ಕುಡಿವ ನೀರು, ಮೇವಿಗೆ ತೊಂದರೆ ಆಗದಿರಲಿ: ಸಚಿವ ಮಂಕಾಳ ವೈದ್ಯ

| Published : Feb 10 2024, 01:53 AM IST

ಸಾರಾಂಶ

ಕುಡಿಯುವ ನೀರಿನ ಅಭಾವ ಇದ್ದ ಕಡೆ ಈಗಲೇ ಪಟ್ಟಿ ಮಾಡಿ ನೀರು ಸರಬರಾಜು ಮಾಡಲು ಮುಂದಾಗಬೇಕು. ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಮತ್ತು ಜಾನುವಾರುಗಳ ಮೇವಿಗೆ ಸಮಸ್ಯೆ ಆಗಬಾರದು.

ಭಟ್ಕಳ:

ಕ್ಷೇತ್ರದ ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಜಾನುವಾರು ಮೇವಿಗೆ ತೊಂದರೆಯಾಗದಂತೆ ಜಾಗ್ರತಿ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಅಭಾವ ಇದ್ದ ಕಡೆ ಈಗಲೇ ಪಟ್ಟಿ ಮಾಡಿ ನೀರು ಸರಬರಾಜು ಮಾಡಲು ಮುಂದಾಗಬೇಕು. ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಮತ್ತು ಜಾನುವಾರುಗಳ ಮೇವಿಗೆ ಸಮಸ್ಯೆ ಆಗಬಾರದು. ಈ ತಿಂಗಳ ಅಂತ್ಯದೊಳಗೆ ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಪೂರ್ತಿಗೊಳಿಸಬೇಕು ಎಂದು ಭಟ್ಕಳ, ಹೊನ್ನಾವರ ತಹಸೀಲ್ದಾರ್‌ ಅವರಿಗೆ ಸೂಚಿಸಿದರು.ಭಟ್ಕಳ ತಹಸೀಲ್ದಾರ್‌, ಕುಡಿಯುವ ನೀರಿಗಾಗಿ ತಮ್ಮ ಖಾತೆಯಲ್ಲಿ ₹ 52 ಲಕ್ಷ ಇದೆ ಎಂದರೆ, ಹೊನ್ನಾವರ ತಹಸೀಲ್ದಾರ್‌ ₹ 72 ಲಕ್ಷ ಇದೆ ಎಂದು ತಿಳಿಸಿದರು.ಪಶು ಆಸ್ಪತ್ರೆಗೆ ನೀಡಿರುವ ಆ್ಯಂಬುಲೆನ್ಸ್‌ ಬಗ್ಗೆ ಸಚಿವರು ಮಾಹಿತಿ ಕೇಳಿದಾಗ, 1962 ನಂಬರಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ದಿನವೊಂದಕ್ಕೆ ಜಾನುವಾರು ಸಮಸ್ಯೆಗೆ ಸಂಬಂಧಿಸಿದಂತೆ ನಾಲ್ಕೈದು ಪ್ರಕರಣಗಳು ಬರುತ್ತಿದೆ. ಆ್ಯಂಬುಲೆನ್ಸ್‌ನಿಂದ ಜಾನುವಾರು ಸಮಸ್ಯೆಗೆ ತಕ್ಷಣ ಸ್ಪಂದಿಸಲು ಅನುಕೂಲವಾಗಿದೆ ಎಂದು ಪಶು ವೈದ್ಯರು ತಿಳಿಸಿದರು.ಹೊನ್ನಾವರದ ಮಂಕಿಯಲ್ಲಿ ಹೈಟೆಕ್ ಪಶು ಆಸ್ಪತ್ರೆಗೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಹೊನ್ನಾವರ ಪಶುವೈದ್ಯರಿಗೆ ಸಚಿವರು ಸೂಚಿಸಿದರು. ಕುಡಿಯುವ ನೀರಿನ ಕಾಮಗಾರಿ ಆರಂಭಿಸಲು ಗುದ್ದಲಿ ಪೂಜೆಗಾಗಿ ಕಾಯುವುದು ಬೇಡ. ಬೇಗ ಕೆಲಸ ಆರಂಭಿಸಿ ಎಂದು ಪಂಚಾಯತ್‌ ರಾಜ್ ಅಭಿಯಂತರರಿಗೆ ಹೇಳಿದರು. ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಯೋಜನೆಗೆ ಬಂದ ಅನುದಾನ ವಾಪಸ್ ಹೋಗಲು, ಲ್ಯಾಪ್ಸ್‌ ಆಗಲು ಬಿಡಬಾರದು. ಮಾರ್ಚ್‌ ಒಳಗಡೆ ಎಲ್ಲ ಕೆಲಸ ಪೂರ್ಣಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.ಆನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕುಡಿಯುವ ನೀರು, ಮೇವು ಇನ್ನಿತರ ತುರ್ತು ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಸರ್ಕಾರದಿಂದ ₹ 16 ಕೋಟಿ ನೀಡಲಾಗಿದೆ. ಅದರಂತೆ ಪ್ರತಿ ತಾಲೂಕಿನಲ್ಲೂ ತಹಸೀಲ್ದಾರ್‌ ಖಾತೆಯಲ್ಲಿ ತುರ್ತು ಸಮಸ್ಯೆಗಾಗಿ ₹ 50 ಲಕ್ಷ ಮೀಸಲಿರಿಸಲಾಗಿದೆ. ಜನಸಾಮಾನ್ಯರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವುದು ಇದರ ಉದ್ದೇಶವಾಗಿದೆ. ಭಟ್ಕಳ ಸೇರಿದಂತೆ ಪ್ರತಿ ತಾಲೂಕಿನ ತಹಸೀಲ್ದಾರ್‌ ಕಚೇರಿಯಲ್ಲೂ ಕುಡಿಯುವ ನೀರು, ಮೇವು ಇನ್ನಿತರ ಸಮಸ್ಯೆಗೆ ಸಂಬಂಧಿಸಿದಂತೆ ಸಹಾಯವಾಣಿ ಕೇಂದ್ರ ಆರಂಭಿಸಲಾಗುವುದು. ಸಾರ್ವಜನಿಕರು ಈ ಸಹಾಯವಾಣಿಗೆ ತಮ್ಮ ಸಮಸ್ಯೆ ಹೇಳಿಕೊಂಡರೆ ಸ್ಪಂದಿಸಲಾಗುವುದು ಎಂದ ಅವರು, ರೈತರ ಬೆಳೆ ಹಾನಿಗೆ ಸಂಬಂಧಿಸಿದಂತೆ ₹ 72 ಲಕ್ಷ ಬಂದಿದ್ದು, ಸರ್ವೆ ನಡೆಸಲಾಗುತ್ತದೆ. ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಈ ವೇಳೆ ಸಹಾಯಕ ಆಯುಕ್ತೆ ಡಾ. ನಯನಾ, ಭಟ್ಕಳ ತಹಸೀಲ್ದಾರ್‌ ತಿಪ್ಪೇಸ್ವಾಮಿ, ಹೊನ್ನಾವರ ತಹಸೀಲ್ದಾರ್‌ ರವಿರಾಜ, ಭಟ್ಕಳ ತಾಪಂ ಪ್ರಭಾರೆ ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.