ಸಾರಾಂಶ
ನೈಋತ್ಯ ಪದವೀಧರ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ಧನಂಜಯ್ ಸರ್ಜಿ ಅವರಿಗೆ ಟಿಕೆಟ್ ನೀಡಿದ್ದು ಸ್ಪರ್ಧೆ ಖಚಿತವಾಗಿದೆ.
ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ವಿಧಾನಪರಿಷತ್‌ಗೆ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಎರಡು ಸ್ಥಾನಗಳಿಗೆ ಚುನಾವಣೆ ಗರಿಗೆದರಿದೆ. ನೈಋತ್ಯ ಪದವೀಧರ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ಧನಂಜಯ್ ಸರ್ಜಿ ಅವರಿಗೆ ಟಿಕೆಟ್ ನೀಡಿದ್ದು ಸ್ಪರ್ಧೆ ಖಚಿತವಾಗಿದೆ.
ನೈಋತ್ಯ ಪದವೀಧರರ ಕ್ಷೇತ್ರ ಕಳೆದ ಬಾರಿ ಬಿಜೆಪಿಯಿಂದ ಆಯನೂರು ಮಂಜುನಾಥ್ ಪ್ರತಿನಿಧಿಸುತ್ತಿದ್ದರು. ಇವರು ಕಳೆದ ವಿಧಾನಸಭೆ ಚುನಾವಣೆ ವೇಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಗೊಂಡು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹೀಗಾಗಿ ಆ ಸ್ಥಾನ ತೆರವಾಗಿತ್ತು.
ಈಗ ಆಯನೂರು ಮಂಜುನಾಥ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಈ ಬಾರಿ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಆದರೆ, ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿ ಅಂತಿಮಗೊಳಿಸಿರಲಿಲ್ಲ. ಈ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿ ಪ್ರಕಟಿಸಿದೆ. ಡಾ.ಧನಂಜಯ ಸರ್ಜಿ ಕಣಕ್ಕಿಳಿಸುವುದಾಗಿ ಬಿಜೆಪಿ ಪ್ರಕಟಿಸಿದ್ದು, ಇದರಿಂದ ಚುನಾವಣ ಕಣ ಮತ್ತಷ್ಟು ರಂಗೇರಿದೆ.
ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕುರಿತು ತೀವ್ರ ಕುತೂಹಲವಿತ್ತು. ಪಕ್ಷದ ಟಿಕೆಟ್‌ಗೂ ಬೇಡಿಕೆ ಹೆಚ್ಚಿತ್ತು. ಕ್ಷೇತ್ರವನ್ನು ಈಚೆಗೆ ಸತತವಾಗಿ ಶಿವಮೊಗ್ಗ ಜಿಲ್ಲೆಯವರೇ ಪ್ರತಿನಿಧಿಸಿದ್ದಾರೆ. ಈ ಬಾರಿಯೂ ಆ ಪರಂಪರೆ ಮುಂದುವರಿಯಲಿದೆಯೇ ಇಲ್ಲವೇ ಟಿಕೆಟ್ ಬೇರೆ ಜಿಲ್ಲೆಯವರಿಗೆ ಸಿಗಲಿದೆಯೇ ಎಂಬುದು ಪ್ರಶ್ನೆಯಾಗಿತ್ತು. ಶಿವಮೊಗ್ಗ ಜಿಲ್ಲೆಯಿಂದ ಗಿರೀಶ್ ಪಟೇಲ್, ಡಾ.ಧನಂಜಯ ಸರ್ಜಿ, ಎಸ್.ದತ್ತಾತ್ರಿ, ಎಸ್. ಜ್ಞಾನೇಶ್ವರ್, ಸಂತೋಷ್ ಬಳ್ಳೇಕೆರೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಬಿಜೆಪಿ ವರಿಷ್ಠರು ಈಗ ಡಾ. ಧನಂಜಯ ಸರ್ಜಿಯವರಿಗೆ ಟಿಕೆಟ್ ಘೋಷಿಸಿದೆ. ಜೂ. 3ರಂದು ಮತದಾನ ನಡೆಯಲಿದೆ.