ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದೇವಸ್ಥಾನದ ಆವರಣದ 12 ಜಾಲಿ ಜಾತಿಯ ಮರಗಳ ರೆಂಬೆ ಕೊಂಬೆಗಳನ್ನು ಕಡಿಯಲು ಅನುಮತಿ ನೀಡಿದರೆ, ಪರಿಸರಕ್ಕೆ ಪೂರಕವಾಗಿದ್ದ ದೊಡ್ಡ ದೊಡ್ಡ ಹಸಿರಾಗಿದ್ದ, ಪರಿಸರಕ್ಕೆ ಶುದ್ಧ ಗಾಳಿ ನೀಡುತ್ತಿದ್ದ ಮರಗಳನ್ನೇ ಕಡಿದು ಹಾಕಿದ್ದಕ್ಕೆ ಸಾರ್ವಜನಿಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.ನಗರದ ದೇವರಾಜ ಅರಸು ಬಡಾವಣೆ ಎ ಬ್ಲಾಕ್‌ನ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನ ಆವರಣದ 12 ಜಾಲಿ ಜಾತಿಯ ಮರಗಳ ರೆಂಬೆ ಕೊಂಬೆಗಳು, ಮುಳ್ಳುಗಳು ದೇವಸ್ಥಾನಕ್ಕೆ ಬರುವ ಭಕ್ತರು, ಸಾರ್ವಜನಿಕರ ಮೇಲೆ ಬಿದ್ದು, ಮುಳ್ಳುಗಳು ಕಾಲಿಗೆ ಚುಚ್ಚಿ ನಡೆದಾಡಲು ತೊಂದರೆಯಾಗುತ್ತಿದೆಯೆಂದು ಅರಣ್ಯ ಇಲಾಖೆಗೆ ಸಮಿತಿ ಮನವಿ ಮಾಡಿತ್ತು.
ದೇವಸ್ಥಾನ ಸಮಿತಿಗೆ ಮರವನ್ನು ಹರಾಜು ಮೂಲಕ ತೆರವುಗೊಳಿಸಲು ದಾವಣಗೆರೆ ವಲಯದ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಕೆಟಿಜೆ ನಗರದ ವ್ಯಕ್ತಿಯೊಬ್ಬರು ಬಹಿರಂಗ ಹರಾಜು ಬಿಡ್‌ನಲ್ಲಿ ಪೂರ್ಣ ಮೊತ್ತ ಪಾವತಿಸಿ, 12 ಜಾಲಿ ಜಾತಿ ಮರಗಳ ರೆಂಬೆ ಕೊಂಬೆಗಳು, ಮುಳ್ಳುಗಳ ಕೊಂಬೆ ತೆರವಿಗೆ ಗುತ್ತಿಗೆದಾರನಿಗೆ ಉಪ ಅರಣ್ಯ ರಕ್ಷಣಾಧಿಕಾರಿ ಅವಕಾಶ ನೀಡಿದ್ದರು.ಅರಣ್ಯ ಇಲಾಖೆಯಿಂದ ನಿಗದಿಪಡಿಸಿದ್ದ ಜಾಲಿ ಜಾತಿಯ ಮರಗಳ ರೆಂಬೆ ಕೊಂಬೆಗಳು, ಮುಳ್ಳುಗಳ ಕೊಂಬೆ ತೆರವು ಮಾಡಬೇಕಿದ್ದ ವ್ಯಕ್ತಿಯು ಕೆಲಸಗಾರರನ್ನು ಬಳಸಿಕೊಂಡು, ಅಲ್ಲಿ ಬೆಳೆದು ನಿಂತಿದ್ದ ದೊಡ್ಡ ದೊಡ್ಡ ಮರಗಳನ್ನೇ ಧರೆಗುರುಳಿಸಿದ್ದನ್ನು ಸ್ಥಳೀಯ ಯುವ ವಕೀಲ ಸೇರಿದಂತೆ ದೇವರಾಜ ಅರಸು ಬಡಾವಣೆ ಎ ಬ್ಲಾಕ್ ನಿವಾಸಿಗಳು, ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ.
ಪಾರ್ಕ್ ಅಭಿವೃದ್ಧಿಗೆ ಮರಗಳನ್ನು ಜಾಲಿ ಜಾತಿಯ ಮರಗಳನ್ನು ತೆರವು ಮಾಡಿದ್ದಾಗಿ ಮುಳ್ಳಿನ ಮರಗಳ ರೆಂಬೆ ಕೊಂಬೆ ಕಡಿಯಲು ಅನುಮತಿ ಪಡೆದಿದ್ದ ವ್ಯಕ್ತಿಯು ಅನುಮತಿ ಪಡೆದಿದ್ದ ಮರಗಳ ಜೊತೆಗೆ ದೊಡ್ಡದಾಗಿ ಬೆಳೆದಿದ್ದ ಪರಿಸರಕ್ಕೆ, ಜನರಿಗೂ ಪೂರಕವಾಗಿದ್ದ ಮರಗಳನ್ನು ಬುಡದವರೆಗೂ ಕತ್ತರಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ತನಗೆ ಮರ ಕಡಿಯಲು ಅರಣ್ಯ ಇಲಾಖೆಯೇ ಅನುಮತಿ ನೀಡಿದೆ. ಅರಣ್ಯ ಇಲಾಖೆ ಅಧಿಕಾರಿಗಳೇ ಮರ ಕಡಿಯಲು ಹೇಳಿದ್ದಾರೆ.
ಮರಗಳ ಹನನ ಮಾಡುವವರ ವಿರುದ್ಧ ಯಾರೋ ದೂರು ಕೊಡುವುದಲ್ಲ, ಸ್ವತಃ ಜಿಲ್ಲಾ ಆಡಳಿತ, ಪಾಲಿಕೆ, ಅರಣ್ಯ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿ, ಕಡಿತ ಮರಗಳಿಗೆ ಪ್ರತಿಯಾಗಿ ಪ್ರತಿ ಮರಕ್ಕೆ 25 ಸಸಿ ನೆಟ್ಟು ಬೆಳೆಸುವ ಹಾಗೂ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲಿ ಎಂದು ಜನರು ಒತ್ತಾಯಿಸಿದ್ದಾರೆ.ದೇವರಾಜ ಅರಸು ಬಡಾವಣೆ ಎ ಬ್ಲಾಕ್‌ನಲ್ಲಿ ಮರಗಳನ್ನು ಕಡಿತ ವಿಚಾರ ಈಗಷ್ಟೇ ತಮಗೆ ಕೆಲವರಿಂದ ಗೊತ್ತಾಗಿದೆ. ಬುಧವಾರವೇ ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡುತ್ತೇನೆ. ಪರಿಸರ ಪ್ರೇಮಿಗಳು ನನಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಲಿಖಿತ ದೂರು ನೀಡುವುದಾಗಿಯೂ ತಿಳಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ.ದಾವಣಗೆರೆ ದೇವರಾಜ ಅರಸು ಬಡಾವಣೆಯಲ್ಲಿ ಹತ್ತಾರು ಮರಗಳನ್ನು ಕಡಿದು ಹಾಕಲಾಗಿದೆ. ಅರಣ್ಯ ಇಲಾಖೆ ಅನುಮತಿ ಇದೆಯೆಂದು, ದೇವಸ್ಥಾನ ಸಮಿತಿ, ಆ ಸಮಿತಿ, ಈ ಸಮಿತಿ ಹೇಳಿದೆಯೆಂದು ಇದ್ದ ಮರಗಳನ್ನೆಲ್ಲಾ ಕಡಿದಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಲಿಖಿತ ದೂರು ನೀಡುವೆ.
ಎಂ.ಜಿ.ಶ್ರೀಕಾಂತ, ಸಾಮಾಜಿಕ ಕಾರ್ಯಕರ್ತ