ಕಾರ್ಯಪ್ಪ ಬಡಾವಣೆಯಲ್ಲಿ ಹತ್ತಾರು ಸಮಸ್ಯೆ: ದುರ್ವಾಸನೆಯಲ್ಲೇ ಬದುಕು!

| Published : May 30 2024, 12:55 AM IST

ಸಾರಾಂಶ

ಸೋಮವಾರಪೇಟೆ ತಾಲೂಕಿನ ಮಾದಾಪುರದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನಿರ್ಮಾಣ ಮಾಡಿಕೊಡಲಾಗಿರುವ ಕಾರ್ಯಪ್ಪ ಬಡಾವಣೆಯಲ್ಲಿ ನಿವಾಸಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಮನೆಯ ಬದಿ ಹಾಗೂ ಮನೆಯ ಸಮೀಪದಲ್ಲಿ ತ್ಯಾಜ್ಯ ನೀರು ಹರಿದು ಹೋಗುತ್ತಿದ್ದು, ದುರ್ವಾಸನೆಯಿಂದ ಕೂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸೋಮವಾರಪೇಟೆ ತಾಲೂಕಿನ ಮಾದಾಪುರದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನಿರ್ಮಾಣ ಮಾಡಿಕೊಡಲಾಗಿರುವ ಕಾರ್ಯಪ್ಪ ಬಡಾವಣೆಯಲ್ಲಿ ನಿವಾಸಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಮನೆಯ ಬದಿ ಹಾಗೂ ಮನೆಯ ಸಮೀಪದಲ್ಲಿ ತ್ಯಾಜ್ಯ ನೀರು ಹರಿದು ಹೋಗುತ್ತಿದ್ದು, ದುರ್ವಾಸನೆಯಿಂದ ಕೂಡಿದೆ. ಆದ್ದರಿಂದ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.

ತ್ಯಾಜ್ಯ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗಿದೆ. ಆದರೆ ಈ ಬಡಾವಣೆಯಲ್ಲಿ ಚರಂಡಿಗಳು ವಿಶೇಷ, ತಂತ್ರಜ್ಞಾನ ಉಪಯೋಗಿ ನಿರ್ಮಿಸಲಾಗಿದೆ ಎಂಬಂತೆ ಕಂಡು ಬರುತ್ತಿದೆ!

ಒಂದು ಕಡೆಯಿಂದ ಸಂಪೂರ್ಣ ಇಳಿಜಾರು ಪ್ರದೇಶವಿದ್ದರೂ ತಾನಾಗಿಯೇ ನೀರು ಸರಾಗವಾಗಿ ಹರಿದು ಹೋಗುವ ಅವಕಾಶವಿದ್ದರೂ ಕಾಂಕ್ರಿಟ್ ಚರಂಡಿ ನಿರ್ಮಿಸಿ ಕೊಳಚೆ ನೀರನ್ನು ಮನೆಗಳ ಎದುರು ಸಂಗ್ರಹವಾಗುವ ಹಾಗೆ ಮಾಡಲಾಗಿದೆ. ಇದರಿಂದ ಈಗ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಚರಂಡಿಯಿಂದ ಬಡಾವಣೆಯ ಹೊರಕ್ಕೆ ನೀರು ಹರಿಯಲು ಸಣ್ಣ ಪೈಪ್ ಗಳನ್ನು ಅಳವಡಿಸಲಾಗಿದ್ದು, ಅಲ್ಲಿನ ನೀರು ಹರಿಯದಂತೆ ಎತ್ತರಿಸಲಾಗಿದೆ. ಇದರಿಂದ ಎಲ್ಲರ ಮನೆಗಳಿಂದ ಬರುವ ಶೌಚನೀರು ಸೇರಿದಂತೆ ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದ್ದು, ಪ್ರದೇಶ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಪರಿಣಮಿಸಿದ್ದು, ಸಾಂಕ್ರಮಿಕ ರೋಗ ಹರಡುವ ಸ್ಥಿತಿ ಕಂಡುಬಂದಿದೆ.

ಈ ಬಗ್ಗೆ ಸಂಬಂಧಿಸಿದವರಿಗೆ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀತಿ ಸಂಹಿತೆ ಹೆಸರು ಹೇಳುವ ಮೂಲಕ ಸಂಬಂಧಿಸಿದವರು ನುಣುಚಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಬಡಾವಣೆ ನಿರ್ಮಾಣ ಮಾಡಿದ ಬಳಿಕ ಅಲ್ಲಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಆದರೆ ಇಲ್ಲಿ ಅದ್ಯಾವುದು ಇಲ್ಲ. ಬಡಾವಣೆಯಲ್ಲೊಂದು ಆಟದ ಮೈದಾನ, ಸಮುದಾಯ ಭವನ ಅರ್ಧದಲ್ಲಿ ನಿಂತಿದೆ. ಇಲ್ಲಿ ಅಂಗಡಿ ಮಳಿಗೆ ಇಲ್ಲ. ಅಗತ್ಯವಾದ ಯಾವುದೇ ಸೌಭ್ಯಗಳಿಲ್ಲ. ಈ ಪ್ರಮುಖ ಸೌಲಭ್ಯಗಳನ್ನು ಈಡೇರಿಸಿಕೊಡಬೇಕೆಂಬುದು ಬಡಾವಣೆ ನಿವಾಸಿಗಳ ಆಗ್ರಹ.

ಕಸ ವಿಲೇವಾರಿ ಘಟಕ ನಿರ್ಮಾಣವಾಗಿದ್ದರೂ ಕೂಡ ಕಸ ವಿಲೇವಾರಿ ಘಟಕಕ್ಕೆ ಕಸವನ್ನು ಸಾಗಿಸಲು ಸರಿಯಾದ ರಸ್ತೆ ಕೂಡ ಇಲ್ಲ. ಕಸವನ್ನು ಸಿಕ್ಕ ಸಿಕ್ಕ ಕಡೆಗಳಲ್ಲಿ ಸುರಿಯಲಾಗಿದೆ. ಸುಂದರವಾದ ಪ್ರದೇಶದಲ್ಲಿ ಚಂದದ ಮನೆಗಳ ಒಳಗೆ ಗಬ್ಬೆದ್ದು ನಾರುವ ಪರಿಸ್ಥಿತಿಯಿಂದ ಬಡಾವಣೆಯ ನಿವಾಸಿಗಳು ವಿಧಿ ಇಲ್ಲದೆ ಬದುಕುವ ಪರಿಸ್ಥಿತ ಎದುರಾಗಿದ್ದು, ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.