ಪೊಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮನೆ ಮನೆಗೆ ಪೊಲೀಸ್‌ ಯೋಜನೆ

| N/A | Published : Jul 21 2025, 01:30 AM IST / Updated: Jul 21 2025, 01:22 PM IST

ಪೊಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮನೆ ಮನೆಗೆ ಪೊಲೀಸ್‌ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳನ್ನು ಖುದ್ದಾಗಿ ಬಂದು ಹೇಳಲು, ಸ್ಥಳೀಯವಾಗಿ ಪೊಲೀಸರಿಗೆ ತಿಳಿಸಲು ಕಷ್ಟವೆನಿಸಿದರೆ, ಮನೆ ಮನೆಗೆ ಈ ಕಾರ್ಯಕ್ರಮದಲ್ಲಿ ಪ್ರತಿ ಮನೆಗೆ ಕರಪತ್ರ ವಿತರಿಸಲಾಗುತ್ತಿದೆ. ಕರಪತ್ರದಲ್ಲಿ ಹಿರಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ, ವಿಳಾಸ ನೀಡಲಾಗಿದೆ.

ಧಾರವಾಡ: ಸಮುದಾಯ ವ್ಯವಸ್ಥೆ ಬಲಪಡಿಸಿ, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಮನೆ ಮನೆಗೆ ಪೊಲೀಸ್‌ ಎಂಬ ವಿನೂತನ ಕಾರ್ಯಕ್ರಮ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹೇಳಿದರು.

ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಭಾನುವಾರ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಹೊಸ ಕಾರ್ಯಕ್ರಮ ಪರಿಚಯಿಸುವ ಮತ್ತು ಜನರ ಅಹವಾಲು ಕೇಳುವ ಮೂಲಕ ಚಾಲನೆ ನೀಡಿದ ಅವರು, ಈಗಾಗಲೇ ಬೀಟ್‌ ಪೊಲೀಸ್‌ ವ್ಯವಸ್ಥೆ ಮೂಲಕ ಪೊಲೀಸರು ಸಮುದಾಯ, ಜನರೊಂದಿಗೆ ನೇರ ಸಂಪರ್ಕ ಸಾಧಿಸಿದ್ದಾರೆ. ಇದೀಗ ಮನೆ ಮನೆಗೆ ಪೊಲೀಸ್‌ ಮೂಲಕ ಜನರ ಮನೆ ಬಾಗಿಲಿಗೆ ಬಂದು, ಪೊಲೀಸರು ಸಮಸ್ಯೆಗಳನ್ನು ಆಲಿಸಿ, ದಾಖಲಿಸುತ್ತಾರೆ. ಸಾಧ್ಯವಾದಷ್ಟು ಸ್ಥಳೀಯವಾಗಿ ಕಾನೂನು ಪ್ರಕಾರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಅಥವಾ ಸಂಬಂಧಿಸಿದವರ ಗಮನಕ್ಕೆ ತಂದು ಪರಿಹರಿಸುವ ಕ್ರಮಕೈಗೊಳ್ಳಲಿದ್ದಾರೆ ಎಂದರು.

ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳನ್ನು ಖುದ್ದಾಗಿ ಬಂದು ಹೇಳಲು, ಸ್ಥಳೀಯವಾಗಿ ಪೊಲೀಸರಿಗೆ ತಿಳಿಸಲು ಕಷ್ಟವೆನಿಸಿದರೆ, ಮನೆ ಮನೆಗೆ ಈ ಕಾರ್ಯಕ್ರಮದಲ್ಲಿ ಪ್ರತಿ ಮನೆಗೆ ಕರಪತ್ರ ವಿತರಿಸಲಾಗುತ್ತಿದೆ. ಕರಪತ್ರದಲ್ಲಿ ಹಿರಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ, ವಿಳಾಸ ನೀಡಲಾಗಿದೆ. ಸೂಕ್ಷ್ಮ ವಿಷಯ, ಸಂದರ್ಭಗಳಿದ್ದಲ್ಲಿ ದೂರವಾಣಿ ಮೂಲಕ ತಿಳಿಸಿದರೆ ಪೊಲೀಸರು ತಾವಿದ್ದಲ್ಲಿಗೆ ಬಂದು ಸಹಾಯ ಮಾಡಲಿದ್ದಾರೆ. ಅಗತ್ಯವಿದ್ದಾಗ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.

ಪೊಲೀಸ್‌ ಅಪ್ಲೀಕೇಶನ್‍ಗಳನ್ನು ಜನಸಾಮಾನ್ಯರು ಬಳಸಬೇಕು. ಇದರಲ್ಲಿ ಪೊಲೀಸರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸಕ್ರಿಯ ನಾಗರಿಕರಿದ್ದು, ಈ ಗುಂಪಿನಲ್ಲಿ ಅಧಿಕೃತ ಮಾಹಿತಿ ನೀಡಿ ಸುರಕ್ಷತಾ ಎಚ್ಚರಿಕೆಗಳು ಮತ್ತು ಸಂಚಾರದ ಅಪ್‍ಡೇಟ್‍ಗಳನ್ನು ಹಂಚಿಕೊಳ್ಳಬಹುದು ಎಂದರು.

ಗ್ರಾಮದ ಹಿರಿಯರಾದ ಸಹದೇವ ಹಾವೇರಿ ಮತ್ತು ಚನಬಸಪ್ಪ ಮಟ್ಟಿ ಮಾತನಾಡಿ, ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಅಹಿತಕರ ಘಟನೆಗಳು ನಡೆಯದಂತೆ ಕಾಳಜಿ ವಹಿಸಲು ಮನವಿ ಮಾಡಿಕೊಂಡರು. ಈ ವೇಳೆ ಡಿವೈಎಸ್‌ಪಿ ವಿನೋದ ಮುಕ್ತೆದಾರ, ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷ ವಿಠ್ಠಲ ಬೋವಿ, ಉಪಾಧ್ಯಕ್ಷೆ ಸುಶೀಲಮ್ಮ ಸಾಲಿ ಇದ್ದರು. ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಮಲ್ಲಯ್ಯ ನಂದಿಕೋಲಮಠ ಕಾರ್ಯಕ್ರಮ ನಿರೂಪಿಸಿದರು.

ನೂತನ ಕಾರ್ಯಕ್ರಮದ ಅಂಗವಾಗಿ ಪೊಲೀಸ್‌ ವರಿಷ್ಠಾಧಿಕಾರಿಗಳು ಗ್ರಾಮದ ಹಳೆ ಬಸ್ ನಿಲ್ದಾಣ ಹತ್ತಿರದ ಓಣಿ, ಮಲ್ಲಯ್ಯನಗುಡಿ ಓಣಿ, ಕಾಮನಗುಡಿ ಓಣಿ, ಹರಿಜನಕೇರಿ, ಚಲವಾದಿಯವರ ಓಣಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಂಚರಿಸಿ, ಮನೆಮನೆಗೆ ಭೇಟಿ ನೀಡಿ, ಕುಟುಂಬಸ್ಥರನ್ನು ಮಾತನಾಡಿಸಿದರು. ಜತೆಗೆ ಕರಪತ್ರಗಳನ್ನು ನೀಡಿ ಪೊಲೀಸರೊಂದಿಗೆ ಸಹಕರಿಸಲು ಮನವಿ ಮಾಡಿದರು.

ಪೊಲೀಸರು ಕೇವಲ ಅಪರಾಧ ನಡೆದಾಗ ಮಾತ್ರ ಸ್ಥಳಕ್ಕೆ ಬರುವ ಬದಲು, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಪರಾಧ ನಡೆಯದಂತೆ ತಡೆಯುವುದು ಮತ್ತು ಜನರಲ್ಲಿ ಸುರಕ್ಷತಾ ಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮವಹಿಸಿದೆ. ಪೊಲೀಸ್‌ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿಶ್ವಾಸದ ಸಂಬಂಧವನ್ನು ಬೆಳೆಸುವುದು ಮತ್ತು ಅಪರಾಧಗಳನ್ನು ತಡೆಗಟಲು ವಿನೂತನ ಕ್ರಮವಾಗಿದೆ ಎಂದು ಧಾರವಾಡ ಎಸ್ಪಿ ಗುಂಜನ್‌ ಆರ್ಯ ಹೇಳಿದರು.

Read more Articles on