ಸಾಲದಿಂದ ಐಸ್‌ಕ್ರೀಂ ಘಟಕದ ಸ್ಥಾಪನೆ ಬೇಡ

| Published : May 17 2025, 02:07 AM IST

ಸಾರಾಂಶ

ಚಾಮರಾಜನಗರದಲ್ಲಿ ಚಾಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ವೈ.ಸಿ.ನಾಗೆಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

50 ಕೋಟಿ ಸಾಲ ಮಾಡಿ ಐಸ್‌ಕ್ರೀಂ ಘಟಕ ತೆರೆದು ಹಾಲು ಉತ್ಪಾದಕರ ಮೇಲೆ ಹೊರೆ ಮಾಡುವುದು ಸರಿಯಲ್ಲ, ಇದರ ಅವಶ್ಯಕತೆಯು ಇಲ್ಲ ಎಂದು ಚಾಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ವೈ.ಸಿ.ನಾಗೆಂದ್ರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿಯೇ ಐಸ್‌ಕ್ರೀಂ ಘಟಕ ತೆರೆಯಲು ಸರ್ವಸದಸ್ಯರ ಸಭೆ ತೀರ್ಮಾನಿಸಿದ್ದು ನಿಜ, ಆಗ ಕೆಎಂಎಫ್‌ನಿಂದ 10 ಕೋಟಿ, ಕೇಂದ್ರ ಸರ್ಕಾರದ 10 ಕೋಟಿ ಅನುದಾನ, ಬಡ್ಡಿ ರಹಿತ ಸಾಲ 10 ಕೋಟಿ ಸಿಗುತ್ತದೆ ಎಂದು ಹೇಳಿದ್ದರು. ಆದರೆ ನಂತರ ಚಾಮುಲ್ ವ್ಯವಸ್ಥಾಪಕರು ಕೆಎಂಎಫ್‌ನಿಂದ 5 ಕೋಟಿ, ಕೇಂದ್ರ ಸರ್ಕಾರದಿಂದ 5 ಕೋಟಿ ಮಾತ್ರ ಸಿಗುತ್ತದೆ ಎಂದರು. ಆದ್ದರಿಂದ ಸಾಲ ಮಾಡಿ ಘಟಕ ಬೇಡ ಎಂದರು. ಮಹಾಮಂಡಲದ ಹೊಸ ವ್ಯವಸ್ಥಾಪಕರು ಸಹ ಒಪ್ಪಿಗೆ ಸೂಚನೆ ನೀಡಲಿಲ್ಲ. ನಾನು ಒಪ್ಪಿಕೊಂಡಿದ್ದು ಸತ್ಯ. ಆದರೆ, ಕೇಂದ್ರ ಮತ್ತು ಮಹಾಮಂಡಲದಿಂದ ನಿರೀಕ್ಷಿತ ಅನುದಾನ ಸಿಗಲಿಲ್ಲ ಎಂದರು.

ಅಭಿವೃದ್ಧಿ ಹೆಸರಿನಲ್ಲಿ ಸಾಲ ಮಾಡಿ ಐಸ್‌ಕ್ರೀಂ ಘಟಕ ತೆರೆದರೆ ಅದು ಹಾಲು ಉತ್ಪಾದಕರಿಗೆ ಹೊರೆಯಾಗುತ್ತದೆ, ಈಗಾಗಲೇ ಚಾಮುಲ್‌ಗೆ 24 ಕೋಟಿ ಸಾಲ ಇದೆ. ಮತ್ತೆ 50 ಕೋಟಿ ಖರ್ಚಾದರೆ ಒಕ್ಕೂಟದ ಪರಿಸ್ಥಿತಿ ಏನಾಗಬೇಕು, ರೈತರ ಭವಿಷ್ಯದ ಬಗ್ಗೆ ಚೆಲ್ಲಾಟವಾಡಬಾರದು ಎಂದರು.ಒಕ್ಕೂಟದ ಸ್ಥಾಪನೆಗೆ ಮಾಡಿದ ಸಾಲವೇ ತೀರಿಸಿಲ್ಲ. ಮಾರುಕಟ್ಟೆ ವ್ಯವಸ್ಥೆ ಇನ್ನೂ ಸುಧಾರಣೆಯಾಗಬೇಕಿದೆ. ಮೂಲ ಬಂಡವಾಳ ಇಲ್ಲದೆ ಹೊಸದಾಗಿ ಐಸ್ ಕ್ರಿಂ ಘಟಕ ಸ್ದಾಪನೆ ಮಾಡಬೇಕಾದರೆ 50 ಕೋಟಿ ಸಾಲ ಮಾಡಬೇಕಾಗುತ್ತದೆ, ಆಡಳಿತ ಮಂಡಳಿ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಸಾಲಕ್ಕೆ ಹೋಗಿರುವುದು ಸರಿಯಲ್ಲ, ಇದನ್ನು ನಾನು ಸೇರಿದಂತೆ ಜಿಲ್ಲೆಯ ಹಾಲು ಉತ್ಪಾದಕ ಸಹಕಾರ ಸಂಘಗಳು ಖಂಡಿಸುತ್ತದೆ, ಐಸ್‌ಕ್ರೀಂ ಘಟಕ ವಿರೋಧಿಸಿ ಮೇ 27 ರಂದು ರೈತ ಸಂಘದವರು ನಡೆಸುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲಿವಿದೆ ಎಂದರು.ರಾಜ್ಯ ಸರ್ಕಾರ ಬಾಕಿ 50 ಕೋಟಿ ಹಣ ನೀಡಿಲ್ಲ, ಇದರತ್ತ ಗಮನಹರಿಸಲಿ, ಮೈಮುಲ್ ವಿಭಜನೆ ಮಾಡಿದಾಗ 60:40 ಅನುಪಾತದಲ್ಲಿ ಮಾರುಕಟ್ಟೆ ಹಂಚಿಕೆಯಾಗಿತ್ತು. ಆದರೆ, ಇದುವರಗೆ ಮಾರುಕಟ್ಟೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೇಂದ್ರಸ್ಥಾನದಲ್ಲಿ ಅಧಿಕಾರಿಗಳು ಉಳಿದು ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಆರೋಪಿಸಿದರು.ಹಾಲಿನ ದರ ಇಳಿಸಿ ಬಂದ ಲಾಭವನ್ನು ನೌಕರರು ಬೋನಸ್ ಪಡೆದರು. ಇದನ್ನು ಉತ್ಪಾದಕರಿಗೆ ನೀಡಬೇಕಿತ್ತು. ಖಾಸಗಿ ಡೈರಿಗಳಿಗೆ ತಡೆವೊಡ್ಡುವಲ್ಲಿ ಚಾಮುಲ್ ಸಂಪೂರ್ಣ ವಿಫಲವಾಗಿದೆ, ಉಲ್ಲಾಸ್ ಗುಲ್ಲಾ 1 ಕೆಜಿ ಮಾರಾಟವಾಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುವ ಗೋಜಿಗೆ ಹೋಗಿಲ್ಲ ಎಂದರು. ಅಧ್ಯಕ್ಷರಿಗೆ ಏಕಾಂಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ, ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಬೇಕು, ಉತ್ಪಾದಕರ ಹಿತದೃಷ್ಟಿಯಿಂದ 27 ರಂದು ನಡೆಯುವ ರೈತ ಸಂಘಟನೆಯ ಚಳುವಳಿಯನ್ನು ನಾವು ಸ್ವಾಗತಿಸಿ ಬೆಂಬಲಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುದೇರು ಕೆಎನ್ ಫಣಿರಾಜಮೂರ್ತಿ, ಹಳ್ಳಿಕರೆಹುಂಡಿ ಶಿವಸ್ವಾಮಿ, ಟಿ. ಹೊಸೂರು ರಾಜಣ್ಣ, ಗೌಡಳ್ಳಿ ಜಿ.ವಿ.ಮಹದೇವಸ್ವಾಮಿ, ಬೂದಿತಿಟ್ಟು ನಾಗರಾಜು ಇದ್ದರು.