ಸಾರಾಂಶ
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ
ಕನ್ನಡಪ್ರಭ ವಾರ್ತೆ ಯಲಬುರ್ಗಾವಿಧಾನಸಭಾ ಚುನಾವಣೆಯಲ್ಲಿ ನಾನು ಹೇಳಿದಂತೆ ಬಸವರಾಜ ರಾಯರಡ್ಡಿ ಅವರಿಗೆ ಲೀಡ್ ಕೊಟ್ಟು ಆರಿಸಿ ಕಳಿಸಿದಂತೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳರಿಗೂ ಅತ್ಯಧಿಕ ಮತ ಹಾಕಿಸಿ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಈ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿಯವರು ಮಾಡಿದಷ್ಟು ಅಭಿವೃದ್ಧಿ ಕಾರ್ಯಗಳು ಯಾವ ಕ್ಷೇತ್ರದಲ್ಲೂ ಆಗಿಲ್ಲ. ಅವರ ಅಭಿವೃದ್ಧಿ ಗುರುತಿಸಿ ಲೋಕಸಭಾ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿದರೆ ಮುಂದೆ ರಾಯರಡ್ಡಿಯವರಿಗೆ ರಾಜಯೋಗ ಬರಲಿದೆ ಎಂದರು.ಕಾಂಗ್ರೆಸ್ ಎಲ್ಲ ವರ್ಗದ ಜನರ ಅಭಿವೃದ್ಧಿ ಬಯಸುವ ಏಕೈಕ ಪಕ್ಷವಾಗಿದೆ. ಆದರೆ ಬಿಜೆಪಿಯವರು ಸುಳ್ಳಿನಲ್ಲಿ ಮನೆ ಕಟ್ಟುವವರು ಅವರ ಮಾತನ್ನು ಕೇಳಿ ಮೋಸ ಹೋಗಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನುಡಿದಂತೆ ನಡೆದುಕೊಂಡು ರಾಜ್ಯದ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದೆ. ಇಂತಹ ಬರಗಾಲದಲ್ಲಿ ಅವುಗಳಿಂದ ಜನತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಮತ ಹಾಕುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಹಣ, ಜಾತಿಯಿಂದ ಯಾರು ಗೆಲ್ಲಲು ಸಾಧ್ಯವಿಲ್ಲ. ಎಲ್ಲ ವರ್ಗದ ಜನರು ಒಮ್ಮತದಿಂದ ಕ್ಷೇತ್ರದಲ್ಲಿಯ ಅಭಿವೃದ್ಧಿ ಗುರುತಿಸಿ ಮತ ನೀಡಿದರೆ ಗೆಲುವು ಸುಲಭ. ಈ ಅಭಿವೃದ್ಧಿ ಮಂತ್ರ ಇಟ್ಟುಕೊಂಡು ಮತ ಕೇಳುವ ಮನೋಭಾವನೆಯನ್ನು ಪ್ರತಿಯೊಬ್ಬ ಜನಪ್ರತಿನಿಧಿಗಳು ಬೆಳೆಸಿಕೊಳ್ಳಬೇಕು. ನಮ್ಮ ಅಭ್ಯರ್ಥಿಗೆ ಅತೀ ಹೆಚ್ಚು ಮತಗಳನ್ನು ಈ ಕ್ಷೇತ್ರದಿಂದ ನೀಡುವುದಾಗಿ ಭರವಸೆ ನೀಡಿದರು.ಮಾಜಿ ಸಂಸದ ಕರಡಿ ಸಂಗಣ್ಣ ಕರಡಿ, ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚೆಂಡೂರು, ವೀರನಗೌಡ ಬಳೂಟಗಿ, ರಾಘವೇಂದ್ರ ಜೋಶಿ, ಎ.ಜಿ. ಭಾವಿಮನಿ, ಗಿರಿಜಾ ಸಂಗಟಿ, ಡಾ. ಶಿವನಗೌಡ ದಾನರಡ್ಡಿ, ಸಾವಿತ್ರಿ ಗೊಲ್ಲರ, ಫರೀದಾಬೇಗಂ ಮತ್ತಿತರರಿದ್ದರು.