ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಲೆನಾಡು ಭಾಗದ ರೈತರು ಭೂಮಿಗೆ ಸಂಬಂಧಿಸಿದಂತೆ ಒಂದಿಲ್ಲೊಂದು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇದುವರೆಗೆ ಜಿಲ್ಲೆಯಿಂದ ಆಯ್ಕೆಯಾದ ಯಾವುದೇ ಜನಪ್ರತಿನಿಧಿಗಳು ಪರಿಹಾರಕ್ಕೆ ಯತ್ನಿಸಿಲ್ಲ. ಹೀಗಾಗಿ ರೈತ ಹೋರಾಟ ಸೇರಿ ವಿವಿಧ ಹೋರಾಟಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡ, ಗಟ್ಟಿ ಧ್ವನಿ ಎತ್ತುತ್ತಿರುವ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಗೆ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಬೆಂಬಲ ವ್ಯಕ್ತಪಡಿಸಿದ್ದಾರೆ.ಈಶ್ವರಪ್ಪ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಕೂಡ ನಮ್ಮ ರೈತ ಪರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಗಟ್ಟಿ ಧ್ವನಿ, ಬದ್ಧತೆ ಹೊಂದಿರುವ ಈಶ್ವರಪ್ಪ ಪರ ಚುನಾವಣಾ ಪ್ರಚಾರ ನಡೆಸಲಾಗುವುದು. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸಂಘಟಿತರಾಗಿರುವ ನಮ್ಮ ಸಂಘಟನೆ ಕಾರ್ಯಕರ್ತರು ಈಶ್ವರಪ್ಪ ಗೆಲುವಿಗೆ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಿದರು. ಸ್ವತಃ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರೇ ಶಿವಮೊಗ್ಗ ಜಿಲ್ಲೆಯ ರೈತರ ಭೂ ಹಕ್ಕು ಸಮಸ್ಯೆ ಅತ್ಯಂತ ಗಂಭೀರವಾಗಿದ್ದು, ಇದನ್ನು ರಾಜ್ಯ ಸರ್ಕಾರ ಬಗೆಹರಿಸುವುದು ಕಷ್ಟ. ಕೇಂದ್ರ ಸರ್ಕಾರವೇ ಮಧ್ಯ ಪ್ರವೇಶಿಸಬೇಕು ಎಂದು ಹೇಳಿದ್ದಾರೆ. ಹೀಗಿದ್ದೂ ಇದುವರೆಗೆ ಯಾರೂ ಈ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದರಲ್ಲದೆ, ರೈತರ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಗೆದ್ದು ಲೋಕಸಭೆಗೆ ಹೋದ ಬಿ.ಎಸ್.ಯಡಿಯೂರಪ್ಪ, ರಾಘವೇಂದ್ರ ಇವರ್ಯಾರೂ ಸಮಸ್ಯೆ ಬಗ್ಗೆ ಮಾತೇ ಆಡಲಿಲ್ಲ. ಮಾಜಿ ಮುಖ್ಯಮಂತ್ರಿ ಮಕ್ಕಳು ಎಂಬುದೇ ತಮಗೆ ಅರ್ಹತೆ ಎಂದುಕೊಂಡು ಅಹಂಕಾರದಿಂದ ವರ್ತಿಸುತ್ತಾ, ಅಧಿಕಾರ ಅನುಭವಿಸುತ್ತಿದ್ದಾರೆ. ರೈತರ ಚಾಂಪಿಯನ್ ಎಂದು ಹೇಳಿಕೊಂಡು ಗೆದ್ದು, ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಕೂಡ ರೈತರ ಪರ ಕೆಲಸ ಮಾಡಲಿಲ್ಲ ಏನೂ ಮಾಡಲಿಲ್ಲ ಎಂದು ಟೀಕಿಸಿದರು.
ಕಾಗೋಡು ತಿಮ್ಮಪ್ಪ ಮತ್ತು ಬಂಗಾರಪ್ಪ ಅವರುಗಳ ಮಾತ್ರ ರೈತರ, ಮಲೆನಾಡು ಭೂಮಿ ಸಮಸ್ಯೆ ಬಗ್ಗೆ ಅರಿವು ಹೊಂದಿದ್ದರು. ಆದರೆ ಇವರ ತುಣುಕು ಎಂದುಕೊಳ್ಳುವವರು ಇವರ ಸಮಾನಕ್ಕೆ ಇಲ್ಲ. ಇವರನ್ನು ಗೆಲ್ಲಿಸಲೂ ಬಾರದು. ಬದಲಾಗಿ ಹೋರಾಟದ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಮೇಲೆ ಬಂದ, ಈಗಲೂ ಇಡೀ ರಾಜ್ಯ, ದೇಶ ಕೇಳುವಂತೆ ಗುಡುಗುತ್ತಿರುವ ಈಶ್ವರಪ್ಪಗೆ ಮಾತ್ರ ಲೋಕಸಭೆಯಲ್ಲಿ ರೈತರ ಕುರಿತು ಧ್ವನಿ ಎತ್ತುವ ತಾಕತ್ತು ಇರುವುದರಿಂದ ಅವರನ್ನು ಮಲೆನಾಡು ರೈತ ಹೋರಾಟ ಸಮಿತಿ ಈ ಚುನಾವಣೆಯಲ್ಲಿ ಬೆಂಬಲಿಸುತ್ತದೆ ಎಂದರು.ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಶಿವಮೊಗ್ಗಕ್ಕೆ ಬಂದಾಗ ಶರಾವತಿ ಸಂತ್ರಸ್ಥರ ಸಮಸ್ಯೆ, ರೈತರ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಆದರೆ ಇದುವರೆಗೆ ಏನೂ ಮಾಡಲಿಲ್ಲ. ಬದಲಾಗಿ ಹೋರಾಟಗಾರರಿಗೆ ರೌಡಿ ಪಟ್ಟ ನೀಡಿ, ಏನೂ ಮಾಡದವರಿಗೆ ಅಧಿಕಾರದ ಪಟ್ಟ ನೀಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶರಾವತಿ ವಿದ್ಯುತ್ ಯೋಜನೆಯಿಂದ ಇದುವರೆಗೆ ₹3.5 ಲಕ್ಷ ಕೋಟಿ ಆದಾಯ ಬಂದಿದೆ. ಆದರೆ ಭೂಮಿ ಕಳೆದುಕೊಂಡ 25 ಸಾವಿರ ಜನರಿಗೆ ಮಾತ್ರ ಏನೂ ಮಾಡಲಾಗುತ್ತಿಲ್ಲ ಎಂಬುದು ಇತಿಹಾಸದ ವ್ಯಂಗ್ಯ ಎಂದು ಟೀಕಿಸಿದರು.ಚುನಾವಣೆ ಬಳಿಕ ಭೂ ರೈತರ ಪರ ಹೋರಾಟ:
ಈ ಸಂದರ್ಭದಲ್ಲಿ ಮಾತನಾಡಿದ ಕೆ. ಎಸ್. ಈಶ್ವರಪ್ಪ, ನಾನು ಚುನಾವಣಾ ಲಾಭ ಮಾಡಿಕೊಳ್ಳಲು ತೀ.ನಾ.ಶ್ರೀನಿವಾಸ್ ಅವರ ಬೆಂಬಲ ಕೇಳಲಿಲ್ಲ. ಮೂಲತಃ ನಾನು ಹೋರಾಟಗಾರ. ರೈತರ ಪರವಾಗಿ ಸಾಕಷ್ಟು ಹೋರಾಟ ಕೂಡ ಮಾಡಿ ಈ ಹಂತಕ್ಕೆ ಬಂದಿದ್ದೇನೆ. ನಾನು ಕಂದಾಯ ಸಚಿವನಾಗಿದ್ದಾಗ 94ಸಿ ಕಾಯ್ದೆಗೆ ತಿದ್ದುಪಡಿ ತಂದು ಲಕ್ಷಾಂತರ ರೈತರಿಗೆ ಮನೆ ಹಕ್ಕು ನೀಡಿದ್ದೆ. ಆಗ ಕಾಗೋಡು ತಿಮ್ಮಪ್ಪ ಬೇರೆಯವರ ಮೂಲಕ ನನಗೆ ಅಭಿನಂದನೆ ಸಲ್ಲಿಸಿದ್ದರು ಎಂದರು.ಗೋಷ್ಠಿಯಲ್ಲಿ ಕೆ. ಇ. ಕಾಂತೇಶ್ ಉಪಸ್ಥಿತರಿದ್ದರು.