ಸಾರಾಂಶ
ಕನ್ನಡ ಸಾಹಿತ್ಯದ ಪರಿಪೂರ್ಣ ಚಾರಿತ್ರಿಕ ಗ್ರಹಿಕೆಯನ್ನು ಹೊಂದಿದ ಆಮೂರರು ಕನ್ನಡದ ಪರಂಪರೆ ಕಟ್ಟಿಕೊಡಲು ಬಹುಕಾಲ ಶ್ರಮಿಸಿದವರೆಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ತಿಳಿಸಿದರು.
ಗದಗ: ಕನ್ನಡ ಸಾಹಿತ್ಯದ ಪರಿಪೂರ್ಣ ಚಾರಿತ್ರಿಕ ಗ್ರಹಿಕೆಯನ್ನು ಹೊಂದಿದ ಆಮೂರರು ಕನ್ನಡದ ಪರಂಪರೆ ಕಟ್ಟಿಕೊಡಲು ಬಹುಕಾಲ ಶ್ರಮಿಸಿದವರೆಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ತಿಳಿಸಿದರು.
ಅವರು ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಗದಗ ಮತ್ತು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಕನ್ನಡ ವಿಭಾಗ, ಡಾ.ಜಿ.ಎಸ್. ಆಮೂರ ಶತಮಾನೋತ್ಸವ ಸಮಿತಿ, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಜಿ. ಎಸ್. ಆಮೂರರ ಮೇರು ವಿಮರ್ಶಾ ಕೃತಿಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಡಾ. ಜಿ. ಎಸ್ ಆಮೂರ ಅವರಿಗೆ ಕನ್ನಡ ಸಾಹಿತ್ಯದ ಬಗ್ಗೆ ತೀವ್ರ ಕಾಳಜಿ ಇತ್ತು. ಅವರು ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾಗ ಇಂಗ್ಲಿಷ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಮರ್ಶಾ ಕೃತಿಗಳನ್ನು ರಚಿಸಿದರು. ನಿವೃತ್ತಿ ಹೊಂದಿದ ಮೇಲೆ ಧಾರವಾಡಕ್ಕೆ ಬಂದ ಅವರು ಕನ್ನಡ ವಿಮರ್ಶಾ ಕೃತಿಗಳನ್ನು ಬರೆಯಲು ಆರಂಭಿಸಿದರು. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ವಿಮರ್ಶಾ ಕ್ಷೇತ್ರಕ್ಕೆ ಬಹುಪ್ರಮಾಣದ ಕೊಡುಗೆ ಕೊಟ್ಟಿದ್ದು ಧಾರವಾಡ. ಇಲ್ಲಿಯೇ ಕೀರ್ತಿನಾಥ ಕುರ್ತಕೋಟಿ ಅವರು ವಿಮರ್ಶಾ ಕೃತಿಗಳನ್ನು ಬರೆದು ವಿಮರ್ಶಾ ಕ್ಷೇತ್ರಕ್ಕೆ ಅಡಿಗಲ್ಲು ಹಾಕಿದರು.ನಂತರ ಜಿ.ಎಸ್.ಆಮೂರ ಹಾಗೂ ಗಿರಡ್ಡಿ ಗೋವಿಂದರಾಜ ಅವರು ಹಳಗನ್ನಡದಿಂದ ಆಧುನಿಕ ಕನ್ನಡ ಸಾಹಿತದಲ್ಲಿ ವಿಮರ್ಶಾ ಕ್ಷೇತ್ರವನ್ನು ಬೆಳೆಸಿದರು. ಈ ನಿಟ್ಟಿನಲ್ಲಿ ವಿಮರ್ಶಾ ಕ್ಷೇತ್ರವನ್ನು ಕಟ್ಟಿ ಬೆಳೆಸಿದವರು ಈ ಮೂವರು ಗದಗ ಜಿಲ್ಲೆಯೊಂದಿಗೆ ನಿಕಟ ಸಂಬಂಧ ಹೊಂದಿದವರು ಎಂಬುದು ಹೆಮ್ಮೆಯ ಸಂಗತಿ ಎಂದರು.
ಹಿರಿಯ ವಿಮರ್ಶಕ ಡಾ.ಜಿ.ಎಂ. ಹೆಗಡೆಯವರು ಉಪನ್ಯಾಸ ನೀಡಿದರು. ಸಾಹಿತಿ ಶಾಮಸುಂದರ ಬಿದರಕುಂದಿ ಮುಂತಾದವರು ಮಾತನಾಡಿದರು. ಪ್ರೊ. ಮಲ್ಲಿಕಾರ್ಜುನ ಹಿರೇಮಠ ಸಮಾರೋಪ ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಪಿ. ಸಂಶಿಮಠ ವಹಿಸಿದ್ದರು. ಹಿರಿಯ ಸಾಹಿತಿ ಅನ್ನದಾನಿ ಹಿರೇಮಠ, ಪ್ರೊ.ಪಿ.ಜಿ. ಪಾಟೀಲ, ಡಾ.ಡಿ.ಬಿ. ಗವಾನಿ, ಡಾ.ಎ.ಕೆ. ಮಠ, ಪ್ರೊ. ವಿಶ್ವನಾಥ ಜಿ., ಡಾ. ನಾಗರಾಜ ಬಳಿಗೇರ, ಡಾ. ರಾಮಚಂದ್ರ ಪಡೆಸೂರು, ಡಾ. ಅಂದಯ್ಯ ಅರವಟಗಿಮಠ, ಪ್ರೊ. ಶೃತಿ ಮ್ಯಾಗೇರಿ ಉಪಸ್ಥಿತರಿದ್ದರು.