ಡಾ. ದಿನಕರ ದೇಸಾಯಿ ಜಿಲ್ಲೆಯ ಶ್ರೇಷ್ಠ ನಾಯಕ: ಪ್ರೊ. ಆರ್.ಎಸ್. ಹಬ್ಬು

| Published : Sep 12 2024, 01:54 AM IST

ಡಾ. ದಿನಕರ ದೇಸಾಯಿ ಜಿಲ್ಲೆಯ ಶ್ರೇಷ್ಠ ನಾಯಕ: ಪ್ರೊ. ಆರ್.ಎಸ್. ಹಬ್ಬು
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ದಿನಕರ ದೇಸಾಯಿ ಜಿಲ್ಲೆಯ ಅತ್ಯುತ್ತಮ ನಾಯಕ. ಅವರು ದಿನ ದಲಿತರ, ಹಿಂದುಳಿದ ವರ್ಗಗಳ, ರೈತರ, ಕಾರ್ಮಿಕರು ಹೀಗೆ ಮುಂತಾದ ಜನರೊಡಗೂಡಿ ಅವರ ಬೆನ್ನೆಲುಬಾಗಿ ನಿಂತು ಅವರ ಏಳಿಗೆಗಾಗಿ ಶ್ರಮಿಸಿದರು.

ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಕರ ದೇಸಾಯಿಯವರ 116ನೇಯ ಜನ್ಮದಿನವನ್ನು ಕೆನರಾ ವೆಲ್ಫೇರ್ ಟ್ರಸ್ಟ್ ಡೇ ಎಂದು ಆಚರಿಸಲಾಯಿತು.

ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಆರ್.ಎಸ್. ಹಬ್ಬು, ಡಾ. ದಿನಕರ ದೇಸಾಯಿ ಜಿಲ್ಲೆಯ ಅತ್ಯುತ್ತಮ ನಾಯಕ. ಅವರು ದಿನ ದಲಿತರ, ಹಿಂದುಳಿದ ವರ್ಗಗಳ, ರೈತರ, ಕಾರ್ಮಿಕರು ಹೀಗೆ ಮುಂತಾದ ಜನರೊಡಗೂಡಿ ಅವರ ಬೆನ್ನೆಲುಬಾಗಿ ನಿಂತು ಅವರ ಏಳಿಗೆಗಾಗಿ ಶ್ರಮಿಸಿದರು.

ಅಲ್ಲದೇ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡು ದೇಶಸೇವೆಗೆ ತಮ್ಮನ್ನು ತೊಡಗಿಸಿಕೊಂಡ ಮಹಾನ್ ವ್ಯಕ್ತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಕೇಶವ ಕೆ.ಜಿ. ಮಾತನಾಡಿ, ದಿನಕರ ದೇಸಾಯಿ ಕೆನರಾ ವೆಲ್ಫೇರ್ ಟ್ರಸ್ಟ್ ಸ್ಥಾಪಿಸಿ ಜಿಲ್ಲೆಯ ಜನರಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡಿದ ಮಹಾನುಭಾವ ಎಂದು ಬಣ್ಣಿಸಿದರು.

ಕೆನರಾ ವೆಲ್ಫೇರ್ ಟ್ರಸ್ಟ್ ಹಾಗೂ ಅದರ ಅಂಗ ಸಂಸ್ಥೆಗಳು ನಡೆದು ಬಂದ ದಾರಿ ಹಾಗೂ ಸಂಸ್ಥೆಯ ಮುಖ್ಯಸ್ಥರ ನಾಯಕತ್ವ ಮತ್ತು ದಿನಕರ ದೇಸಾಯಿಯವರ ನಂತರ ಟ್ರಸ್ಟಿನ ಚುಕ್ಕಾಣಿ ಹಿಡಿದ ಈಗಿನ ಅಧ್ಯಕ್ಷ ನ್ಯಾಯವಾದಿ ಎಸ್.ಪಿ. ಕಾಮತ ಅವರ ಮುಂದಾಳತ್ವದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಂಸ್ಥೆಗಳ ಬಗ್ಗೆ ಸ್ಥೂಲವಾಗಿ ವಿವರಿಸಿದರು.

ವಿದ್ಯಾರ್ಥಿಗಳಾದ ಪ್ರಿಯಾಂಕಾ ಬಾಂದೇಕರ, ಸೃಷ್ಟಿ ದುರ್ಗೆಕರ, ಕವನ ಪೈ, ಪ್ರಗತಿ ದಿನಕರ ದೇಸಾಯಿಯವರ ಚುಟುಕುಗಳನ್ನು ವಾಚನ ಮಾಡಿದರು.

ಸಾನ್ನಿಧ್ಯ ಪಡಿಯಾರ ಪ್ರಾರ್ಥನೆ ಗೀತೆ ಹಾಡಿದರು. ಬಿಸಿಎ ವಿಭಾಗದ ಮುಖ್ಯಸ್ಥ ಡಾ. ಹರೀಶ ಕಾಮತ ಸ್ವಾಗತಿಸಿದರು. ಗ್ರಂಥಪಾಲಕ ಸುರೇಶ ಗುಡಿಮನಿ ನಿರೂಪಿಸಿದರು. ಪಿಯು ಕಾಲೇಜಿನ ಪ್ರಾಂಶುಪಾಲೆ ಲಲಿತಾ ಶೆಟ್ಟಿ ವಂದಿಸಿದರು.