ಸಾರಾಂಶ
ಕಂಪನಿಗಳು ತಮ್ಮ ವ್ಯಾಪ್ತಿಯ ಷೇರುದಾರರಿಗೆ ಬೇಕಾದ ಅಗತ್ಯ ಸೇವೆ ಒದಗಿಸುವ ಜೊತೆಗೆ ಆಂತರಿಕ ವ್ಯಾಪಾರ ಹಾಗೂ ಬಾಹ್ಯ ವ್ಯಾಪಾರಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಉತ್ಪನ್ನಗಳಿಂದ ತಯಾರಿಸಿ ಬ್ರಾಂಡ್ ಮೂಲಕ ತಮ್ಮ ಕಂಪನಿ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುವ ಕಡೆ ಗಮನಹರಿಸಿ.
ಕನ್ನಡಪ್ರಭ ವಾರ್ತೆ ಮಂಡ್ಯ
ರೈತ ಉತ್ಪಾದಕ ಕಂಪನಿಗಳು ಅತ್ಯಂತ ಕ್ರಿಯಾಶೀಲವಾಗಿ ರೈತ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇವುಗಳ ಯಶಸ್ವಿ ಮುನ್ನಡೆಗೆ ಷೇರುದಾರರ ಪಾತ್ರ ಅತಿ ಮುಖ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್. ಅಶೋಕ್ ಹೇಳಿದರು.ನಗರದ ಎಪಿಎಂಸಿ ಆವರಣದಲ್ಲಿ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ನೂತನ ಕೀರೆ ಮಡಿ ಬೆಲ್ಲದ ಬ್ರಾಂಡನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಂಪನಿಗಳು ತಮ್ಮ ವ್ಯಾಪ್ತಿಯ ಷೇರುದಾರರಿಗೆ ಬೇಕಾದ ಅಗತ್ಯ ಸೇವೆ ಒದಗಿಸುವ ಜೊತೆಗೆ ಆಂತರಿಕ ವ್ಯಾಪಾರ ಹಾಗೂ ಬಾಹ್ಯ ವ್ಯಾಪಾರಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಉತ್ಪನ್ನಗಳಿಂದ ತಯಾರಿಸಿ ಬ್ರಾಂಡ್ ಮೂಲಕ ತಮ್ಮ ಕಂಪನಿ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುವ ಕಡೆ ಗಮನಹರಿಸುವಂತೆ ಸಲಹೆ ನೀಡಿದರು.ಇದರಲ್ಲಿ ಪ್ರತಿಯೊಬ್ಬ ಷೇರುದಾರರು ಕೂಡ ತಮ್ಮ ಕೃಷಿಗೆ ಹಾಗೂ ಕುಟುಂಬದ ನಿರ್ವಹಣೆಗೆ ಬೇಕಾದ ಎಲ್ಲ ಪರಿಕರಗಳನ್ನು ತಮ್ಮ ಕಂಪನಿಯ ಮೂಲಕವೇ ಖರೀದಿ ಮಾಡುವುದರಿಂದ ಕಂಪನಿ ಆದಾಯ ಹೆಚ್ಚಾಗಿ ಪರೋಕ್ಷವಾಗಿ ತಾವು ವಿನಯೋಗಿಸಿದ ಷೇರು ಧನಕ್ಕೆ ಪೂರಕವಾದ ಲಾಭಾಂಶ ಪಡೆಯಬಹುದು ಎಂದರು.
ವಿಕಸನ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರ ಗುರು ಮಾತನಾಡಿ, ರೈತ ಉತ್ಪಾದಕ ಕಂಪನಿಗಳು ಪ್ರಸ್ತುತ ರೈತ ಸಮುದಾಯದ ರಾಯಭಾರಿಗಳಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಅನೇಕ ಕಾರ್ಯ ಯೋಜನೆಗಳನ್ನು ಷೇರುದಾರರ ಮನೆ ಬಾಗಿಲಿಗೆ ತಲುಪಿಸುವ ಹಾಗೂ ಅವರಿಗೆ ಬೇಕಾದ ಅಗತ್ಯ ಸೇವೆ ಒದಗಿಸುವ ವೇದಿಕೆಯಾಗಿದೆ. ಇದನ್ನು ಷೇರುದಾರರು ಸಕ್ರಿಯವಾಗಿ ಬಳಸಿಕೊಂಡು ನೀರು ನಿರ್ವಹಣೆ, ಮಣ್ಣಿನ ಫಲವತ್ತತೆ ಹಾಗೂ ನಮ್ಮ ಪರಿಸರ ಸಂರಕ್ಷಣೆ ಕಡೆಗೆ ಹೆಚ್ಚು ಗಮನಹರಿಸಬೇಕೆಂದು ಮನವಿ ಮಾಡಿದರು.ಅಧ್ಯಕ್ಷತೆಯನ್ನು ಬೆಲ್ಲ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕಾರಸವಾಡಿ ಮಹದೇವು, ಸಿಇಒ ಎನ್.ಎಸ್.ಪ್ರದೀಪ್. ಭಾರತೀಯ ಸ್ಟೇಟ್ ಬ್ಯಾಂಕ್ ಕೃಷಿ ಮತ್ತು ವಾಣಿಜ್ಯ ಶಾಖೆಯ ವ್ಯವಸ್ಥಾಪಕ ಸುರೇಶ್, ಬೆಂಗಳೂರಿನ ಆರ್.ಡಿ.ಫ್ಲೆಕ್ಸ್ ಪ್ಯಾಕ್ ಕಂಪನಿಯ ಮಾಲೀಕ ಅರುಣ್, ಮೈಸೂರಿನ ಕಿಸಾನ್ ಬಂಡಿ ಸಂಸ್ಥೆ ನಿರ್ದೇಶಕ ರಾಜೀವ್, ಬೆಂಗಳೂರಿನ ಸ್ಟೋರ್ ಕಿಂಗ್ ಸಂಸ್ಥೆಯ ನಿರ್ದೇಶಕ ಕಾರ್ತಿಕ್, ಒನ್‌ರೂಟ್ ಸಂಸ್ಥೆ ಮುಖ್ಯಸ್ಥ ಅಭಿಷೇಕ್ ಇತರರಿದ್ದರು.