ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಮೆರಿಕಾ ಪ್ರವಾಸದಲ್ಲಿದ್ದ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮೀಸಲಾತಿ ರದ್ದುಗೊಳಿಸುವುದಾಗಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಮೋರ್ಚಾದವರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಈ ವೇಳೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡು ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಈಗಲೂ ಅದನ್ನೇ ಮುಂದುವರಿಸಿದೆ. ಮೀಸಲಾತಿ ರದ್ದುಪಡಿಸುವ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಮಾತಿನ ಮರ್ಮವನ್ನು ಅರಿಯಬೇಕು ಎಂದರು.
ಸ್ವಾತಂತ್ರ್ಯಬಂದ ದಿನದಿಂದಲೂ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡುತ್ತಾ ಬಂದಿದೆ. ಡಾ. ಅಂಬೇಡ್ಕರ್ ಅವರಿಗೆ ಗೌರವ ಕೊಡದ ಕಾಂಗ್ರೆಸ್ ಈಗಲೂ ಮುಂದುವರಿಸಿದೆ. ರಾಹುಲ್ ಗಾಂಧಿ ಅವರು ಮೀಸಲಾತಿಯ ವಿಚಾರವನ್ನು ಪ್ರಸ್ತಾಪಿಸಿರುವುದು ದೊಡ್ಡ ಆತಂಕ ಮೂಡಿಸಿದೆ. ವಿದೇಶದಲ್ಲಿ ದೇಶದ ಮಾನವನ್ನು ಹರಾಜು ಹಾಕಿದ್ದಾರೆ ಎಂದು ಅವರು ಕಿಡಿಕಾರಿದರು.ದೇಶದಲ್ಲಿ ದಲಿತರಿಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ದೊರೆಯುವ ತನಕ ಮೀಸಲಾತಿ ಮುಂದುವರಿಯಬೇಕು. ಆದರೆ, ರಾಹುಲ್ ಗಾಂಧಿ ಮಾತು ದಲಿತ ವಿರೋಧಿಯಾಗಿದೆ. ಕರ್ನಾಟಕದಲ್ಲಿ ದಲಿತರ ಪರವಾಗಿದ್ದೇವೆಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನವನ್ನು ಕಡಿತ ಮಾಡಿದ್ದಾರೆ. ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಹಣವನ್ನು ಬೇರೆಡೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ಕರ್ನಾಟಕ, ದೇಶದಲ್ಲಿ ಮೀಸಲಾತಿ ವಿರೋಧಿಗಳು ತಮ್ಮದೇ ಆದ ರೀತಿಯಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ. ಗಾಂಧೀಜಿ, ಅಂಬೇಡ್ಕರ್ ಅವರು ಪಡೆದುಕೊಂಡು ಬಂದಿದ್ದ ಸ್ವಾತಂತ್ರ್ಯವನ್ನು ಕಸಿದುಕೊಂಡ ದಿನವಾಗಿದೆ. ವಿದೇಶ ಪ್ರವಾಸ ಮಾಡುವ ರಾಹುಲ್ ಗಾಂಧಿ ಅವರು ವರ್ಷದಲ್ಲಿ 6 ತಿಂಗಳು ವಿದೇಶದಲ್ಲಿ ಇರುತ್ತಾರೆ. ಹೋದಾಗಲೆಲ್ಲಾ ಯಾವುದಾದರೂ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಎಂದು ದೂರಿದರು.ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕರಾದ ಬಿ. ಹರ್ಷವರ್ಧನ್, ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ವೇದಾವತಿ, ಡಾ. ಅಶ್ವಿನಿ ಶರತ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಎಸ್ಸಿ ಮೋರ್ಚಾ ನಗರಾಧ್ಯಕ್ಷ ವಿ. ಶೈಲೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮೈ.ಪು. ರಾಜೇಶ್, ಎಸ್ಟಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಮುಖಂಡರಾದ ಎಸ್. ಮಹದೇವಯ್ಯ, ಮಹೇಶ್, ಪರಮಾನಂದ, ಕೇಬಲ್ ಮಹೇಶ್, ಗಿರಿಧರ್, ಕಾರ್ತಿಕ್ ಮರಿಯಪ್ಪ ಮೊದಲಾದವರು ಇದ್ದರು.