ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸೌರಮಂಡಲದಲ್ಲಿ ಲಕ್ಷಾಂತರ ಗ್ರಹಗಳು, ನಕ್ಷತ್ರಗಳಿದ್ದರೂ ಮನುಷ್ಯ ವಾಸವಿರುವುದು ಭೂಮಿಯೊಂದೇ. ಇದನ್ನು ನಾವೇ ನಮ್ಮ ಕೈಯಾರೆ ಸ್ವಯಂಕೃತ ತಪ್ಪುಗಳಿಂದ ಹಾಳು ಮಾಡುವುದು ಬೇಡ ಎಂದು ಸಂತ ಕನಕದಾಸ ಶಾಲೆಯ ಕಾರ್ಯದರ್ಶಿ ಬಿ.ಎಸ್.ಮೇಟಿ ಹೇಳಿದರು.ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಶನಿವಾರ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಪಟಾಕಿ ಬೇಡ, ದೀಪ ಬೆಳಗೋಣ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಸಿರು ತೋರಣ ಬಳಗದ ಸದಸ್ಯರು ಪರಿಸರ ಸಂರಕ್ಷಣೆ ಕುರಿತು ನಿರಂತರವಾಗಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದ ಅವರು, ಪಟಾಕಿ ಹೊಡೆಯುವುದಿಲ್ಲ. ಅದರ ಬದಲಿಗೆ ದೀಪಗಳನ್ನು ಹಚ್ಚುತ್ತೇವೆ ಎಂದು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ವೀರೇಶ ಇಟಗಿ, ದೊಡ್ಡ ಶಬ್ದ ಮಾಡುವ ಪಟಾಕಿಗಳಿಂದ ಮನುಷ್ಯನಿಗೆ, ಪ್ರಾಣಿ, ಪಕ್ಷಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಪಟಾಕಿಗಳಿಂದ ಹೊರಹೊಮ್ಮುವ ವಿಷಾನಿಲಗಳು ಶ್ವಾಸಕೋಶದ ರೋಗಗಳು ಮತ್ತು ಕ್ಯಾನ್ಸರ್‌ನಂತಹ ಗಂಭೀರ ಖಾಯಿಲೆಗಳು ಬರುತ್ತವೆ. ಜೊತೆಗೆ ಮಕ್ಕಳು ಪಟಾಕಿ ಹೊಡೆಯುವ ಸಮಯದಲ್ಲಿ ಕೈ, ಕಣ್ಣು ಸೇರಿದಂತೆ ಜೀವ ಕಳೆದುಕೊಂಡ ಘಟನೆಗಳನ್ನು ನೋಡುತ್ತಿದ್ದೇವೆ. ಇದು ತಪ್ಪಬೇಕೆಂದರೆ ಪಟಾಕಿ ಹೊಡೆಯುವ ಬಗ್ಗೆ, ಅದರ ಅಪಾಯಗಳ ಬಗ್ಗೆ ಅರಿಯಬೇಕು ಎಂದು ಕಿವಿಮಾತು ಹೇಳಿದರು.ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಪಟಾಕಿ ಸಿಡಿಸುವುದು ಎಂದರೆ ಶ್ರಮಪಟ್ಟು ದುಡಿದ ಲಕ್ಷಾಂತರ ಹಣಕ್ಕೆ ಬೆಂಕಿ ಹಚ್ಚುವುದಕ್ಕೆ ಸಮ. ಈ ಭೂಮಿಯ ಮೇಲೆ ಬದುಕುವ ಹಕ್ಕು ನಮಗಿರುವಷ್ಟೇ ಪ್ರಾಣಿ, ಪಕ್ಷಿಗಳಿಗೂ ಇದೆ. ನಮ್ಮ ಆಸೆ ಆಕಾಂಕ್ಷಿಗಳನ್ನು ನಿಯಂತ್ರಿಸುವ ಕೆಲಸ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕುರುಬರ ಸಂಘದ ನಿರ್ದೇಶಕ ನಾಗಪ್ಪ ರೂಢಗಿ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ವೀರಶೈವ ಮಹಾಸಭಾ ಅಧ್ಯಕ್ಷ ವೆಂಕನಗೌಡ ಪಾಟೀಲ, ಸದಸ್ಯರಾದ ಸುರೇಶ ಕಲಾಲ, ಸೋಮಶೇಖರ ಚೀರಲದಿನ್ನಿ, ಪ್ರೌಢಶಾಲೆಯ ಮುಖ್ಯ ಗುರು ಬಿ.ಎಸ್.ಫಣೇದಕಟ್ಟಿ, ಶಿಕ್ಷಕರಾದ ಆರ್.ಜಿ.ಮೆಣಸಗಿ, ಎಸ್.ಎನ್.ಸಜ್ಜನ, ಆರ್.ವೈ.ಪಾಟೀಲ, ಆರ್.ಎಸ್.ವಾಲಿಕಾರ, ಲಕ್ಷ್ಮೀ ಗುಬಚಿ, ಲತಾ ಮೇಟಿ, ಬಸಮ್ಮ ಬರದೇನಾಳ, ಜಿ.ಎಂ.ಹುಲಗಣ್ಣಿ, ಮತ್ತಿತರರು ಇದ್ದರು.ಮಾಣಿಕ್ಯಮ್ಮ ತಡಸದ ಪ್ರಾರ್ಥಿಸಿದರು. ಮುಖ್ಯ ಗುರುಗಳಾದ ಎಂ.ಎನ್.ಯರಝರಿ ಸ್ವಾಗತಿಸಿದರು. ಎಂ.ಸಿ.ಕಬಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಹೂಗಾರ ನಿರೂಪಿಸಿ, ವಂದಿಸಿದರು.-----------
ಕೋಟ್.....ದೊಡ್ಡ ಪಟಾಕಿಗಳಿಂದ ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಬಹಳ ತೊಂದರೆ. ಪಟಾಕಿಗಳಿಂದ ಹೊರಹೊಮ್ಮುವ ವಿಷಾನಿಲಗಳು ಶ್ವಾಸಕೋಶದ ರೋಗಗಳು ಮತ್ತು ಕ್ಯಾನ್ಸರ್‌ನಂತಹ ಗಂಭೀರ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಜೊತೆಗೆ ಮಕ್ಕಳು ಪಟಾಕಿ ಹೊಡೆಯುವ ವೇಳೆ ಕೈ, ಕಣ್ಣು ಸೇರಿದಂತೆ ಜೀವ ಕಳೆದುಕೊಂಡ ಘಟನೆಗಳನ್ನು ನೋಡಿದ್ದೇವೆ. ಅದರ ಅಪಾಯಗಳ ಬಗ್ಗೆ ಅರಿಯಬೇಕು.
- ಡಾ.ವೀರೇಶ ಇಟಗಿ, ವೈದ್ಯ