ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿ.ವಿ.ವಿ.ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಮತ್ತು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯರಾದ ಡಾ.ದಿಲೀಪ್ ನಾಟೆಕರ್ ಅವರು ಭಾರತೀಯ ತರಬೇತಿ ಹೊಂದಿದ ಶುಶ್ರೂಷಕರ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.1908 ರಲ್ಲಿ ದೆಹಲಿಯಲ್ಲಿ ಸ್ಥಾಪನೆಯಾದ ಭಾರತೀಯ ತರಬೇತಿ ಹೊಂದಿದ ಶುಶ್ರೂಷಕರ ಸಂಘವು ಶುಶ್ರೂಷಕರ ವೃತ್ತಿ ಘನತೆಯನ್ನು ಎತ್ತಿಹಿಡಿಯಲು ಕಾರ್ಯನಿರ್ವಹಿಸುತ್ತಿದೆ. ಹೊಸ ವಿಧಾನಗಳ ಬಳಕೆ ಮತ್ತು ಸಂಶೋಧನೆಗೆ ನೆರವು ನೀಡುವುದರ ಮೂಲಕ ನರ್ಸಿಂಗ್ ಶಿಕ್ಷಣದಲ್ಲಿ ಗುಣಾತ್ಮಕತೆಯನ್ನು ತರಲು ಶ್ರಮಿಸುತ್ತಿದೆ. ನರ್ಸಿಂಗ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಹಾಗೂ ಈಗಾಗಲೇ ತರಬೇತಿ ಹೊಂದಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತಂದಿದೆ. ಭಾರತೀಯ ತರಬೇತಿ ಹೊಂದಿದ ಶುಶ್ರೂಷಕರ ಸಂಘದ ಕರ್ನಾಟಕ ಶಾಖೆ 1956ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕಳೆದೆಂಟು ದಶಕಗಳಿಂದ ಈ ಶಾಖೆ ಕರ್ನಾಟಕದಲ್ಲಿ ನರ್ಸಿಂಗ್ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಬೆಳವಣಿಗೆಗಳಾಗಲು ಕಾರಣವಾಗಿದೆ. ಇಂಥ ಪ್ರತಿಷ್ಠಿತ ಸಂಘಕ್ಕೆ ಉತ್ತರ ಕರ್ನಾಟಕದಿಂದ ಪ್ರಥಮ ಬಾರಿಗೆ ಡಾ.ದಿಲೀಪ್ ನಾಟೆಕರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವರು. ಡಾ.ದಿಲೀಪ್ ನಾಟೆಕರ್ ಅವರನ್ನು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಬಿ.ವಿ.ವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ದಿಲೀಪ್ ನಾಟೆಕರ್ ಅವರು ಶುಶ್ರೂಷಕರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಅವರ ಅಧ್ಯಕ್ಷತೆಯ ಅವಧಿಯಲ್ಲಿ ನರ್ಸಿಂಗ್ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಇನ್ನು ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬರಲಿ.
-ಡಾ.ವೀರಣ್ಣ ಸಿ.ಚರಂತಿಮಠ, ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರು.