ಡಾ. ಬಿ. ಆರ್‌. ಅಂಬೇಡ್ಕರ್‌ ಅವರ 69ನೇ ಮಹಾ ಪರಿನಿಬ್ಬಾಣ ದಿನವನ್ನು ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.

ಕನ್ನಡಪ್ರಭವಾರ್ತೆ, ಸೋಮವಾರಪೇಟೆ

ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಭಾರತ ಸಂವಿಧಾನ ಶಿಲ್ಪಿ, ಮಹಾನ್ ಚಿಂತಕ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಭಾಣ ದಿನವನ್ನು ಅಂಬೇಡ್ಕರ್ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನಮನ ಸಲ್ಲಿಸಲಾಯಿತು. ಸೂಡ ಅಧ್ಯಕ್ಷ ಕೆ.ಎ. ಆದಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆ ಬೆಳೆಸುವಲ್ಲಿ ಅವರ ಚಿಂತನೆಗಳ ಮಾರ್ಗದರ್ಶನ ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು. ಮಾನವ ಸಮಾಜಕ್ಕೆ ನೀಡಿದ ಸಂದೇಶಗಳು, ಸಮಾನತೆ, ಸ್ವಾತಂತ್ರ‍್ಯ ಮತ್ತು ಬಾಂಧವ್ಯ ಎಂಬ ಮೂರು ಮಹಾ ಮೌಲ್ಯಗಳ ಮೇಲೆ ನಿಂತಿವೆ. ಸಂವಿಧಾನ ರಚನೆ ಮಾಡಿದ ಮಹಾಯೋಗಿ ಅಂಬೇಡ್ಕರ್ ಅವರ ಕನಸಿನ ಭಾರತವನ್ನು ಕಟ್ಟುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ದಲಿತಪರ ಹೋರಾಟಗಾರ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಡಾ. ಅಂಬೇಡ್ಕರ್ ಅವರ ಬಡವರ ಪರ ಹೋರಾಟ, ಸಮಾಜದ ಶೋಷಿತರಿಗೆ ನೀಡಿದ ಧ್ವನಿ, ಸಂವಿಧಾನ ರೂಪಿಸುವಲ್ಲಿ ತೋರಿದ ದೃಢಸಂಕಲ್ಪದ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ವೇದಕುಮಾರ್, ಎಚ್.ಎ. ನಾಗರಾಜ್, ಹೊನ್ನಪ್ಪ, ಟಿ.ಈ. ಸುರೇಶ್, ಸಂದೀಪ್, ದಾಮೋದರ್, ವಿವಿಧ ಇಲಾಖಾಧಿಕಾರಿಗಳು, ಅಂಗನವಾಡಿ ಶಿಕ್ಷಕರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.