಳ್ಳಿ, ಮೌನೇಶ ಸೋನಾರ, ಸಚಿನ ಚಲವವಾದಿ, ಬಸವರಾಜ ಯಂಕಂಚಿ, ಮಹಾಂತೇಶ ಬಿಜ್ಜೂರ, ಚಂದ್ರು ಮೂಕಿಹಾಳ, ಶ್ರೀಶೈಲ ಪೂಜಾರಿ, ಸುರೇಶ ಆಲೂರ ಸೇರಿದಂತೆ ಹಲವರು ಇದ್ದರು. ಸಂಗೀತ ಗವಾಯಿಗಳಾದ ಚಂದ್ರಶೇಖರ ಪತ್ತಾರವರು ಪ್ರಾರ್ಥಿಸಿದರು. ಟಿ.ಡಿ.ಲಮಾಣಿ ಹಾಗೂ ಶ್ರೀಶೈಲ ಹೂಗಾರ ನಿರೂಪಿಸಿದರು. ಕರ್ನಾಟಕ ಮಾಧ್ಯಮ ಒಕ್ಕೂಟದ ತಾಲೂಕು ಅಧ್ಯಕ್ಷ ಪರುಶುರಾಮ ಕೊಣ್ಣೂರ ಸ್ವಾಗತಿಸಿದರು. ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಮಹತ್ವವಿಲ್ಲದ ಸುದ್ದಿಗಳನ್ನು ಇಂದು ಹೆಚ್ಚು ಮಹತ್ವ ನೀಡುತಿದ್ದಾರೆ. ಮಹತ್ವವಿರುವ ಸುದ್ದಿಗಳನ್ನು ಮಹತ್ವವನ್ನೇ ಕೊಡುತ್ತಿಲ್ಲ. ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ. ಆದರೆ, ಅವರು ನಡೆದ ಬಂದ ಹಾದಿ ಮತ್ತು ಸಾಧನೆ ಬಗ್ಗೆ ಚರ್ಚೆ ಮಾಡುವುದಿಲ್ಲ. ಸತ್ಯ ಯಾವುದು ಮತ್ತು ಅಸತ್ಯಯಾವುದು ಎಂದು ತೋರಿಸುವ ಕೆಲಸವಾಗಬೇಕು. ತಪ್ಪುಗಳು ಕಂಡು ಬಂದಾಗ ಅದನ್ನು ವಿರೋಧಿಸಿ ತಿದ್ದುವ ಕೆಲಸ ಮಾಡುವುದರಲ್ಲಿ ಯಾವೂದೇ ತಪ್ಪಿಲ್ಲ. ಆದರೆ, ಸಿಕ್ಕಿದ್ದೇ ಚಾನ್ಸ್‌ಎಂದು ಸತ್ಯವನ್ನು ಮರೆ ಮಾಚಿ ಸುಳ್ಳನ್ನೇ ವೈಭವಿಕರಿಸುವುದು ಸರಿಯಲ್ಲ. ಮನುಷ್ಯನ ಕೈಯಲ್ಲಿ ಯಾವುದು ಇದೆ?, ಯಾವಿದು ಇಲ್ಲವೆಂದು ಅರ್ಥ ಮಾಡಿಕೊಂಡು ಸುದ್ದಿ ಮಾಡಬೇಕು.-ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕರು.
ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಮೂಲಕ ಎಲ್ಲವೂ ಅಂಗೈಯಲ್ಲಿಯೇ ಪ್ರಪಂಚದ ಎಲ್ಲ ಸಮಸ್ಯೆಗಳನ್ನು ಆಗು ಹೋಗುಗಳನ್ನು ತಿಳಿದುಕೊಳ್ಳುವ ಕಾಲಘಟ್ಟದಲ್ಲಿ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವುದೇ ಒಂದು ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕಾಗಿಯೇ ಜನರ ಬೇಡಿಕೆಯಂತೆ ಮಾನದಂಡಗಳ ಆಧಾರದ ಮೇಲೆ ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಅದು ಅನಿವಾರ್ಯವೂ ಕೂಡ ಹೌದು.- ನವೀತಾ ಜೈನ,
ಸುದ್ದಿವಾಹಿನಿಯ ನಿರೂಪಕಿ.