ಸಂಸ್ಕಾರಯುತ ಶಿಕ್ಷಣದಿಂದ ಸಾಮರಸ್ಯದ ಬದುಕು ಸಾಧ್ಯ:ಡಾ. ಗುರುರಾಜ ಕರ್ಜಗಿ

| Published : May 02 2024, 12:18 AM IST

ಸಂಸ್ಕಾರಯುತ ಶಿಕ್ಷಣದಿಂದ ಸಾಮರಸ್ಯದ ಬದುಕು ಸಾಧ್ಯ:ಡಾ. ಗುರುರಾಜ ಕರ್ಜಗಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಂಸ್ಕೃತಿ ಹಾಗೂ ನಂಬಿಕೆ ಗಟ್ಟಿಯಾಗಿದ್ದಲ್ಲಿ ಬದುಕು ಸಾಮರಸ್ಯದಿಂದ ಕೂಡಿರುತ್ತದೆ. ಜೀವನದಲ್ಲಿ ಅಹಂಕಾರ ಮತ್ತು ಕೀಳರಿಮೆ ಬೆಳೆಸಿಕೊಳ್ಳಬಾರದು. ನಮ್ಮ ಚಿಂತನೆಗಳು ಕೇವಲ ಧನಾತ್ಮಕವಾಗಿರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಮರಸ್ಯದಿಂದ ಬದುಕಲು ಸಂಸ್ಕಾರಯುತ ಶಿಕ್ಷಣ ಅಗತ್ಯ ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.

ಊಟಿಯ ತೀಟಕಲ್ ನ ಜೆಎಸ್ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಸುತ್ತೂರು ಕ್ಷೇತ್ರ, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ವತಿಯಿಂದ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರದ ಎರಡನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಾಮರಸ್ಯದ ಬದುಕು ಕುರಿತು ಮಾತನಾಡಿದರು.

ನಮ್ಮ ಸಂಸ್ಕೃತಿ ಹಾಗೂ ನಂಬಿಕೆ ಗಟ್ಟಿಯಾಗಿದ್ದಲ್ಲಿ ಬದುಕು ಸಾಮರಸ್ಯದಿಂದ ಕೂಡಿರುತ್ತದೆ. ಜೀವನದಲ್ಲಿ ಅಹಂಕಾರ ಮತ್ತು ಕೀಳರಿಮೆ ಬೆಳೆಸಿಕೊಳ್ಳಬಾರದು. ನಮ್ಮ ಚಿಂತನೆಗಳು ಕೇವಲ ಧನಾತ್ಮಕವಾಗಿರಬೇಕು. ಎಲ್ಲರನ್ನು ಸಮಾನವಾಗಿ ಕಾಣುವುದರಿಂದ ಬದುಕನ್ನು ಶಾಂತಗೊಳಿಸಿಕೊಳ್ಳಬಹುದು. ಬದುಕಿನ ಮೌಲ್ಯಗಳನ್ನು ತಿಳಿದು ಸಾರ್ಥಕ ಜೀವನದೆಡೆಗೆ ನಡೆಯಬೇಕಾದುದು ನಮ್ಮೆಲ್ಲರ ಕರ್ತವ್ಯ. ಮನಸ್ಸನ್ನು ಕೆಡಿಸಲು ಹಲವು ಮಾರ್ಗಗಳಿವೆ ಅವುಗಳನ್ನ ಮೀರಿ ನಮ್ಮಲ್ಲಿರುವ ವಿಷಯಾಸಕ್ತಿಗಳನ್ನು ನಿಯಂತ್ರಿಸಿಕೊಳ್ಳಬೇಕು. ತ್ಯಾಗ ಜೀವನ ಅತ್ಯುತ್ತಮವಾದುದು ಎಂದು ಅವರು ಹೇಳಿದರು.

ರಾಜ್ಯ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಶೆಣೈ ಮಾತನಾಡಿ, ನಿಯಮಿತ ಆಹಾರ ಮತ್ತು ಉತ್ತಮ ಜೀವನ ವಿಧಾನ ದೀರ್ಘಾಯುಷ್ಯಕ್ಕೆ ಕಾರಣವಾಗಿದೆ. ಆಯುರ್ವೇದದ ಮನೆಮದ್ದಿನ ಬಗ್ಗೆ ತಿಳುವಳಿಕೆ ಪಡೆದುಕೊಂಡು ನಿರೋಗಿಗಳಾಗಿ ಬದುಕುವುದು ಇಂದಿನ ಆಧುನಿಕ ಜಗತ್ತಿನಲ್ಲಿ ಅನಿವಾರ್ಯವಾಗಿದೆ. ವಿಶ್ವದಲ್ಲಿ ಈಗ ಆಯುರ್ವೇದದ ಮಹತ್ವ ಹೆಚ್ಚಾಗಿದೆ ಎಂದು ಹೇಳಿದರು.

ಇದು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ನಮ್ಮ ಅಡುಗೆ ಮನೆಯಲ್ಲಿಯೇ ಅನೇಕ ಆಯುರ್ವೇಧದ ಔಷಧಿಗಳನ್ನು ಕಾಣಬಹುದು. ಪ್ರಕೃತಿ ಮತ್ತು ದೇಹಕ್ಕೆ ಅವಿನಭಾವ ಸಂಬಂಧವಿದ್ದು, ಋತುಮಾನಕ್ಕೆ ತಕ್ಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ಪೊಲೀಸ್ ಅಧೀಕ್ಷಕ ಎಚ್.ಎಸ್. ರೇಣುಕಾರಾಧ್ಯ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಸೈಬರ್ ಕ್ರೈಂ ಎನ್ನುವುದು ಸಾಮಾಜಿಕ ಪಿಡುಗಾಗಿದೆ. ಸಾಮಾಜಿಕ ಜಾಲತಾಣಗಳಿಂದ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೈಬರ್ ಕ್ರೈಂಗೆ ಒಳಗಾಗುವವರು ಹೆಚ್ಚು ವಿದ್ಯಾವಂತರೆ ಆಗಿದ್ದಾರೆ. ಮೊಬೈಲ್ ಗಳನ್ನು ಎಚ್ಚರಿಕೆಯಿಂದ ಬಳಸಬೇಕು, ಮಕ್ಕಳಿಗೆ ಮೊಬೈಲ್ ಬಳಕೆಯ ಬಗ್ಗೆ ಪೋಷಕರು ತಿಳುವಳಿಕೆ ನೀಡಬೇಕು. ನಮ್ಮ ಅಜಾಗರೂಕತೆಯಿಂದ ಸೈಬರ್ ಕ್ರೈಂಗಳಾಗುತ್ತವೆ. ಬ್ಯಾಂಕಿಂಗ್ ವ್ಯವಹಾರಗಳ ಸಮಯದಲ್ಲಿ ನಮ್ಮ ಮೊಬೈಲ್ ಗಳಿಗೆ ಬರುವ ಕರೆ ಮತ್ತು ಸಂದೇಶಗಳ ಬಗ್ಗೆ ಜಾಗೃತರಾಗಿದ್ದರೆ ಇದರಿಂದ ಉಂಟಾಗುವ ಅನಾಹುತ ತಡೆಗಟ್ಟಬಹುದು ಎಂದು ತಿಳಿಸಿದರು.

ಸಂಜೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೊಯಮತ್ತೂರಿನ ಪೆರೂರೂ ಆದಿನಂ ಮಠದ ಶ್ರೀ ಮರುದಾಚಲ ಸ್ವಾಮೀಜಿ, ನಮ್ಮ ದೇಹ ಮತ್ತು ಪ್ರಫುಲ್ಲಗೊಳ್ಳಲು ಇಂತಹ ಜೀವನೋತ್ಸಾಹ ಶಿಬಿರಗಳು ಅಗತ್ಯವಿದೆ. ಸುತ್ತೂರಿನ ಶ್ರೀಗಳು, ಕರ್ನಾಟಕ ಮತ್ತು ತಮಿಳುನಾಡಿನ ಆಧ್ಯಾತ್ಮಿಕ ಕೊಂಡಿಯಾಗಿದ್ದಾರೆ. ಪೂಜ್ಯರ ಕಾರ್ಯಕ್ರಮಗಳು ಮಹತ್ತರವಾದುದು ಎಂದು ಹೇಳಿದರು.

ಚಿಕ್ಕತುಪ್ಪೂರು ಶಿವಪೂಜಾ ಮಠದ ಶ್ರೀ ಚೆನ್ನವೀರ ಸ್ವಾಮೀಜಿ, ವಚನ ಹಾಡಿದರು. ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿಗಳು ಹಿತನುಡಿಗಳನ್ನಾಡಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ- ಧ್ಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಂಜೆ ದೇಸಿ ಆಟಗಳನ್ನು ಆಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ಶಿಬಿರದಲ್ಲಿ ಸಾಂಗ್ಲಿ ಜಿಲ್ಲೆ, (ಮಹಾರಾಷ್ಟ್ರ) ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರಾವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ 230ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.