ಹಲಾಲ್‌ ಬಜೆಟ್‌ ಅನ್ನೋರಿಗೆ ‘ಸಬ್‌ಕಾ ವಿಕಾಸ್‌’ ಬೇಡವೇ?: ಹರೀಶ್‌ ಕುಮಾರ್‌

| Published : Mar 23 2025, 01:32 AM IST

ಹಲಾಲ್‌ ಬಜೆಟ್‌ ಅನ್ನೋರಿಗೆ ‘ಸಬ್‌ಕಾ ವಿಕಾಸ್‌’ ಬೇಡವೇ?: ಹರೀಶ್‌ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಬಜೆಟ್‌ನ ಒಟ್ಟು 4 ಲಕ್ಷ ರು.ಗಳಲ್ಲಿ ಶೇ.1ರಷ್ಟನ್ನು ಮಾತ್ರ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಲಾಗಿದೆ. ಮುಸ್ಲಿಮರೂ ಸೇರಿದಂತೆ ಅನೇಕ ಧರ್ಮಗಳನ್ನೊಳಗೊಂಡ ಅಲ್ಪಸಂಖ್ಯಾತರು ದೇಶದ ಒಟ್ಟು ಜನಸಂಖ್ಯೆಯ ಶೇ.15ರಿಂದ 20ರಷ್ಟಿದ್ದು, ದೇಶದ ಆರ್ಥಿಕ ಶಕ್ತಿ ಹೆಚ್ಚಿಸಲು ಅವರೂ ಕಾರಣಕರ್ತರಾಗಿದ್ದಾರೆ. ಹೀಗಿರುವಾಗ ಶೇ.1ರಷ್ಟು ಅನುದಾನವನ್ನು ಅವರಿಗೆ ನೀಡಬಾರದಾ ಎಂದು ಹರೀಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯ ಸರ್ಕಾರದ ಬಜೆಟ್‌ನ್ನು ಹಲಾಲ್‌ ಬಜೆಟ್‌ ಎಂದು ಟೀಕಿಸುವ ಮೂಲಕ ಬಿಜೆಪಿ ದ್ವೇಷ ರಾಜಕೀಯ ಮಾಡುತ್ತಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ. ಅದನ್ನೇ ನಾವು ಬಜೆಟ್‌ ಮೂಲಕ ಅನುಷ್ಠಾನ ಮಾಡಿದರೆ ವಿರೋಧ ಏಕೆ ಮಾಡುತ್ತೀರಿ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ಮಾಜಿ ಎಂಎಲ್ಸಿ ಹರೀಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಜೆಟ್‌ನ ಒಟ್ಟು 4 ಲಕ್ಷ ರು.ಗಳಲ್ಲಿ ಶೇ.1ರಷ್ಟನ್ನು ಮಾತ್ರ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಲಾಗಿದೆ. ಮುಸ್ಲಿಮರೂ ಸೇರಿದಂತೆ ಅನೇಕ ಧರ್ಮಗಳನ್ನೊಳಗೊಂಡ ಅಲ್ಪಸಂಖ್ಯಾತರು ದೇಶದ ಒಟ್ಟು ಜನಸಂಖ್ಯೆಯ ಶೇ.15ರಿಂದ 20ರಷ್ಟಿದ್ದು, ದೇಶದ ಆರ್ಥಿಕ ಶಕ್ತಿ ಹೆಚ್ಚಿಸಲು ಅವರೂ ಕಾರಣಕರ್ತರಾಗಿದ್ದಾರೆ. ಹೀಗಿರುವಾಗ ಶೇ.1ರಷ್ಟು ಅನುದಾನವನ್ನು ಅವರಿಗೆ ನೀಡಬಾರದಾ ಎಂದರು.

ಬಿಜೆಪಿಯವರಿಗೆ ಒಂದೇ ಧರ್ಮದ ಮೇಲೆ ದ್ವೇಷ ಏಕೆ? ಸಬ್‌ ಕಾ ವಿಶ್ವಾಸ್‌ ಎಂದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕೋ ಬೇಡವೋ? ಎಂದು ಹರೀಶ್‌ ಕುಮಾರ್‌ ಹೇಳಿದರು.ಬಿಜೆಪಿ ವಿರುದ್ಧ ಎಸ್‌ಡಿಪಿಐ ಹೋರಾಟ ಏಕಿಲ್ಲ?:

ಕೇಂದ್ರ ಬಿಜೆಪಿ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಎಸ್‌ಡಿಪಿಐ ಪಕ್ಷ ಕಾಂಗ್ರೆಸ್‌ ವಿರುದ್ಧ ಹೋರಾಟ ನಡೆಸುತ್ತಿದೆ. ವಕ್ಫ್‌ ತಿದ್ದುಪಡಿ ಮಸೂದೆ ತಂದಿರೋದು ಬಿಜೆಪಿ ಸರ್ಕಾರ. ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ ಯಾಕಪ್ಪ? ಎಸ್‌ಡಿಪಿಐನವರಿಗೆ ತಾಕತ್ತಿದ್ದರೆ ಬಿಜೆಪಿ ವಿರುದ್ಧ ಹೋರಾಟ ಮಾಡಲಿ ಎಂದು ಹರೀಶ್‌ ಕುಮಾರ್‌ ಲೇವಡಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌., ಮುಖಂಡರಾದ ಶುಭೋದಯ ಆಳ್ವ, ವಿಕಾಸ್‌ ಶೆಟ್ಟಿ, ನೀರಜ್‌ಪಾಲ್‌, ಅಭಿಲಾಷ್‌ ಇದ್ದರು.-------------ಶಾಸಕರಿಗೆ ವರ್ತನೆಯ ಕನಿಷ್ಠ ಜ್ಞಾನ ಇರಲಿ: ಪದ್ಮರಾಜ್‌

ವಿಧಾನಸಭೆ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿ ಸ್ಪೀಕರ್‌ ಪೀಠಕ್ಕೆ ಅಗೌರವ ತೋರಿದ ಕರಾವಳಿಯ ಮೂವರು ಶಾಸಕರು ಸೇರಿದಂತೆ 18 ಶಾಸಕರನ್ನು ಸಸ್ಪೆಂಡ್‌ ಮಾಡಲಾಗಿದೆ. ಜನಪ್ರತಿನಿಧಿಗಳಾದವರಿಗೆ ತಮ್ಮ ವರ್ತನೆ, ಆದ್ಯತೆ ಹೇಗಿರಬೇಕು ಎನ್ನುವ ಕನಿಷ್ಠ ಜ್ಞಾನ ಇರಬೇಕು. ಜನರ ಸಮಸ್ಯೆ ಪರಿಹಾರಕ್ಕೆ ಯತ್ನಿಸುವುದು ಬಿಟ್ಟು ಜವಾಬ್ದಾರಿ ಮರೆತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್. ಆಕ್ಷೇಪಿಸಿದರು.