ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನಾದ್ಯಂತ ಬುಧವಾರ ರಾತ್ರಿ ಇಡೀ ಸುರಿದ ಭಾರಿ ಮಳೆಗೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಿಂತಿದ್ದ ಭತ್ತದ ಪೈರು ನೆಲಕ್ಕೆ ಮಕಾಡೆ ಮಲಗಿದ್ದು, ರೈತ ಸಮೂಹ ಕಂಗಾಲಾಗಿದೆ.ತುಂಗಭದ್ರ ಅಣೆಕಟ್ಟೆಯಲ್ಲಿ ಸಮರ್ಪಕ ನೀರಿಲ್ಲದೇ ಹಾಕಿದ ಭತ್ತ ಕೈ ಸೇರುತ್ತೋ ಇಲ್ಲವೋ ಎಂದು ಆತಂಕದಲ್ಲಿ ದಿನದೂಡುತ್ತಿದ್ದ ರೈತರಿಗೆ ಬುಧವಾರ ರಾತ್ರಿ ಸುರಿದ ವಿಶಾಖ ಮಳೆ ಮತ್ತೊಂದು ಬರೆ ಎಳೆದಿದೆ.
ಕಾರಟಗಿಯಲ್ಲಿ ೩೬.೨ ಮಿ.ಮೀ., ಸಿದ್ದಾಪುರದಲ್ಲಿ ೧೯.೩ ಮಿ.ಮೀ. ಮಳೆ ಸುದಿದಿದೆ. ಕಾರಟಗಿ ಸೀಮೆ, ಯರಡೋಣಾ ಹೋಬಳಿ ಸೇರಿದಂತೆ ತುಂಗಭದ್ರ ನದಿ ಪಾತ್ರದ ಎಲ್ಲೆಡೆ ಹಚ್ಚ ಹಸರಿನಿಂದ ಕಂಗೊಳಿಸುತ್ತಿದ್ದ ಭತ್ತ ಸಂಪೂರ್ಣ ನೀರಿನ ಹೊಡೆತಕ್ಕೆ ನೆಲಕಚ್ಚಿದೆ.ಬುಧವಾರ ರಾತ್ರಿ ಇಡೀ ಮಳೆ ಬಿದ್ದ ಬೆಳೆ ಹಾನಿಯಾದ ಮಾಹಿತಿ ಬರುತ್ತಿದ್ದಂತೆ ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಕೃಷಿ ಅಧಿಕಾರಿ ಸಂತೋಷ್ ಪಟ್ಟದಕಲ್ಲು, ಕಂದಾಯ ಅಧಿಕಾರಿಗಳ ಮತ್ತು ಕೃಷಿ ಅಧಿಕಾರಿಗಳೊಂದಿಗೆ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನಾದ್ಯಂತ ೩೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಈ ಬಾರಿ ನೀರು ಸಿಗುವ ಅನುಮಾನದಿಂದಲೇ ರೈತರು ನಾಟಿ ಮಾಡಿದ್ದರು. ನಂದ್ಯಾಲ ಸೋನಾ, ಕಾವೇರಿ ಸೋನಾ, ಸೋನಾ ಮಸೂರಿ ಸೇರಿದಂತೆ ಅತಿಹೆಚ್ಚು ಆರ್‌ಎನ್‌ಆರ್ ತಳಿಯನ್ನೇ ಬಿತ್ತನೆ ಮಾಡಿದ್ದರು. ಅಧಿಕ ಇಳುವರಿ ಬರುವ ಆರ್‌ಎನ್‌ಆರ್ ತಳಿಯ ಮೇಲೆ ನಂಬಿಕೆ ಇಟ್ಟ ರೈತರಿಗೆ ಭಾರಿ ಆಘಾತವಾಗಿದೆ. ಈ ಮಳೆಗೆ ಎಲ್ಲೆಡೆ ಆರ್‌ಎನ್‌ಆರ್ ಬೆಳೆಯೇ ನೆಲಕಚ್ಚಿದೆ.ಹಲವು ಕಡೆ ಆರ್‌ಎನ್‌ಆರ್ ತಳಿಯ ಬೆಳೆ ತನೆ ಒಡೆದು ಕಾಳು ತುಂಬುವ ಹಂತದಲ್ಲಿದ್ದರೆ, ನದಿ ಸೀಮೆಯಲ್ಲಿ ಕಟಾವು ಹಂತಕ್ಕೆ ಬಂದು ನಿಂತಿತ್ತು. ಸಿದ್ದಾಪುರ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೨೫೦ ಹೆಕ್ಟೇರ್ ಪ್ರದೇಶ ಮತ್ತು ಕಾರಟಗಿ ಹೋಬಳಿಯಲ್ಲಿ ೩೦೦ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಕಟ್ಟಾವು ಆರ್ದೆ. ಉಳಿದೆಡೆ ೧೫ ದಿನಗಳಲ್ಲಿ ಕಟಾವು ಮಾಡುವ ಹಂತದಲ್ಲಿ ಬೆಳೆ ಇತ್ತು. ಸಿದ್ದಾಪುರ ಹೋಬಳಿಯ ತುಂಗಭದ್ರ ನದಿ ಪಾತ್ರದ ಈಳಿಗನೂರು, ಉಳೇನೂರು, ಬೆನ್ನೂರು, ಜಮಾಪುರ ಭಾಗದಲ್ಲಿ ರಾತ್ರಿ ಸುರಿದ ಗಾಳಿ ಮಳೆಗೆ ಕಟಾವು ಹಂತಕ್ಕೆ ಬಂದ ಪೈರು ನೆಲಕ್ಕುರಿಳಿದೆ.
ಎಕರೆಗೆ ₹೨೫-೩೦ ಸಾವಿರ ಖರ್ಚು ಮಾಡಿದ್ದು, ಇನ್ನು ಸ್ವಲ್ಪ ದಿನಗಳಲ್ಲಿ ಭತ್ತ ಕಟಾವು ಆರಂಭಿಸುತ್ತಿದ್ದರು. ಭತ್ತ ನಾಟಿಯಿಂದ ಹಿಡಿದು ಕಟಾವಿನವರೆಗೂ ತಗಲುವ ವೆಚ್ಚ ದುಬಾರಿಯಾಗಿದೆ. ಸಕಾಲಕ್ಕೆ ಮುಂಗಾರು ಬಾರದೇ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಇನ್ನೊಂದು ವಾರದಲ್ಲಿ ಕಟಾವು ಮಾಡಬೇಕಾಗಿದ್ದ ಸಾವಿರಾರು ಹೆಕ್ಟರ್ ಭತ್ತ ಇದೀಗ ಜಮೀನಿನಲ್ಲೇ ನೆಲಸಮವಾಗಿರುವುದು ರೈತರಿಗೆ ರಕ್ತ ಕಣ್ಣೀರು ತರಿಸಿದಂತಾಗಿದೆ.ಬೆಳೆ ಹಾನಿ: ಕಾರಟಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 15000 ಹೆಕ್ಟರ್ ಪ್ರದೇಶದಲ್ಲಿ ನಾಟಿಯಾಗಿದೆ. 14,500 ಹೆಕ್ಟರ್ ಕಟಾವು ಬಾಕಿ ಇತ್ತು. ಸಿದ್ದಾಪುರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 16 ಸಾವಿರ ಹೆ.ಪ್ರದೇಶದಲ್ಲಿ ನಾಟಿ ಮಾಡಲಾಗಿದ್ದು, ೩೫೦ ರಿಂದ ೪೦೦ ಎಕರೆ ಪ್ರದೇಶ ಕಟಾವು ಆದ ಅಂದಾಜಿದೆ.ಎಲ್ಲೆಲ್ಲಿ ಹಾನಿ?: ಹುಳ್ಳಿಹಾಳ, ತೊಂಡಿಹಾಳ, ಹಗೇದಾಳ, ಬೇವಿನಾಳ, ಪನ್ನಾಪುರ, ಬಸವಣ್ಣ ಕ್ಯಾಂಪ್, ಚೆಳ್ಳೂರು ಭಾಗದಲ್ಲಿ ಅತಿಹೆಚ್ಚು ಆರ್‌ಎನ್‌ಆರ್ ತಳಿ ನಾಟಿಯಾಗಿದೆ. ಅತಿಹೆಚ್ಚು ನಷ್ಟದ ಅಂದಾಜಿದೆ. ಬೂದುಗುಂಪಾ, ಯರಡೋಣಾ, ಕಿಂದಿ ಕ್ಯಾಂಪ್, ಮರ್ಲಾನಹಳ್ಳಿ, ರವಿನಗರ, ಸಿದ್ದಾಪುರ, ಗುಂಡೂರು, ಸಿಂಗನಾಳ, ಮುಷ್ಟೂರು, ಬರಗೂರು, ಕೊಟ್ನೆಕಲ್, ಕುಂಟೋಜಿ, ಜಮಾಪುರ, ಅರುಣೋದಯ ತಾಂಡ, ಈಳಿಗನೂರು, ಉಳೇನೂರು, ಬೆನ್ನೂರು, ಶಾಲಿಗನೂರು, ಕಕ್ಕರಗೋಳ, ನಂದಿಹಳ್ಳಿ ಸೇರಿ ತಾಲೂಕಿನಾದ್ಯಂತ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿನ ಭತ್ತದ ಬೆಳೆ ಸಂಪೂರ್ಣ ಮಕಾಡೆ ಮಲಗಿದೆ. ಆದರೆ ಅಧಿಕಾರಿಗಳು ಸರ್ವೇ ನಂತರ ಎಲ್ಲೆಲ್ಲಿ? ಎಷ್ಟು? ನಷ್ಟವಾಗಿದೆ ಎಂಬುದು ತಿಳಿಯಲಿದೆ.
ಮಳೆಯಿಂದ ಭತ್ತ ಹಾನಿಯಾದ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಗುರುವಾರ ಸುಮಾರು ೧೦ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಮಳೆ-ಬೆಳೆ ಹಾನಿ ಮಾಹಿತಿ ನೀಡಿರುವೆ. ಅಧಿಕಾರಿಗಳಿಂದ ಸರ್ವೇ ಮಾಡಿದ್ದು, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಾರಟಗಿ ತಹಸೀಲ್ದಾರ್ ಎಂ.ಕುಮಾರಸ್ವಾಮಿ ತಿಳಿಸಿದ್ದಾರೆ.