ತೀರ್ಥಹಳ್ಳಿ: ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ ಪೂರ್ಣ ಪ್ರಮಾಣದ ನೆರವು ಅಗತ್ಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಡಶಾಲಾ ಆವರಣದಲ್ಲಿ ದಾನಿಗಳ ನೆರವಿನೊಂದಿಗೆ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿ ನಿರ್ಮಾಣಗೊಳ್ಳಲಿರುವ ವೇದಿಕೆಯ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ, ಬಸವ ಜಯಂತಿ ಅಂಗವಾಗಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ, ತಾಲೂಕಿನ ಶೈಕ್ಷಣಿಕ ಪ್ರಗತಿಯಲ್ಲಿ ದಾನಿಗಳ ನೆರವಿನೊಂದಿಗೆ ಸರ್ಕಾರಿ ಶಾಲೆಗಳ ಶಿಕ್ಷಕರ ಬದ್ದತೆಯ ಕಾರ್ಯವು ಗಮನಾರ್ಹವಾಗಿದೆ ಎಂದರು.

ಸುಮಾರು ಆರು ದಶಕಗಳ ಹಿಂದೆ ಪಟ್ಟಣದ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಅಂದಿನ ಹಿರಿಯರು ಪುರಸಭೆ ವತಿಯಿಂದ ಆರಂಭಿಸಿದ್ದ ಈ ಪ್ರೌಡಶಾಲೆ ಪ್ರಸ್ತುತ ಸರ್ಕಾರದ ವತಿಯಿಂದ ನಡೆಯುತ್ತಿದೆ ಮತ್ತು ಈ ಶಾಲೆಯ ಶೈಕ್ಷಣಿಕ ಸಾಧನೆಯೂ ಉತ್ತಮವಾಗಿದ್ದು, ಅನುಕರಣೀಯವಾಗಿದೆ. ಈ ಶಾಲೆಯಲ್ಲಿ ಬಹುತೇಕ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣು ಮಕ್ಕಳೇ ಕಲಿಯುತ್ತಿದ್ದು, ಶಾಲೆ ಎಲ್ಲಾ ಸವಲತ್ತುಗಳನ್ನು ಹೊಂದಿದೆ. ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಹಾಗೂ ದಾನಿಗಳ ನೆರವನ್ನು ಪಡೆದು ಈ ಕಾಲಘಟ್ಟದ ಶಿಕ್ಷಣಕ್ಕೆ ಅನುಕೂಲಕರವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಈ ಶಾಲೆಯ ಶಿಕ್ಷಕರುಗಳು ವಹಿಸುತ್ತಿರುವ ಕಾಳಜಿ ಪ್ರಶಂಸನೀಯವಾಗಿದೆ ಎಂದರು.

ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಉಪಪ್ರಾಂಶುಪಾಲ ಪಿ.ಎಚ್.ನಾಗಪ್ಪ, ಎಸ್‍ಡಿಎಂಸಿ ಅಧ್ಯಕ್ಷೆ ಮೇದಿನಿ, ಕಂದಾಯ ಇಲಾಖೆ ಸುರಥಕುಮಾರ್ ಹಾಗೂ ಶಾಲೆ ಶಿಕ್ಷಕರುಗಳು ಇದ್ದರು.