ಹೊಸಪೇಟೆ: ಮತದಾನ ಜಾಗೃತಿಗಾಗಿ ಬೈಕ್‌ ರ‍್ಯಾಲಿ

| Published : May 01 2024, 01:15 AM IST

ಸಾರಾಂಶ

ಹೊಸಪೇಟೆ ನಗರದ ಡ್ಯಾಮ್ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಆವರಣದಲ್ಲಿ ಬೈಕ್ ರಯಾ.ಾಲಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರು ಮತದಾನ ಜಾಗೃತಿಯ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಅಭಿಯಾನದ ನಿಮಿತ್ತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ಚೀಪ್ ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೈಕ್ ರ‍್ಯಾಲಿ ನಡೆಯಿತು.

ಬೈಕ್ ರ‍್ಯಾಲಿ ಹಿನ್ನೆಲೆಯಲ್ಲಿ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ತಮ್ಮ ಬೈಕ್‌ಗಳು ಮತ್ತು ಸ್ಕೂಟಿಗಳೊಂದಿಗೆ ಸಂಜೆ ವೇಳೆಗೆ ಜಿಲ್ಲಾಡಳಿತ ಭವನದ ಆವರಣಕ್ಕೆ ಆಗಮಿಸಿದ್ದರು. ಮಹಿಳಾ ನೌಕರರು ಸಹ ಭಾಗಿಯಾದರು.

ನಗರದ ಡ್ಯಾಮ್ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಆವರಣದಲ್ಲಿ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರು ಮತದಾನ ಜಾಗೃತಿಯ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮತದಾನ ಪ್ರತಿಯೊಬ್ಬರಿಗೂ ಸಂವಿಧಾನಬದ್ಧವಾಗಿ ಬಂದಿರುವ ಹಕ್ಕಾಗಿದೆ. ಹೀಗಾಗಿ, ಪ್ರತಿಯೊಬ್ಬರು ಮತದಾನದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಸದಾಶಿವ ಪ್ರಭು ಬಿ. ಅವರು ಮಾತನಾಡಿ, ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲಾದ್ಯಂತ ಸಾಕಷ್ಟು ಸ್ವೀಪ್ ಕಾರ್ಯಕ್ರಮಗಳನ್ನು ರೂಪಿಸಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸಲಾಗಿದೆ ಎಂದರು.

ನಗರದದಲ್ಲಿ ಸಂಚಾರ

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ವತಃ ತಾವೆ ಬೈಕ್ ಚಲಾಯಿಸಿ ಇತರರಿಗೆ ಸ್ಫೂರ್ತಿ ತುಂಬಿದರು. ಬೈಕ್ ರ‍್ಯಾಲಿಯು ಜಿಲ್ಲಾಡಳಿತ ಭವನದಿಂದ ಆರಂಭಗೊಂಡು ಸಾಯಿಬಾಬಾ ಸರ್ಕಲ್, ಬಲ್ಡೋಟಾ ಕಾಲೋನಿ, ನೆಹರೂ ಕಾಲೋನಿ, ವಾಲ್ಮೀಕಿ ಸರ್ಕಲ್, ಮಿಲಾನ್‌ ಪೆಟ್ರೋಲ್ ಬಂಕ್, ಚಪ್ಪರದಹಳ್ಳಿ, ಹಿರೋ ಹೊಂಡಾ ಶೋರೂಂ, ಬಸವೇಶ್ವರ ಬಡಾವಣೆ, ಸೋಗಿ ಮಾರ್ಕೆಟ್‌ ಮೂಲಕ ಸಂಚರಿಸಿ ನಗರಸಭೆ ಆವರಣಕ್ಕೆ ಬಂದು ಮುಕ್ತಾಯವಾಯಿತು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಎಚ್.ಎಸ್., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಸುಧೀರ್, ಡಿಡಿಪಿಐ ಯುವರಾಜ ನಾಯಕ, ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸುಭದ್ರಾದೇವಿ, ತಾಪಂ ಇಒ ಹರೀಶ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರವಿಕುಮಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ ಸೇರಿದಂತೆ ಇತರರು ಇದ್ದರು.

ಪ್ರತಿಜ್ಞಾವಿಧಿ ಬೋಧನೆ

ಬೈಕ್ ರ‍್ಯಾಲಿಯ ಆರಂಭಕ್ಕೂ ಮೊದಲು ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಅನ್ನದಾನೇಶ್ವರ ಸ್ವಾಮಿ ಜೆ.ಎಂ.ಅವರು ಪ್ರತಿಜ್ಞಾವಿಧಿ ಬೋಧಿಸಿದರು.