ರಕ್ತದಾನ ಪ್ರತಿಯೊಬ್ಬರ ಕರ್ತವ್ಯವಾಗಲಿ: ಶಾಂತಾರಾಮ ಶೆಟ್ಟಿ

| Published : Sep 30 2024, 01:22 AM IST

ಸಾರಾಂಶ

ಶಿಬಿರಕ್ಕೆ ಆಗಮಿಸಿದ ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನದ ಮೂಲಕ ಜನತೆಗೆ ನೆರವಾಗುತ್ತಿರುವ ಶ್ರೀ ರಾಘವೇಂದ್ರ ಮಿತ್ರ ಮಂಡಳಿ ಮತ್ತು ಬಜಿಲಕೇರಿ ಫ್ರೆಂಡ್ಸ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ರಕ್ತದಾನ ಅತ್ಯಂತ ಪವಿತ್ರ ಕಾರ್ಯ. ಒಬ್ಬನ ರಕ್ತದಾನದಿಂದ ಮೂವರು ರೋಗಿಗಳಿಗೆ ಜೀವದಾನ ಮಾಡಲು ಅವಕಾಶವಿದೆ. ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಲಿ ಎಂದು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.ಶ್ರೀ ರಾಘವೇಂದ್ರ ಮಿತ್ರ ಮಂಡಳಿ ನೆಲ್ಲಿಕಾಯಿ ಮಠ ಮತ್ತು ಬಜಿಲಕೇರಿ ಫ್ರೆಂಡ್ಸ್ ಮಂಗಳೂರು ವತಿಯಿಂದ, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕ, ಫಾದರ್ ಮುಲ್ಲರ್ ಕಾಲೇಜು ಹಾಗೂ ಆಸ್ಪತ್ರೆ ಸಹಭಾಗಿತ್ವದಲ್ಲಿ ನಗರದ ಸೆಂಟ್ರಲ್ ವಾರ್ಡ್‌ನ ಬಸ್ತಿ ಗಾರ್ಡನ್ ಶಾಲೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ರಕ್ತದಾನದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು.ಶಿಬಿರಕ್ಕೆ ಆಗಮಿಸಿದ ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನದ ಮೂಲಕ ಜನತೆಗೆ ನೆರವಾಗುತ್ತಿರುವ ಶ್ರೀ ರಾಘವೇಂದ್ರ ಮಿತ್ರ ಮಂಡಳಿ ಮತ್ತು ಬಜಿಲಕೇರಿ ಫ್ರೆಂಡ್ಸ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.ಸ್ಥಳೀಯ ಕಾರ್ಪೊರೇಟರ್ ಪೂರ್ಣಿಮಾ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುನೈನಾ ಭಟ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಫಾದರ್ ಮುಲ್ಲರ್ ಆಸ್ಪತ್ರೆ ಆರೋಗ್ಯ ಶಿಬಿರದ ಸಂಯೋಜಕರಾದ ರೈನಾ, ಕೆಲ್ವಿನ್ ಪೀಟರ್ ಪಾಸ್, ರೆಡ್ ಕ್ರಾಸ್ ರಕ್ತನಿಧಿ ಸಂಯೋಜಕ ಪ್ರವೀಣ್ ಕುಮಾರ್, ಬಸ್ತಿ ಗಾರ್ಡನ್ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ರಾವ್, ಶ್ರೀರಾಘವೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಕಾಂತ ನಾಯಕ್, ಬಜಿಲಕೇರಿ ಫ್ರೆಂಡ್ಸ ಅಧ್ಯಕ್ಷ ಹರೀಶ್.ಎಚ್. ಇದ್ದರು. ಅರ್ಪಣ್ ಶೆಟ್ಟಿ ನಿರೂಪಿಸಿದರು.