ಸರ್ಕಾರಿ ಕನ್ನಡ ಶಾಲೆ ಎಂಬ ಕೀಳರಿಮೆ ಬೇಡ: ವಿನಾಯಕ ಹೆಗಡೆ

| Published : May 14 2024, 01:05 AM IST

ಸರ್ಕಾರಿ ಕನ್ನಡ ಶಾಲೆ ಎಂಬ ಕೀಳರಿಮೆ ಬೇಡ: ವಿನಾಯಕ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಾಳ ಪಟ್ಟಣದ ಕೆ.ಎಲ್.ಎಸ್. ಸಂಸ್ಥೆಯ ವಿಡಿಐಟಿ ಮಹಾವಿದ್ಯಾಲಯದ ಸಂಸ್ಥಾಪನಾ ದಿನದ ನಿಮಿತ್ತ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಉಪಾಧ್ಯಕ್ಷ ವಿನಾಯಕ ಹೆಗಡೆ ಅವರು ಹಳಿಯಾಳ ತಾಲೂಕಿನ ಪ್ರೌಢಶಾಲಾ, ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಹಳಿಯಾಳ: ಕನ್ನಡ ಮಾಧ್ಯಮದಲ್ಲಿ ಕಲಿತಿದ್ದೇನೆ, ಅದೂ ಸರ್ಕಾರಿ ಶಾಲೆಯಲ್ಲಿ ಎಂಬ ಕೀಳರಿಮೆಯನ್ನು ಯಾವತ್ತೂ ಬೆಳೆಸಿಕೊಳ್ಳಬೇಡಿ, ಸತತ ಪರಿಶ್ರಮಪಟ್ಟರೆ ಯಾವುದೇ ಸಾಧನೆ ಅಸಾಧ್ಯವಾದುದಲ್ಲ ಎಂದು ಖ್ಯಾತ ಸಾಫ್ಟ್‌ವೇರ್‌ ಸಂಸ್ಥೆ ಇನ್ಫೋಸಿಸ್ ಉಪಾಧ್ಯಕ್ಷ ವಿನಾಯಕ ಹೆಗಡೆ ಹೇಳಿದರು.

ಪಟ್ಟಣದ ಕೆ.ಎಲ್.ಎಸ್. ಸಂಸ್ಥೆಯ ವಿಡಿಐಟಿ ಮಹಾವಿದ್ಯಾಲಯದ ಸಂಸ್ಥಾಪನಾ ದಿನದ ನಿಮಿತ್ತ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹಳಿಯಾಳ ತಾಲೂಕಿನ ಪ್ರೌಢಶಾಲಾ, ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಅವರು ತಮ್ಮ ಅನುಭವ ಹಂಚಿಕೊಂಡರು.

ನಾನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗ್ಗೋಣ ಎಂಬ ಪುಟ್ಟ ಗ್ರಾಮದವನು. ನಾನು ಸಹ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದು ಗ್ರಾಮೀಣ ಭಾಗದಲ್ಲಿಯ ಕಲಿತು, ಈ ಮಟ್ಟಕ್ಕೆ ಬೆಳೆದಿದ್ದೇನೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸತತ ಪರಿಶ್ರಮ ಮಾಡಿದರೆ ಯಶಸ್ಸು ಸಾಧ್ಯ ಎಂದರು. ಆಧುನಿಕ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯು ಕೈಗಾರಿಕಾ ಕ್ಷೇತ್ರದ ಎಲ್ಲ ವಲಯಗಳಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದೆ. ಆದರೆ ಕೃತಕ ಬುದ್ಧಿಮತ್ತೆಯಿಂದ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಕೊಂಚಮಟ್ಟಿಗೆ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಈ ಆಧುನಿಕ ಕೈಗಾರಿಕಾ ಕ್ಷೇತ್ರ ಬಯಸುವ ಕೌಶಲ್ಯಗಳನ್ನು ಅರಿತಿದ್ದಲ್ಲಿ ಖ್ಯಾತ ಉದ್ದಿಮೆಗಳಲ್ಲಿ ಉದ್ಯೋಗವಕಾಶಗಳನ್ನು ಪಡೆಯಬಹುದು ಎಂದರು.

ಇನ್ಫೋಸಿಸ್ ಸಂಸ್ಥೆಯ ಕೇವಲ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸೀಮಿತವಾಗಿರದೇ ಸೆಮಿಕಂಡಕ್ಟರ್ ಕ್ಷೇತ್ರದಲ್ಲೂ ಯಶಸ್ವಿಯಾಗಿದೆ ಎಂದರು. ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರು ಯಾವುದೇ ಕಾರಣಕ್ಕೂ ಒತ್ತಡ ನಿರ್ವಹಣೆಗೆ ದುಶ್ಚಟಗಳಿಗೆ ಬಲಿಯಾಗಬಾರದು. ಯೋಗ, ಅಧ್ಯಾತ್ಮದಂತಹ ಮಾರ್ಗ ಅನುಸರಿಸಬೇಕು. ಇನ್ಫೋಸಿಸ್ ಸಂಸ್ಥೆಯು ತಾನು ಮಾಡುತ್ತಿರುವ ಕೆಲಸವನ್ನು ಕ್ರಿಯಾತ್ಮಕವಾಗಿ ಹಾಗೂ ವಿಭಿನ್ನವಾಗಿ ಮಾಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ದಿಗ್ಗಜ ಸಂಸ್ಥೆಯಾಗಿ ಬೆಳೆದಿದೆ ಎಂದರು.

ಸಂವಾದದಲ್ಲಿ ಕೆಸರೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿವಿಡಿ ಸ್ಕೂಲ್ ಆಫ್‌ ಎಕ್ಸಲೆನ್ಸ್, ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಹಳಿಯಾಳ, ಹವಗಿ ಸರ್ಕಾರಿ ಡಿಗ್ರಿ ಕಾಲೇಜು ಮತ್ತು ಕೆ.ಎಲ್.ಎಸ್. ಸಂಸ್ಥೆಯ ಬಿಸಿಎ ಮತ್ತು ವಿಡಿಐಟಿ ಮಹಾವಿದ್ಯಾಲಯದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಪ್ರೊ. ರಜತ್ ಆಚಾರ್ಯ, ಪ್ರೊ. ನವೀನ್ ಹಿರೇಮಠ, ಪ್ರೊ. ರಾಕೇಶ್ ಪಾಟೀಲ ಇದ್ದರು.