ರಸ್ತೆ ನಿರ್ಮಿಸಿ, ಪುನಃ ಕೀಳುವುದಕ್ಕೇ ತೆರಿಗೆ ಹಣ ಹಾಳುಗೆಡವಬೇಡಿ

| Published : Feb 25 2025, 12:49 AM IST

ರಸ್ತೆ ನಿರ್ಮಿಸಿ, ಪುನಃ ಕೀಳುವುದಕ್ಕೇ ತೆರಿಗೆ ಹಣ ಹಾಳುಗೆಡವಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಸಿ.ಸಿ. ರಸ್ತೆ ನಿರ್ಮಿಸಿ, ಐದಾರು ತಿಂಗಳಿಗೆ ಬೇರೆ ಕಾಮಗಾರಿಗೆಂದು ಕಿತ್ತು ಹಾಕಲಾಗಿದೆ. ಆ ಮೂಲಕ ಸಾರ್ವಜನಿಕರು ತೆರಿಗೆ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇನ್ನಾದರೂ ವಿವೇಚನೆಯಿಂದ ಜನರ ತೆರಿಗೆ ಹಣ ಬಳಸಬೇಕು ಎಂದು ಜಿಲ್ಲಾ ತೆರಿಗೆ ಪಾವತಿದಾರರ ಸಂಘ ಒತ್ತಾಯಿಸಿದೆ.

- ಹೊಸ ಸಿ.ಸಿ. ರಸ್ತೆ ಕಿತ್ತು ಮತ್ತೊಂದು ಕಾಮಗಾರಿ ಏಕೆ?: ತೆರಿಗೆ ಪಾವತಿದಾರರ ಸಂಘ ಅಸಮಾಧಾನ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದಲ್ಲಿ ಸಿ.ಸಿ. ರಸ್ತೆ ನಿರ್ಮಿಸಿ, ಐದಾರು ತಿಂಗಳಿಗೆ ಬೇರೆ ಕಾಮಗಾರಿಗೆಂದು ಕಿತ್ತು ಹಾಕಲಾಗಿದೆ. ಆ ಮೂಲಕ ಸಾರ್ವಜನಿಕರು ತೆರಿಗೆ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇನ್ನಾದರೂ ವಿವೇಚನೆಯಿಂದ ಜನರ ತೆರಿಗೆ ಹಣ ಬಳಸಬೇಕು ಎಂದು ಜಿಲ್ಲಾ ತೆರಿಗೆ ಪಾವತಿದಾರರ ಸಂಘ ಒತ್ತಾಯಿಸಿದೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಸಿ.ವಿಜಯಕುಮಾರ, ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ಮಾಡಿದ ಸಿ.ಸಿ. ರಸ್ತೆಗಳನ್ನೇ ಐದಾರು ತಿಂಗಳಿಗೆ ಬೇರೆ ಕಾಮಗಾರಿ ಹೆಸರಿನಲ್ಲಿ ಕಿತ್ತು ಹಾಕುತ್ತಿದ್ದಾರೆ. ಒಂದೇ ಕಾಮಗಾರಿ ಹೊಸದಾಗಿ ಮಾಡುವುದು, ನಂತರ ತೇಪೆ ಹಾಕುವ ಕೆಲಸ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸಿ.ಸಿ. ರಸ್ತೆಗಳಲ್ಲಿ ತಗ್ಗು, ಗುಂಡಿಗಳು ನಿರ್ಮಾಣವಾಗಿ, ವಾಹನ ಸವಾರರು ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಿ, ಜನರ ಹಣ ದುರ್ಬಳಕೆ ತಡೆಯಬೇಕು. ಬಿಟ್ಟಿ ಭಾಗ್ಯಗಳನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿರುವುದು ಶ್ರೀಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ ಎಂದರು.

ಕಟ್ಟಡಗಳನ್ನು ವಾಸೋಪಯೋಗಿ, ವಾಣಿಜ್ಯ ಉತ್ಪಾದಕ ಎಂಬುದಾಗಿ ವಿಭಾಗಿಸಿ, ಕಂದಾಯ ಮತ್ತು ಸೆಸ್ ಹಾಕಲಾಗುತ್ತಿದೆ. ಖಾಲಿ ನಿವೇಶನಗಳಿಗೂ ಸೆಸ್ ವಿಧಿಸುತ್ತಿರುವುದು ದುರ್ದೈವ. ನಾಲ್ಕೈದು ದಶಕಗಳಿಂದಲೂ ಕಂದಾಯ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು, ವಾಸಿಸುತ್ತಿರುವವರಿಗೆ ನೀರು, ವಿದ್ಯುತ್‌, ಸಿಸಿ ರಸ್ತೆ, ಬೀದಿದೀಪ, ಸಾರಿಗೆ ಇತ್ಯಾದಿ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದರೂ ಕಂದಾಯ ಮಾತ್ರ ಯಾಕೆ ವಸೂಲಿ ಮಾಡುತ್ತಿಲ್ಲ ಎಂದರು.

ಈ ಹಿಂದೆ ನೀರು ಪೂರೈಕೆಗಾಗಿ ಮನೆಗಳಿಗೆ ₹660 ಶುಲ್ಕ ವಿಧಿಸಲಾಗುತ್ತಿತ್ತು. ಅನಂತರ ಅದು ₹2,400 ಗಳಿಗೆ ಹೆಚ್ಚಿಸಲಾಯಿತು. ಈಗ ಜಲಸಿರಿ ಯೋಜನೆಯಡಿ ವರ್ಷಕ್ಕೆ ಐದಾರು ಸಾವಿರ ರು. ಭರಿಸಬೇಕಾದ ದುಸ್ಥಿತಿ ತಂದಿಡಲಾಗಿದೆ. ನಗರದ ಜನ, ವಾಹನ ದಟ್ಟಣೆಗೆ ಅನುಗುಣವಾಗಿ ರಸ್ತೆ ವಿಸ್ತರಿಸಿದರೂ, ಇನ್ನೂ ಸ್ವತ್ತುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರು ಇದ್ದರು.

- - -

ಬಾಕ್ಸ್‌ * ಇ-ಖಾತೆ ನೀಡುವಲ್ಲಿ ಸ್ಪಂದಿಸಿ: ಕುಸುಮ ಶೆಟ್ಟಿ ಸಂಘದ ಗೌರವಾಧ್ಯಕ್ಷ, ಹಿರಿಯ ವರ್ತಕ ಎಸ್.ಟಿ. ಕುಸುಮ ಶೆಟ್ಟಿ ಮಾತನಾಡಿ, ಇ-ಖಾತೆ ಮಾಡಿಕೊಡುವ ದಂಧೆಯ ಉಪದ್ರವ ತಡೆಯಲು ಪಾಲಿಕೆಯವರು ವಾಸೋಪಯೋಗ, ವಾಣಿಜ್ಯ ಲೈಸೆನ್ಸ್‌ಗಾಗಿ ನಿಗದಿಪಡಿಸಿದ ವ್ಯತ್ಯಾಸದ ಹಣವನ್ನು ತುಂಬಿಸಿಕೊಂಡು, ಸಕ್ರಮ ಮಾಡಿಕೊಡಬೇಕು. ಸಾರ್ವಜನಿಕರಲ್ಲಿ ಅರಿವು ಉಂಟುಮಾಡಲು ದಾವಣಗೆರೆ ಜಿಲ್ಲೆ ತೆರಿಗೆ ಪಾವತಿದಾರರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸರ್ಕಾರ ಕಾಲಕಾಲಕ್ಕೆ ವಿಧಿಸುವ ವಿವಿಧ ರೂಪದ ತೆರಿಗೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಸಂಘದ ಉದ್ದೇಶ ಎಂದರು.

- - - -23ಕೆಡಿವಿಜಿ62.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲೆ ತೆರಿಗೆ ಪಾವತಿದಾರರ ಸಂಘದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಎಂ.ಸಿ.ವಿಜಯಕುಮಾರ ಮಾತನಾಡಿದರು.