ಸಾರಾಂಶ
ಪಿಇಎಸ್ ವಿಶ್ವವಿದ್ಯಾಲಯದ ನೂತನ ಕುಲಾಧಿಪತಿಯಾಗಿ ಪ್ರೊ.ಜವಾಹರ್ ದೊರೆಸ್ವಾಮಿ ನೇಮಕಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಿಇಎಸ್ ವಿಶ್ವವಿದ್ಯಾಲಯದ ನೂತನ ಕುಲಾಧಿಪತಿಯಾಗಿ ಪ್ರೊ.ಜವಾಹರ್ ದೊರೆಸ್ವಾಮಿ ನೇಮಕಗೊಂಡಿದ್ದಾರೆ.ಮಾ.17ರಂದು ನಡೆದ ಪೀಪಲ್ಸ್ ಎಜುಕೇಶನ್ ಸೊಸೈಟಿಯ (ಪಿಇಎಸ್ ವಿಶ್ವವಿದ್ಯಾಲಯದ ಪ್ರಾಯೋಜಕ ಸಂಸ್ಥೆ) ಆಡಳಿತ ಮಂಡಳಿಯ ಸಭೆಯಲ್ಲಿ ಸಮಿತಿಯ ಸದಸ್ಯರು, ಪ್ರೊ.ಜವಾಹರ್ ದೊರೆಸ್ವಾಮಿ ಅವರನ್ನು ಕುಲಾಧಿಪತಿಯಾಗಿ ನೇಮಕ ಮಾಡಲು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡರು. ಇವರು ಮಾ.21ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗುಣಮಟ್ಟದ ಶಿಕ್ಷಣದ ಪ್ರತಿಪಾದಕರಾದ ಪ್ರೊ.ಜವಾಹರ್ ದೊರೆಸ್ವಾಮಿ ಅವರು, ಕಾರ್ಯಕ್ಷಮತೆ, ನಿರ್ವಹಣೆ ಮತ್ತು ಗುಣಮಟ್ಟದ ಮಾನದಂಡಗಳ ಮೇಲೆ ಗಮನ ಹರಿಸುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ. ನಾವೀನ್ಯತೆ ಮತ್ತು ಉದ್ಯಮಶೀಲತಾ ಕೇಂದ್ರ ಮತ್ತು ಆಧುನಿಕ ಪ್ರಯೋಗಾಲಯಗಳು ಸೇರಿದಂತೆ ಹಲವಾರು ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರಗಳ ಸ್ಥಾಪನೆಗೆ ಕಾರಣವಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಶೈಕ್ಷಣಿಕ ಮತ್ತು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿಸಿದೆ. 1991 ರಿಂದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಟ್ಟಾರೆ ಸುಮಾರು ₹100 ಕೋಟಿಗೂ ಹೆಚ್ಚು ವಿದ್ಯಾರ್ಥಿ ವೇತನ ನೀಡಲಾಗಿದೆ. ಇದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬೆಂಬಲಿಸುವ, ಸಬಲೀಕರಣಗೊಳಿಸುವ ಅವರ ಬದ್ಧತೆಗೆ ಸಾಕ್ಷಿಯಾಗಿದೆ.ಜವಾಹರ್ ದೊರೆಸ್ವಾಮಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಮತ್ತು ಅಮೆರಿಕದ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಅವರ ದೃಷ್ಟಿಕೋನ ಮತ್ತು ಗುಣಮಟ್ಟದ ನಿರಂತರ ಅನ್ವೇಷಣೆ ಪಿಇಎಸ್‌ನ ಸ್ಥಾನಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಲ್ಲದೇ, ದೇಶದ ಉನ್ನತ ಶಿಕ್ಷಣದ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಮುಂದುವರೆಯಲು ಸಹಕಾರಿಯಾಗಿದೆ ಎಂದು ಪಿಇಎಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.