ಸಾರಾಂಶ
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ (ಕೆಎಎಸ್) ಪೂರ್ವಭಾವಿ ಪರೀಕ್ಷೆಯನ್ನು ಕೆಲಸದ ದಿನದಂದು ನಿಗದಿ ಮಾಡಿರುವುದಕ್ಕೆ ಬಿಜೆಪಿ ಸಂಸದ ಪಿ.ಸಿ.ಮೋಹನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ (ಕೆಎಎಸ್) ಪೂರ್ವಭಾವಿ ಪರೀಕ್ಷೆಯನ್ನು ಕೆಲಸದ ದಿನದಂದು ನಿಗದಿ ಮಾಡಿರುವುದಕ್ಕೆ ಬಿಜೆಪಿ ಸಂಸದ ಪಿ.ಸಿ.ಮೋಹನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ 27ರಂದು ಪರೀಕ್ಷೆ ನಿಗದಿ ಮಾಡಲಾಗಿದೆ. ಎರಡು ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವಾಗ ತರಾತುರಿಯಲ್ಲಿ ಪರೀಕ್ಷೆ ನಿಗದಿ ಮಾಡಿದ್ದೇಕೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಎರಡು ಲಕ್ಷ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ. ಆದರೂ ಕೆಲಸದ ದಿನದಂದು ಪರೀಕ್ಷೆ ನಿಗದಿ ಮಾಡಲಾಗಿದೆ. ಕೆಲವು ಅಭ್ಯರ್ಥಿಗಳಿಗೆ 200 ಕಿ.ಮೀ. ದೂರದಲ್ಲಿ ಪರೀಕ್ಷೆ ಕೇಂದ್ರ ನಿಗದಿಪಡಿಸಲಾಗಿದೆ. ಮೈಸೂರಿನ ಅಭ್ಯರ್ಥಿಗೆ ಮಂಡ್ಯದಲ್ಲಿ, ಎಚ್.ಡಿ.ಕೋಟೆಯ ಅಭ್ಯರ್ಥಿಗೆ ಹಾಸನದಲ್ಲಿ, ಗುಂಡ್ಲುಪೇಟೆಯ ಅಭ್ಯರ್ಥಿಗೆ ಚಿಕ್ಕಮಗಳೂರಿನ ಪರೀಕ್ಷಾ ಕೇಂದ್ರ ನೀಡಲಾಗಿದೆ. ಕೆಪಿಎಸ್‌ಸಿಯಲ್ಲಿ ಮೂವರು ಸದಸ್ಯರು ನಿವೃತ್ತರಾಗುತ್ತಿದ್ದು, ಅವರ ಒತ್ತಡದಿಂದಾಗಿ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸುತ್ತಿರುವ ಶಂಕೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸಾಮಾನ್ಯವಾಗಿ ಒಂದು ವಾರ ಮುಂಚೆ ಮುದ್ರಿಸಲಾಗುತ್ತದೆ. ಆದರೆ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಒಂದು ತಿಂಗಳ ಮುಂಚೆಯೇ ಮುದ್ರಿಸಿರುವುದು ಯಾಕೆ ಎಂದು ಕಿಡಿಕಾರಿದ್ದಾರೆ.