ಕನ್ನಡಪ್ರಭ ವಾರ್ತೆ ವಿಜಯಪುರ ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ವಿದ್ವಾಂಸರಾಗಿದ್ದು, ವಿಶ್ವವು ಅವರನ್ನು ಜ್ಞಾನದ ಸಂಕೇತವಾಗಿ ಗೌರವಿಸಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ವಿದ್ವಾಂಸರಾಗಿದ್ದು, ವಿಶ್ವವು ಅವರನ್ನು ಜ್ಞಾನದ ಸಂಕೇತವಾಗಿ ಗೌರವಿಸಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕೋಶದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ಅವರ ೬೯ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ನೀಡಿದ ಕೊಡುಗೆ, ಸಮಾಜ ಪರಿವರ್ತನೆಗೆ ಮಾಡಿದ ಹೋರಾಟ ಹಾಗೂ ಶಿಕ್ಷಣಕ್ಕೆ ನೀಡಿದ ಮಹತ್ವ ಅಪಾರವಾಗಿದೆ. ವಿದ್ಯಾರ್ಥಿಗಳು ಬಾಬಾಸಾಹೇಬರ ತತ್ವಗಳು ಮತ್ತು ಆದರ್ಶಗಳನ್ನು ಅನುಸರಿಸುವ ಮೂಲಕ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡಬೇಕು. ಅಲ್ಲದೇ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸಮಾಜ ಪರಿವರ್ತನೆ ಸಾಧ್ಯ ಎಂದು ಹೇಳಿದರು.ಸಹ ಪ್ರಾಧ್ಯಾಪಕ ಡಾ.ರಾಮು ಸಜ್ಜನ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರರ ಸಾಂಘಿಕ ಚಿಂತನೆ, ಮಾನವ ಹಕ್ಕುಗಳ ಪರ ಹೋರಾಟಕ್ಕೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅದ್ವಿತೀಯ ಕೊಡುಗೆಗಳು ಅಪಾರವಾಗಿವೆ. ಅನೇಕ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದ ಬಾಬಾಸಾಹೇಬರು ಪಡೆದ ಪದವಿಗಳು, ಜ್ಞಾನ ಮತ್ತು ಪಾಂಡಿತ್ಯ ಅಪಾರವಾಗಿದೆ. ಜತೆಗೆ ಅಜರಾಮರವಾಗಿದೆ. ಅಂಬೇಡ್ಕರರು ಕೇವಲ ವಿದ್ವಾಂಸರಲ್ಲದೆ ಸಮಾಜ ಪರಿವರ್ತನೆಗೆ ನಿಜವಾದ ಪ್ರೇರಕಶಕ್ತಿಯಾಗಿದ್ದರು. ಬಾಬಾಸಾಹೇಬರ ಜೀವನವೇ ಒಂದು ಸಂದೇಶವಾಗಿದ್ದು, ಅವರ ಆದರ್ಶ, ಪರಿಶ್ರಮ, ಆತ್ಮವಿಶ್ವಾಸ ಮತ್ತು ಮಾನವ ಮೌಲ್ಯಗಳ ಪರ ಹೋರಾಟವನ್ನು ಇಂದಿನ ತಲೆಮಾರು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಬಾಬಾಸಾಹೇಬರು ಮಾಡಿದ ಚಳವಳಿಗಳನ್ನು ನೆನಪಿಸಿಕೊಂಡು, ಇಂದಿಗೂ ಅಸ್ಪೃಶ್ಯತೆಯಂತಹ ಆಚರಣೆಗಳು ಕೆಲವೆಡೆ ಕಂಡುಬರುತ್ತಿರುವುದು ದುರಾದೃಷ್ಟಕರ. ಸಮಾಜದಲ್ಲಿ ಇನ್ನೂ ಜಾಗೃತಿ ಮತ್ತು ಬದಲಾವಣೆ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದಲಿ ಪ.ಜಾ/ ಪಪಂ ಘಟಕದ ನಿರ್ದೇಶಕ ಪ್ರೊ.ಮಲ್ಲಿಕಾರ್ಜುನ್ ಎನ್.ಎಲ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು, ಸಂಶೋಧನಾರ್ಥಿಗಳು, ಉಪನ್ಯಾಸಕರು ಹಾಗೂ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.
ಡಾ.ಬಿ.ಆರ್.ಅಂಬೇಡ್ಕರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಂಜೀವಕುಮಾರ ಗಿರಿ ಸ್ವಾಗತಿಸಿದರು. ಡಾ.ಕಲಾವತಿ ಕಾಂಬಳೆ, ನಿರೂಪಿಸಿ, ವಂದಿಸಿದರು.