ಸುಳ್ಳು ಹೇಳುವ ಪಕ್ಷಕ್ಕೆ ಮತ ನೀಡಬೇಡಿ: ಯತೀಂದ್ರ

| Published : May 01 2024, 01:15 AM IST

ಸಾರಾಂಶ

ಸುರಪುರದಲ್ಲಿ ರಾಯಚೂರು ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದದುಪ ಚುನಾವಣಾ ಕಾಂಗ್ರೆಸ್‌ ಅಭ್ಯರ್ಥಿ ಪರ ಯತೀಂದ್ರ ಸಿದ್ದರಾಮಯ್ಯ ಬೃಹತ್ ರೋಡ್ ಶೋ ಮೂಲಕ ಪ್ರಚಾರ

ಕನ್ನಡಪ್ರಭ ವಾರ್ತೆ ಸುರಪುರ

ಸುಳ್ಳು ಹೇಳುವ ಪಕ್ಷಕ್ಕೆ ಮತ ನೀಡಬೇಡಿ. ಕಾಂಗ್ರೆಸ್ ಪಕ್ಷ ಜನ ಪರವಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ನುಡಿದಂತೆ ನಡೆದಿದೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ರಾಯಚೂರ ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಮತಕ್ಷೇತ್ರದ ಉಪಚುನಾಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಜಿ. ಕುಮಾರನಾಯಕ ಮತ್ತು ರಾಜಾ ವೇಣುಗೋಪಾಲ ನಾಯಕರ ಪರವಾಗಿ ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ರೋಡ್ ಶೋ ಬಳಿಕ ಮಂಜಲಾಪುರ ಗ್ರಾಮದಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರಕಾರದ ಅವಧಿಯಲ್ಲಿ ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ. ಕೇಂದ್ರದ ಬಿಜೆಪಿ ಸರಕಾರ ಪೆಟ್ರೋಲ್, ಡಿಸೇಲ್, ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದ ಪರಿಣಾಮ ಬಡವರು ಕಷ್ಟದಲ್ಲಿ ಬದುಕು ಸಾಗಿಸುವಂತಾಗಿದೆ ಎಂದರು.

ಕಾಂಗ್ರೆಸ್ ಸರಕಾರ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಅದರಿಂದ ಬಂದ ತೆರಿಗೆಯನ್ನು ಬಡವರಿಗೆ ಹಂಚುತ್ತಿತ್ತು. ಆದರೆ, ಮೋದಿ ಸರಕಾರ ಬಡವರ ತಿನ್ನುವ ವಸ್ತುಗಳ ಮೇಲೆ ಬೆಲೆಯೇರಿಕೆ ಮಾಡಿ ಶ್ರೀಮಂತರಿಗೆ ತೆರಿಗೆ ಕನಿಷ್ಠ ಮಟ್ಟಕ್ಕೆ ಇಳಿಸಿ ಉಳ್ಳವರಿಗೆ ಅನುಕೂಲ ಮಾಡಿಕೊಟ್ಟಿದೆ. ಬಡವರ ದುಡ್ಡನ್ನು ಕಿತ್ತುಕೊಂಡು ಶ್ರೀಮಂತರಿಗೆ ನೀಡಿದೆ. ಬಡವರ ವಿರೋಧವಾಗಿರುವ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸಿ ಎಂದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದಂತೆ ,ಕೇಂದ್ರದಲ್ಲಿಯೂ ಸಹಿತ ಮಹಾಲಕ್ಷ್ಮಿ ಯೋಜನೆ ಅನುಷ್ಠಾನಗೊಳಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಲಾಗುತ್ತದೆ. ದುಡಿಯುವ ಕೈಗಳಿಗೆ ಉದ್ಯೋಗ, ರೈತರ ಸಾಲಮನ್ನಾ ಸೇರಿದಂತೆ ಸೇರಿದಂತೆ ಹಲವಾರು ಯೋಜನೆಗಳನ್ನು ಘೋಷಿಸಿದೆ. ಜನರ ಪರವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಮತಚಲಾಯಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ನಮ್ಮ ತಂದೆ, ತಾತನವರು ರಾಜಕೀಯವಾಗಿ ಸೇವೆ ಮಾಡಿದ್ದಾರೆ. ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸಲು ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಇದ್ದರು.

ಪ್ರಪಂಚದಲ್ಲೇ ಅತ್ಯಂತ ದೊಡ್ಡ ಲೈಂಗಿಕ ದೌರ್ಜನ್ಯದ ಪ್ರಕರಣ:

ಬಿಜೆಪಿಗೆ ನೊಂದ ಮಹಿಳೆಯರ ಬಗ್ಗೆ ಅತೀವ ಕಾಳಜಿ ಇದ್ದದ್ದರೆ, ವಿಕೃತಿ ಕಾಮಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಟಿಕೆಟ್ ಕೊಡಬಾರದಿತ್ತು. ತಿಳಿದಿದ್ದೂ ಸಹ, ಜೆಡಿಎಸ್ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಟಿಕೆಟ್ ಕೊಟ್ಟಿರುವುದರಿಂದ ಅದರ ತಪ್ಪಿನ ಭಾಗ ಹಾಗೂ ಹೊಣೆಗಾರಿಕೆ ಬಿಜೆಪಿಯವರು ಹೊರಬೇಕು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಲೈಂಗಿಕ ದೌರ್ಜನ್ಯದ ಪ್ರಕರಣವಾಗಿದ್ದು, ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಸಂತ್ರಸ್ತರಾಗಿದ್ದಾರೆ. ಪೆನ್‌ಡ್ರೈವ್‌ನಲ್ಲಿ 2900ಕ್ಕೂ ಹೆಚ್ಚು ವೀಡಿಯೋಗಳು ಇದಾವೆ ಅಂತ ಹೇಳ್ತಿದ್ದಾರೆ. ಸತ್ಯ ಶೀಘ್ರದಲ್ಲೇ ಹೊರಬರಲಿದೆ ಎಂದರು.

ಈ ಹಿಂದೆ ಅವರದೇ ಪಕ್ಷದ ದೇವರಾಜೇಗೌಡ ಅವರು ಗೃಹ ಸಚಿವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬಾರದು, ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಬೇಡವೇ ಬೇಡ ಅಂತ ಪತ್ರ ಬರೆದಿದ್ದರು. ಬಿಜೆಪಿ ಅದಕ್ಕೆ ಸೊಪ್ಪೇ ಹಾಕಲಿಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಒಬ್ಬ ವಿಕೃತ ಕಾಮಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರಕಾರವೂ (ಎಸ್‌ಐಟಿ) ವಿಶೇಷ ತನಿಖಾ ತಂಡಕ್ಕೆ ಎಲ್ಲ ಅಧಿಕಾರ ಇರುತ್ತದೆ. ಆರೋಪಿ ಮೇಲೆ ಏನೇನು ಕ್ರಮ ತಗೆದುಕೊಳ್ಳಬಹುದು ಅದನ್ನೆಲ್ಲಾ ತೆಗೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರ ನಿಜವಾಗಿ ಕರ್ನಾಟಕದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು ಎಂಬ ಉದ್ದೇಶವಿದ್ದರೆ ಅವರು ಕೂಡ ಸಹಕಾರ ನೀಡಬೇಕು.

ದೇಶ ಬಿಟ್ಟು ಓಡಿ ಹೋಗಿರುವ ಪ್ರಜ್ವಲ ರೇವಣ್ಣರನ್ನು ವಾಪಸ್ ಕರೆ ತರುವ ಕೆಲಸ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಇದರಲ್ಲಿ ದಿಟ್ಟತನ ಮೆರೆಯಲಿ. ಇಂತ ವಿಚಾರದಲ್ಲಿ ಯಾವುದೇ ರಾಜಕೀಯ ಷಡ್ಯಂತ್ರ ಇಲ್ಲ. ನೂರಾರು ಮಹಿಳೆಯರು ಇದರಲ್ಲಿ ಸಂತ್ರಸ್ಥೆಯರಾಗಿದ್ದಾರೆ. ನೂರಾರು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದ ಹೊರಗೆ ಬಂದಿರುವುದರಿಂದ ಇದನ್ನು ಮಹಿಳಾ ಆಯೋಗ ಗಂಭೀರ ತೆಗೆದುಕೊಂಡಿದೆ ಎಂದು ತಿಳಿಸಿದರು.

ಮಹಿಳಾ ಆಯೋಗದವರು ಸರ್ಕಾರಕ್ಕೆ ಪತ್ರ ಬರೆದ ಮೇಲೆ ಎಸ್‌ಐಟಿಗೆ ವಹಿಸಿದೆ. ಒಬ್ಬ ಸಂತ್ರಸ್ತೆ ತಾಯಿ, ಮಗಳು ಇಬ್ಬರೂ ಕೂಡ ಬಂದು ಪೋಲಿಸರಿಗೆ ದೂರು ಕೊಟ್ಟಿದ್ದಾರೆ. ಹಾಗಾಗಿ ಇದರ ಬಗ್ಗೆ ತನಿಖೆ ನಡೆಯುತ್ತಿದೆಯೇ ಹೊರತು ಇದರಲ್ಲಿ ರಾಜಕೀಯವಿಲ್ಲ. ಇದನ್ನೆ ರಾಜಕೀಯ ಮಾಡಲೇಬೇಕು ಅಂತಿದ್ದರೆ ಹಾಸನ, ಮಂಡ್ಯ, ಮೈಸೂರು ಚುನಾವಣೆ ಆಗುವ ಮೊದಲೇ ಹೊರಗೆ ತಂದು ರಾಜಕೀಯ ಲಾಭ ಪಡೆದುಕೊಳ್ಳಬಹುದಿತ್ತು. ಕಾಂಗ್ರೆಸ್ ಸರ್ಕಾರ ಈ ಪ್ರಕರಣದಲ್ಲಿ ಕಾನೂನು ರೀತಿಯೇ ನಡೆದುಕೊಳ್ಳುತ್ತದೆ ಎಂದರು.