ಅಂಗಾಂಗ ದಾನದಿಂದ ಜೀವದಾನ ಸಾಧ್ಯ: ಡಾ. ಶಂಕರ್ ಪ್ರಸಾದ್

| Published : Aug 05 2024, 12:39 AM IST

ಸಾರಾಂಶ

ಅಂಗಾಂಗ ದಾನಿ ಭರತ್ ಬಂಗೇರ ಹಾಗೂ ಸುರೇಖ ಬಂಗೇರ ಅವರನ್ನು‌ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳನಿರಂತರ ಯೋಗ, ಧ್ಯಾನ, ವ್ಯಾಯಾಮ, ಸಮತೋಲಿತ ಉತ್ತಮ ಆಹಾರ ಸೇವನೆ ಮಾಡುವುದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂದು ಮಣಿಪಾಲ ಕೆಎಂಸಿಯ ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ. ಶಂಕರ್ ಪ್ರಸಾದ್ ಹೇಳಿದರು.

ಕೆಎಂಸಿ- ಮಾಹೆ ಮಣಿಪಾಲ ಹಾಗೂ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಸಹಯೋಗದೊಂದಿಗೆ ಕಾರ್ಕಳ ಟಿಎಂ‌ಎ ಪೈ ರೋಟರಿ ಆಸ್ಪತ್ರೆಯಲ್ಲಿ ನಡೆದ ಅಂಗಾಂಗ ದಾನದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯಕ್ತಿಯ ಜೀವವನ್ನು ಉಳಿಸುವಲ್ಲಿ ಅಂಗಾಗ ದಾನವು ಬಹುಮುಖ್ಯ ಮತ್ತು ಅನೇಕ ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯವಾಗುತ್ತದೆ ಎಂದರು.ಕಾರ್ಕಳ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಳ್ಳಾಲ್ ಮಾತನಾಡಿ, ಗ್ರಾಮೀಣ ಜನರಲ್ಲಿ ಆರೋಗ್ಯದ ಅರಿವು ಹಾಗೂ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಕೆಎಂಸಿಯು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಕಾನೂನು ಚೌಕಟ್ಟಿನೊಳಗೆ ಅಂಗಾಂಗ ದಾನ ಮಾಡಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಮೂತ್ರಜನಕಾಂಗ, ಪಿತ್ತಜನಕಾಂಗದ ದಾನ ಮಾಡಬಹುದು. ಮೃತಪಟ್ಟ ಬಳಿಕ ದೇಹದ ಭಾಗಗಳನ್ನು ದಾನ ಮಾಡುವ ಬಳಿಕ ಇನ್ನೊಬ್ಬರ ಜೀವಕ್ಕೆ ಬೆಳಕಾಗಬಹುದಾಗಿದೆ ಎಂದರು.ಅಂಗಾಂಗ ದಾನಿ ಭರತ್ ಬಂಗೇರ ಹಾಗೂ ಸುರೇಖ ಬಂಗೇರ ಅವರನ್ನು‌ ಸನ್ಮಾನಿಸಲಾಯಿತು.ಕೆಎಂಸಿ ಪ್ರಾಧ್ಯಾಪಕ ಡಾ. ರವೀಂದ್ರ ಪ್ರಭು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ದರ್ಶನ್ ರಂಗಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಷಾ ನಿರೂಪಿಸಿ, ವಂದಿಸಿದರು.