ಸಾರಾಂಶ
1ರಿಂದ 10ನೇ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಬೇಕಾಗುವಂತಹ ಚಟುವಟಿಕೆಗಳು ಪೂರಕವಾಗಿ ಪಠ್ಯದಲ್ಲಿರುವಂತಹ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುವಂತೆ ಪ್ರತಿಭಾ ಕಾರಂಜಿಯನ್ನು ಸರ್ಕಾರದಿಂದ ಆಯೋಜಿಸಲಾಗುತ್ತಿದೆ .
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿದ್ಯಾರ್ಥಿಗಳು ತಮ್ಮಲ್ಲಿನ ಭರವಸೆಗಳನ್ನು ಕಳೆದುಕೊಳ್ಳದೇ ಸಾಧನೆಯತ್ತ ಮುಖ ಮಾಡಬೇಕು ಎಂದು ತಾಪಂ ಇಒ ಎಚ್.ಜಿ ಶ್ರೀನಿವಾಸ್ ಸಲಹೆ ನೀಡಿದರು.ಪಟ್ಟಣದ ಹೊರಭಾಗದ ಆದರ್ಶ ವಿದ್ಯಾಲಯದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಾಧನೆ ಮಾಡಲು ಸ್ಫೂರ್ತಿ ಹೊಂದಿರಬೇಕು. ಆಧುನಿಕ ಯುಗದಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂತೋಷದಾಯಕ ಜೀವನ ನಡೆಸಲು ಮುಂದಾಗಬೇಕು. ಹೃದಯ ವೈಶಾಲತೆ ಬೆಳೆಸಿಕೊಂಡು ಮಾನವೀಯ ಮೌಲ್ಯಗಳು ಅಳವಡಿಸಿಕೊಳ್ಳುವ ಜೊತೆಗೆ ಗುರು- ಹಿರಿಯರಿಗೆ ಗೌರವ ನೀಡುವಂತಹ ವರ್ತನೆಯನ್ನು ಕಲಿಯುವಂತೆ ವಿದ್ಯಾರ್ಥಿಗಳಿಗೆ ನೀತಿಪಾಠವನ್ನು ಹೇಳಿಕೊಡಬೇಕು ಎಂದರು.ಶಾಸಕರಾದ ಪಿ.ಎಂ ನರೇಂದ್ರಸ್ವಾಮಿ ಅವರ ಆಶಯದಂತೆ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣ ಆರಂಭಿಸಿ ತಾಪಂನಿಂದ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ ಮಾತನಾಡಿ, 1ರಿಂದ 10ನೇ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಬೇಕಾಗುವಂತಹ ಚಟುವಟಿಕೆಗಳು ಪೂರಕವಾಗಿ ಪಠ್ಯದಲ್ಲಿರುವಂತಹ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುವಂತೆ ಪ್ರತಿಭಾ ಕಾರಂಜಿಯನ್ನು ಸರ್ಕಾರದಿಂದ ಆಯೋಜಿಸಲಾಗುತ್ತಿದೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ತಳಗವಾದಿ ಪ್ರಕಾಶ್ ಮಾತನಾಡಿ, ಮಕ್ಕಳು ತಮ್ಮಲ್ಲಿನ ಕೀಳರಿಮೆ ಬಿಟ್ಟು ಪ್ರತಿಭೆ ಅನಾವರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಹೇಳಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಚಲುವಮ್ಮ ಚಿಕ್ಕಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಕೃಷ್ಣ, ಶಿಕ್ಷಣ ಸಮಾನ್ವಯಾಧಿಕಾರಿ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.