ಸಾರಾಂಶ
ಪೂಜ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯುತ್ಸವ ಹಾಗೂ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಗುರುಗಳ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಅಭಿಷೇಕ, ಹೋಮ ಹವನ ನಡೆಸಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 81ನೇ ಜಯಂತ್ಯುತ್ಸವ ಹಾಗೂ 12ನೇ ಪುಣ್ಯಸ್ಮರಣೆ ಅಂಗವಾಗಿ ಹೋಮ- ಹವನಗಳು ನಡೆದವು.ಶಾಲಾ ಆವರಣದಲ್ಲಿ ಇರುವ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಪಂಚಾಮೃತ ಅಭಿಷೇಕ, ಹೋಮ ಹವನ, ಪೂಜಾ ಕೈಂಕರ್ಯಗಳು ಜರುಗಿದವು.
ಸಂಸ್ಥೆಯಿಂದ ನಡೆದ ರಥಯಾತ್ರೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿತ್ತು. ಪೂಜಾ ಕುಣಿತ, ಡೊಳ್ಳುಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.ಹೇಮಗಿರಿ ಶಾಖಾ ಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಪೂಜ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯುತ್ಸವ ಹಾಗೂ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಗುರುಗಳ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಅಭಿಷೇಕ, ಹೋಮ ಹವನ ನಡೆಸಲಾಗಿದೆ ಎಂದರು.
ಡಾ.ಬಾಲಗಂಗಾಧರ ಮಹಾಸ್ವಾಮೀಜಿಗಳು ತ್ರಿವಿಧ ದಾಸೋಹಗಳನ್ನು ನೀಡುವ ಮೂಲಕ ಸಮಾಜಕ್ಕೆ ಧಾರ್ಮಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಗುರುಗಳನ್ನು ಸ್ಮರಿಸಬೇಕು ಎಂದು ತಿಳಿಸಿದರು.ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು, ಎಸ್.ಎ.ಮಲ್ಲೇಶ್, ಅಶ್ವತ್ಥ ನಾರಾಯಣಗೌಡ, ಬಿ.ಎಸ್.ಜಯರಾಮು, ಗಿರೀಶ್, ದೀಪು, ವಿಜಿಕುಮಾರ್, ಹರೀಶ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಕಣಿವೆರಾಮು ಸೇರಿ ಪ್ರಾಂಶುಪಾಲರು, ಮುಖ್ಯಶಿಕ್ಷಕರು, ಹಲವರು ಹಾಜರಿದ್ದರು.