ಸಾರಾಂಶ
ಆದಿ ಚುಂಚನಗಿರಿ ಮಠದಿಂದ ಸನ್ಯಾಸ ದೀಕ್ಷೆ ಪಡೆದಿದ್ದ ಡಾ.ಎಚ್.ಎಲ್.ನಾಗರಾಜು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಎಂದು ನಾಮಕರಣಗೊಂಡಿದ್ದರು. ಅಂದು ಒತ್ತಡಕ್ಕೆ ಮಣಿದು ಮತ್ತೆ ಸರ್ಕಾರಿ ಸೇವೆಗೆ ಮರಳಿದ್ದರು. ಇದೀಗ ಮತ್ತೆ ವಿಶ್ವ ಒಕ್ಕಲಿಗರ ಮಠದ ಪೀಠಾರೋಹಣ ಮಾಡುತ್ತಿರುವುದು ವಿಶೇಷ
ಮಂಡ್ಯ ಮಂಜುನಾಥ
ಮಂಡ್ಯ : ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಎಚ್.ಎಲ್.ನಾಗರಾಜು ಅವರು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವುದು ಖಚಿತವಾಗಿದೆ. ಡಿ.೧೫ರಂದು ಜಗದ್ಗುರು ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಎಂದು ನೂತನ ನಾಮಕರಣದೊಂದಿಗೆ ಪೀಠಾರೋಹಣ ಮಾಡಲಿದ್ದಾರೆ.
ಅನಾರೋಗ್ಯ ಕಾರಣದಿಂದಾಗಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾಗಿರುವ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಪೀಠತ್ಯಾಗ ಮಾಡುತ್ತಿದ್ದು, ಅವರ ಸ್ಥಾನಕ್ಕೆ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೆಸರಿನಲ್ಲಿ ಡಾ.ಎಚ್.ಎಲ್.ನಾಗರಾಜು ಅವರು ಪೀಠವನ್ನು ಅಲಂಕರಿಸಲಿದ್ದಾರೆ.
2011ರಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಸನ್ಯಾಸ ದೀಕ್ಷೆ ಪಡೆದಿದ್ದ ಡಾ.ಎಚ್.ಎಲ್.ನಾಗರಾಜು ಅವರು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಎಂದು ನಾಮಕರಣಗೊಂಡಿದ್ದರು. ಅಂದು ಕುಟುಂಬದವರು, ಹಿತೈಷಿಗಳು, ಸ್ನೇಹಿತರ ಒತ್ತಡಕ್ಕೆ ಮಣಿದು ಮತ್ತೆ ಸರ್ಕಾರಿ ಸೇವೆಗೆ ಮರಳಿದ್ದರು. ಇದೀಗ ಮತ್ತೆ ಅದೇ ಹೆಸರಿನೊಂದಿಗೆ ವಿಶ್ವ ಒಕ್ಕಲಿಗರ ಮಠದ ಪೀಠಾರೋಹಣ ಮಾಡುತ್ತಿರುವುದು ವಿಶೇಷವಾಗಿದೆ.
ಡಿ.೫ ರಿಂದ ಸುದೀರ್ಘ ರಜೆಯ ಮೇಲೆ ತೆರಳಿರುವ ಡಾ.ಎಚ್.ಎಲ್.ನಾಗರಾಜು ಅವರು ಸನ್ಯಾಸ ದೀಕ್ಷೆ ಧರಿಸುವರೆಂಬ ಸಾಧ್ಯತೆಗಳಿರುವ ಬಗ್ಗೆ ವದಂತಿಗಳು ಹರಡಿದ್ದವು. ಇದೀಗ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಿಂದ ನೂತನ ಪಟ್ಟಾಧಿಕಾರದ ಪ್ರಕಟಣೆಯಲ್ಲಿ ಶ್ರೀ ಕುಮಾರಚಂದ್ರಶೇಖರನಾಥ ಸ್ವಾಮೀಜಿ ಪಾದದ ಬಳಿ ಡಾ.ಎಚ್.ಎಲ್.ನಾಗರಾಜು ಕುಳಿತಿರುವ ಭಾವಚಿತ್ರ, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಬದಲಾಗಿರುವುದನ್ನು ಖಚಿತಪಡಿಸಿದೆ.
ಡಿ.೧೪ರಂದು ಸಂಜೆ ೬ ಗಂಟೆಗೆ ಗಂಗೆಪೂಜೆ, ಶಿವ-ಪಾರ್ವತಿಯರ ಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ನಾಂದಿ ಸಮಾರಾಧನ, ರಕ್ಷಾಬಂಧನ, ವಾಪನ, ಸ್ನಪನ, ಪೋಷಕರಿಂದ ರಕ್ತಸಂಬಂಧದ ತ್ಯಾಗ ಮತ್ತು ಉತ್ತರಾಧಿಕಾರಿಯನ್ನು ಸಮಾಜಕ್ಕೆ ಸಮರ್ಪಿಸುವ ಕಾರ್ಯ ನೆರವೇರಲಿದೆ.
ಹನ್ನೊಂದು ನದಿಗಳ ಜಲಾಭಿಷೇಕ:
ಡಿ.೧೫ರಂದು ಬೆಳಗ್ಗೆ ೬ ಗಂಟೆಯಿಂದ ೯ ಗಂಟೆಯವರೆಗೆ ಶ್ರೀ ಪಂಚಮುಖಿ ಗಣಪತಿಗೆ ರುದ್ರಾಭಿಷೇಕ, ನವದೇವತಾ ಪೂಜೆ, ಏಕಾದಶರುದ್ರ ಕಲಶ ಪೂಜೆ, ಅಷ್ಟಭೈರವ ಕಲಶಪೂಜೆ, ಸಭಾಪೂಜೆ, ಪೂಜ್ಯರಿಂದ ಹನ್ನೊಂದು ನದಿಗಳ ಜಲಾಭಿಷೇಕ ಮಾಡುವುದರೊಂದಿಗೆ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಶಿವಧರ್ಮಾನುಸಾರ ಪಟ್ಟಾಧಿಕಾರದ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಲಿದ್ದಾರೆ.
ಪಟ್ಟಾಧಿಕಾರ ಸಂಪುಟಕ್ಕೆ ಸಹಿ:
ವಿಭೂತಿ ಮತ್ತು ಗೌರೀಶಂಕರ ರುದ್ರಾಕ್ಷಿಧಾರಣೆ, ಮಂತ್ರೋಪದೇಶ, ದಂಡ, ಕಮಂಡಲು, ಭಿಕ್ಷಾಪಾತ್ರೆ, ಭಸ್ಮಘುಟಿಕ, ಸಿಂಗನಾದ- ಪಂಚಮುದ್ರೆಗಳ ಪ್ರದಾನ, ಪಟ್ಟಬಂಧನ, ಉಪಸ್ಥಿತ ಪೂಜ್ಯರಿಂದ ಹಾಗೂ ಸದ್ಭಕ್ತರಿಂದ ಪುಷ್ಪವೃಷ್ಟಿ, ಮಹಿಳೆಯರಿಂದ ನೀರಾಜನ, ಆಚಾರೋಪದೇಶ, ಪೀಠಾರೋಹಣ, ರುದ್ರಾಕ್ಷಿ, ಮುಕುಟಧಾರಣೆ, ಪುಷ್ಪವೃಷ್ಟಿ, ಜಯಘೋಷಗಳೊಂದಿಗೆ ಪಟ್ಟಾಧಿಕಾರ ಸಂಪುಟಕ್ಕೆ ಪೂಜ್ಯರು, ಧರ್ಮದರ್ಶಿಗಳು, ಗಣ್ಯಮಾನ್ಯರು, ಸದ್ಭಕ್ತರಿಂದ ಸಹಿ ಪಡೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ (ಡಾ.ಎಚ್.ಎಲ್.ನಾಗರಾಜು) ಪರಿಚಯ:
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನೂತನ ಪೀಠಾಧಿಪತಿಗಳಾಗಿ ನಿಯೋಜಿತರಾಗಿರುವ ಡಾ.ಎಚ್.ಎಲ್.ನಾಗರಾಜು ಅವರು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಲಿಂಗಯ್ಯ ಮತ್ತು ಗಂಗಮ್ಮ ದಂಪತಿ ಪುತ್ರರಾಗಿ ಜನಿಸಿದರು. ಅರ್ಥಶಾಸ್ತ್ರದಲ್ಲಿ ಎಂ.ಎ, ಎಂ.ಫಿಲ್, ಪಿಎಚ್‌ಡಿ ಪದವೀಧರರಾಗಿದ್ದಾರೆ. ಎರಡು ಸ್ನಾತಕೋತ್ತರ ಡಿಪ್ಲೋಮಾಗಳಲ್ಲಿ ತೇರ್ಗಡೆಯಾಗಿದ್ದಾರೆ. ೨೦೦೬ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿ ತಹಸೀಲ್ದಾರ್, ಉಪವಿಭಾಗಾಧಿಕಾರಿಯಾಗಿ ಅನೇಕ ಸ್ಥಳಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಐದು ಉಪಯುಕ್ತ ಕೃತಿಗಳನ್ನು ಬರೆದು ಪ್ರಕಟಿಸುವ ಮೂಲಕ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ. ರಾಜ್ಯಸರ್ಕಾರ ಮತ್ತು ಸಂಘ, ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಹಾಲಿ ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಮತ್ತು ಮೈಷುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಜನಮೆಚ್ಚುಗೆ ಪಡೆದಿದ್ದಾರೆ. ಸರಳತೆ, ಸಜ್ಜನಿಕೆ, ಕ್ರಿಯಾಶೀಲತೆ, ನಿಷ್ಕಳಂಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಎಂದು ಹೆಸರು ಗಳಿಸಿದ್ದಾರೆ.