ಸಾರಾಂಶ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಪರ ಸಂಘಟನೆಗಳಿಂದ ಬೃಹತ್ ಧರಣಿ ಸತ್ಯಾಗ್ರಹ
ಕನ್ನಡಪ್ರಭ ವಾರ್ತೆ, ಶೃಂಗೇರಿಅಡಕೆ ಹಳದಿ ಎಲೆರೋಗ, ಎಲೆ ಚುಕ್ಕಿ ರೋಗ, ಅತಿವೃಷ್ಠಿ, ಬೆಲೆ ಕುಸಿತ ಇತ್ಯಾದಿ ಸಮಸ್ಯೆಗಳಿಂದ ರೈತರ ಬದುಕು ಶೋಚನೀಯವಾಗಿದೆ. ಸರ್ಕಾರಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ಮುಖಂಡ ಕೆ.ಎಂ.ಗೋಪಾಲ್ ಆರೋಪಿಸಿದರು.
ಶೃಂಗೇರಿ ತಾಲೂಕು ಕಚೇರಿ ಎದುರು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ರೈತರು,ಕಾರ್ಮಿಕರು, ಜನಸಾಮಾನ್ಯರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಯೋಜಿಸಿದ್ದ ಬೃಹತ್ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ರೈತರ ಬದುಕು ಚಿಂತಾಜನಕವಾಗಿದೆ. ಸೆಕ್ಷನ್ 4(1),ಸೆಕ್ಷನ್ 17,ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ ಯಂತಹ ಮಾರಕ ಜನವಿರೋಧಿ ಕಾಯ್ದೆಗಳಿಂದ ರೈತರು, ಜನಸಾಮಾನ್ಯರು ಮನೆ, ಜಮೀನುಗಳನ್ನು ಕಳೆದುಕೊಂಡು ಬೀದಿ ಪಾಲಾಗುವ ದಿನ ದೂರವಿಲ್ಲ. ಮಲೆನಾಡಿನ ಇಂದಿನ ಸಮಸ್ಯೆ ಗಂಭೀರವಾಗಿದೆ. ಇನ್ನಾದರೂ ಮಲೆನಾಡಿಗರು ತಮ್ಮ ಉಳಿವಿಗೆ ಎಚ್ಚೆತ್ತು ಹೋರಾಡಬೇಕಿದೆ ಎಂದರು.ಅರಣ್ಯ,ಕಂದಾಯ ಇಲಾಖೆ ಜಂಟೀ ಸರ್ವೇ ನಡೆಸುತ್ತದೆ ಎಂದು ಹೇಳಿದ್ದರೂ ಈವರೆಗೂ ಸರ್ವೇ ನಡೆದಿಲ್ಲ. ಬಲವಂತವಾಗಿ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ರೈತರ ಬದುಕು ಕಸಿಯುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ನಮ್ಮನ್ನು ರಕ್ಷಣೆ ಮಾಡದ ಕಾನೂನು ನಮ್ಮನ್ನು ಆವರಿಸಿಕೊಂಡಿದೆ. ಇನ್ನೊಂದೆಡೆ ಪ್ರಕೃತಿ ವಿಕೋಪ, ಅತಿವೃಷ್ಠಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ರೈತರನ್ನು ಇನ್ನಷ್ಟು ಶೋಷಣೆ ಮಾಡುತ್ತಿದೆ ಎಂದು ದೂರಿದರು.
ರೈತರ, ಜನಸಾಮಾನ್ಯರ ಹೋರಾಟ ಅನ್ನ ನೀರಿಗಾಗಿ. ಎಲ್ಲವನ್ನು ಕಾನೂನಿನ ಪರಿಮಿತಿಯೊಳಗೆ ನೋಡಿದರೆ, ಜನರು ಬದುಕುವುದಾದರು ಹೇಗೆ. ಮಲೆನಾಡನ್ನು ಇನ್ನೊಂದು ಅಭಯಾರಣ್ಯ ಮಾಡಲು ಹೊರಟಿದ್ದಾರೆ. ಇದೇ ರೀತಿಯಾದರೆ ಮಲೆನಾಡಿ ಗರಿಗೆ ಉಳಿಗಾಲವಿಲ್ಲ. ಚಳುವಳಿಗಳು ವಿಧಾನಸೌಧದವರೆಗೆ ಮುಟ್ಟಬೇಕು ಎಂದು ಹೇಳಿದರು.ಜೆಡಿಎಸ್ ಮುಖಂಡ ಜಿ.ಜಿ. ಮಂಜುನಾಥ್ ಮಾತನಾಡಿ ಸರ್ಕಾರ ರೈತರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಹಿಡಿಯುವ ಬದಲು ಗೊಂದಲ ಹುಟ್ಟಿಸುತ್ತಿದೆ. ಸರ್ಕಾರಗಳದ್ದು 5 ವರ್ಷಗಳ ದೊಂಬರಾಟದ ಯೋಜನೆ ಯಾಗಿವೆ. 5 ವರ್ಷಕ್ಕೊಮ್ಮೆ ಸರ್ಕಾರ ಫಾರಂ 53,57,53 ಅರ್ಜಿ, ಮುಂದೆ ಫಾರಂ 60 ಹೀಗೆ ಅಂಕೆಗಳಿಗೊಂದು ಅರ್ಜಿ ಯೋಜನೆಗಳಾಗಿವೆ. ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಜನಪ್ರತಿನಿಧಿಗಳು ಗೆಲ್ಲುವವರೆಗೆ ಮಾತ್ರ ಭರವಸೆ ನಂತರ ತಮ್ಮ ಅಧಿಕಾರ, ಮಂತ್ರಿಗಿರಿ ಓಡಾಟ, ಅಧಿಕಾರಿಗಳದ್ದು ಹಣ ಗಳಿಸುವ ಗೀಳು. ಆದರೆ ಜನ ಸಾಮಾನ್ಯರು,ರೈತರು ಮಾತ್ರ ನಿರಂತರ ಶೋಷಣೆಗೆ ಗುರಿಯಾಗುತ್ತಲೇ ಬರುತ್ತಿದ್ದಾರೆ. ಹೋರಾಟ ನಡೆಸದಿದ್ದರೆ ಉಳಿಗಾಲವಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ನಟರಾಜ್ ಮಾತನಾಡಿ ದೇಶದಲ್ಲಿಲ್ಲದ ಕಾನೂನು ಕಾಯ್ದೆಗಳು ಶೃಂಗೇರಿಯಲ್ಲಿದೆ. ಶೃಂಗೇರಿಯಲ್ಲಿರುವ ಕಾನೂನುಗಳು ದೇಶದಲ್ಲಿಲ್ಲ. ತಾಲೂಕಿನಲ್ಲಿ ದೊಡ್ಡ ಸಮಸ್ಯೆ ಉಂಟಾಗಿದೆ. ಕೇಂದ್ರ,ರಾಜ್ಯ ಸರ್ಕಾರ ರೈತರ,ಜನರ ಸಮಸ್ಯೆ ಯತ್ತ ಕಣ್ತೆರೆಯುವ ಆಶಾ ಭಾವನೆಯಿದೆ. ಕಾನೂನುಗಳು ಬೇಕು. ಆದರೆ ಜನ ವಿರೋಧಿ, ಮಾರಕ ಕಾನೂನುಗಳು ಬೇಡ ಎಂದರು.ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಲು ಅಧಿಕಾರಿಗಳು ಬರುವಂತೆ ಒತ್ತಾಯಿಸಿದರು.ನಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸ್ಥಳದಲ್ಲಿ ತಹಸೀಲ್ದಾರ್ ಅನೂಪ್ ಸಂಜೋಗ್, ಕಂದಾಯ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಇದಕ್ಕೂ ಮೊದಲು ಪಟ್ಟಣದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ತಾಲೂಕು ಕಚೇರಿ ಎದುರು ಸಮಾವೇಶಗೊಂಡಿತು.
ಬಿಜೆಪಿ ಮುಖಂಡ ತಲಗಾರು ಉಮೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕಾನೊಳ್ಳಿ ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿಸಿ ಶಂಕರಪ್ಪ, ಜಿಪಂ ಮಾಜಿ ಸದಸ್ಯೆ ಶಿಲ್ಪ ರವಿ ಮತ್ತಿತರರು ಮಾತನಾಡಿದರು. ಕೆಳವಳಿ ಗುಂಡಪ್ಪ, ಪೂರ್ಣೇಶ್, ಶ್ರೀನಿವಾಸ್,ರೈತ ಸಂಘದ ಪದಾದಿಕಾರಿಗಳು ಇದ್ದರು.20 ಶ್ರೀ ಚಿತ್ರ 1-
ಶೃಂಗೇರಿ ತಾಲೂಕು ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ರೈತಪರ ಸಂಘಟನೆಗಳು ಬೃಹತ್ ಧರಣಿ ಸತ್ಯಾಗ್ರ ನಡೆಸಿದರು.20 ಶ್ರೀ ಚಿತ್ರ 2-
ಶೃಂಗೇರಿ ತಾಲೂಕು ಕಚೇರಿ ಎದರು ಧರಣಿ ನಿರತ ಪ್ರತಿಭಟನಾ ಕಾರರು ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.