ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಡೊನೇಷನ್ ಹಾವಳಿ, ಅತಿಯಾದ ಶುಲ್ಕ ವಸೂಲಿ ಹಾಗೂ ಶಿಕ್ಷಣದ ವ್ಯಾಪಾರೀಕರಣ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಬ್ಯಾಡಗಿ ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಬ್ಯಾಡಗಿ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಡೊನೇಷನ್ ಹಾವಳಿ, ಅತಿಯಾದ ಶುಲ್ಕ ವಸೂಲಿ ಹಾಗೂ ಶಿಕ್ಷಣದ ವ್ಯಾಪಾರೀಕರಣ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಬ್ಯಾಡಗಿ ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ರೇವಣಸಿದ್ದೇಶ್ವರ ಖಾಸಗಿ ಕಾಲೇಜಿನಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಹಾಕುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಾಗವತ್, 2026-27 ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆಯನ್ನು ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪೂರ್ಣಗೊಳಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಶಿಕ್ಷಣ ಪ್ರಾಧಿಕಾರ ಸಭೆಯನ್ನು ಸೇರಿ ಪಾಲಕರಿಗೆ ಡೊನೇಷನ್ ಕುರಿತು ಮಾಹಿತಿ ನೀಡಬೇಕಾಗಿತ್ತು, ಆದರೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಗಳು ಸಭೆ ನಡೆಸದೆ ನಿರ್ಲಕ್ಷ್ಯ ತೋರಿರುವ ಕಾರಣ ಖಾಸಗಿ ಶಿಕ್ಷಣ ಸಂಸ್ಥೆಗಳು 1983 ರ ಶಿಕ್ಷಣ ಕಾಯ್ದೆ ಮತ್ತು 2009 ರ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಉಲ್ಲಂಘಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿವೆ, ಎಂದು ಆರೋಪಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗದಿಪಡಿಸಿದ ಶುಲ್ಕದ ವಿವರಗಳನ್ನು ಪ್ರತಿಯೊಂದು ಶಾಲೆ ಹಾಗೂ ಕಾಲೇಜು ಸಾರ್ವಜನಿಕವಾಗಿ ಪ್ರದರ್ಶಿಸಬೇಕು, ನಿಯಮ ಮೀರಿ ಡೊನೇಷನ್ ಪಡೆಯುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ದಂಡ ಹಾಗೂ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಮುಖಂಡ ರಘು ಮಾತನಾಡಿ, ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ಅವಕಾಶ ನೀಡಿದರೂ, ಅದನ್ನು ಒತ್ತಾಯ ಪೂರ್ವಕವಾಗಿ ಅಥವಾ ಮಿತಿಮೀರಿಸಿ ವಸೂಲಿ ಮಾಡುವುದು ಕಾನೂನು ಬಾಹಿರ ಆದರೂ ಅನೇಕ ಖಾಸಗಿ ಶಾಲೆಗಳು ಲಕ್ಷಾಂತರ ರುಪಾಯಿ ವಸೂಲಿ ಮಾಡಿ ಹಗಲು ದರೋಡೆ ನಡೆಸುತ್ತಿವೆ ಎಂದು ದೂರಿದರು.ಪ್ರಮುಖ ಬೇಡಿಕೆಗಳು: ಡೊನೇಷನ್ ನಿಯಂತ್ರಣಕ್ಕೆ ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ್ ಪ್ರಾಧಿಕಾರ ರಚನೆ, ಅಕ್ರಮ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ, ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ವಿವರಗಳನ್ನು ಸಾರ್ವ ಜನಿಕವಾಗಿ ಪ್ರಕಟಿಸುವುದು, ಅನಧಿಕೃತ ಖಾಸಗಿ ಶಾಲಾ-ಕಾಲೇಜುಗಳು ಹಾಗೂ ಟ್ಯೂಷನ್ ಸೆಂಟರ್‌ಗಳನ್ನು ನಿಯಂತ್ರಿಸುವುದು, ಪಾಲಕರ ಸಭೆಗಳನ್ನು ನಿಯಮಿತವಾಗಿ ನಡೆಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡುವುದು, ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸುವ ಸಂಸ್ಥೆಗಳಿಗೆ ದಂಡ ಹಾಗೂ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಕಾಲೇಜು ಘಟಕದ ಕಾರ್ಯಕರ್ತರಾದ ಬಸವರಾಜ ಮಡ್ಲೂರ, ಆಸೀಫ್ ನದಾಫ, ವೀರೇಶ್ ಹರಿಜನ, ಮಣಿಕಂಠ ಜೋಗಿನಹಳ್ಳಿ, ಪ್ರೀತಮ ಪೂಜಾರ, ಆಕಾಶ ಮಕ್ಕರಿ, ಸೇರಿದಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.