ಸಾರಾಂಶ
ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಏಳು ವರ್ಷ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಹುಬ್ಬಳ್ಳಿ ಮೂಲದ ಇಬ್ಬರು ಆರೋಪಿಗಳಿಗೆ ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ ಘಟನೆ ನಡೆದಿದೆ.
ಹುಬ್ಬಳ್ಳಿ: ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಏಳು ವರ್ಷ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಹುಬ್ಬಳ್ಳಿ ಮೂಲದ ಇಬ್ಬರು ಆರೋಪಿಗಳಿಗೆ ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ ಘಟನೆ ನಡೆದಿದೆ.
ಆರೋಪಿಗಳಾದ ಗಣೇಶ ಮಿಸ್ಕಿನ್, ಅಮಿತ್ ಬದ್ದಿ ಅವರನ್ನು ಕುಟುಂಬದವರು, ಬಂಧುಗಳು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಬರಮಾಡಿಕೊಂಡರು. ಅವರಿಗೆ ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಇನ್ನು ಕೆಲವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಬರಮಾಡಿಕೊಂಡರು. ಬಳಿಕ ಕುಟುಂಬದವರೊಂದಿಗೆ ಸಿದ್ಧಾರೂಢ ಮಠ, ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಅವರು, ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಮರಳಿ ಬರುತ್ತಿರುವ ಎರಡು ಹುಲಿಗಳಿಗೆ ಸುಸ್ವಾಗತ, 7 ವರ್ಷ ಕಾರಾಗೃಹದಲ್ಲಿದ್ದ ನಮ್ಮ ಹಿಂದೂ ಹುಲಿಗಳು ಈಗ ಬಿಡುಗಡೆ ಆಗಿದ್ದಾರೆ. ಅವರಿಗೆ ಹಾರ್ದಿಕ ಸ್ವಾಗತ ಎಂದು ಬರೆದಿರುವ ಎರಡು ಬ್ಯಾನರ್‌ಗಳನ್ನು ಇಲ್ಲಿಯ ದಾಜೀಬಾನ್ ಪೇಟೆಯ ದೇವಸ್ಥಾನದ ಬಳಿ ಅಳವಡಿಸಲಾಗಿತ್ತು.
ತುಳಜಾಭವಾನಿ ದೇವಸ್ಥಾನಕ್ಕೆ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳು ಭೇಟಿ ನೀಡುತ್ತಾರೆನ್ನುವ ಕಾರಣಕ್ಕೆ ಕೆಲವರು ಸ್ವಾಗತ ಕೋರಿ ಬ್ಯಾನರ್ ಹಾಕಿದ್ದಾರೆ ಎಂದು ತಿಳಿದು ಬಂದಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸುವಷ್ಟರಲ್ಲಿ ತೆರವುಗೊಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಆಗಸ್ಟ್ 30, 2015ರಂದು ಬೆಳಗ್ಗೆ ಡಾ. ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪದ ಮೇಲೆ, ಎಸ್‌ಐಟಿ ತಂಡ ಗಣೇಶ ಮಿಸ್ಕಿನ್, ಅಮಿತ್ ಬದ್ದಿ ಸೇರಿ ಐವರನ್ನು ಬಂಧಿಸಿತ್ತು. ಜಾಮೀನು ಪಡೆದ ಗಣೇಶ ಮತ್ತು ಅಮಿತ್ ನಗರಕ್ಕೆ ಬಂದಾಗ ಸ್ವಾಗತ ಕೋರಲಾಗಿದೆ.