ಡಾ. ಎಚ್.ವಿ. ನಾಗರಾಜ ರಾವ್‌ಗೆ ಸೇಡಿಯಾಪು ಪ್ರಶಸ್ತಿ

| Published : Jul 29 2025, 01:50 AM IST

ಸಾರಾಂಶ

ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಉಡುಪಿ

ಹಿರಿಯ ಸಾಹಿತಿ ಸಂಶೋಧಕ ಡಾ. ಎಚ್.ವಿ. ನಾಗರಾಜ ರಾವ್ ಅವರು ೨೦೨೫ನೇ ಸಾಲಿನ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ಹತ್ತು ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆ.16ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಎಚ್.ವಿ. ನಾಗರಾಜ ರಾವ್‌ ವಿವರ:

ಡಾ. ಎಚ್.ವಿ. ನಾಗರಾಜ ರಾವ್, ಮೈಸೂರಿನ ಮಹಾರಾಜಾ ಸಂಸ್ಕೃತ ಕಾಲೇಜಿನಲ್ಲಿ ವ್ಯಾಕರಣಶಾಸ್ತ್ರ ಮತ್ತು ಅಲಂಕಾರಶಾಸ್ತ್ರದಲ್ಲಿ ಶಿಕ್ಷಣ ಪಡೆದವರು. ನಂತರ ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಭಾಷಾ ವಿಷಯದಲ್ಲಿ ಎಂ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಪಡೆದವರು.

ಡಾ. ನಾಗರಾಜ ಅವರು ಹಲವು ಅಪರೂಪದ ಮತ್ತು ಉಪೇಕ್ಷಿಸಲ್ಪಟ್ಟ ವಿಷಯಗಳಲ್ಲಿ ಬರವಣಿಗೆ ಮಾಡಿದ್ದು, ಹೊಸ ಸಾಹಿತ್ಯ ಪ್ರಕಾರಗಳಲ್ಲೂ ಕೊಡುಗೆ ನೀಡಿರುವವರು. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಸಾಹಿತ್ಯಕ ಕೃತಿಗಳ ರಚನೆ ಮಾಡಿದ್ದಾರೆ. ಭಲ್ಲಾಟಶತಕಮ್, ಆನಂದಸಾಗರಸ್ತವಃ, ವರದರಾಜಸ್ತವಃ, ಅನ್ಯೋಪದೇಶ ಶತಕಮ್, ಅಸ್ಮಾಕಂ ಗೃಹಸ್ಯದೀಪ, ವಿಚಾರಲಹರಿ ಅವರ ಮುಖ್ಯ ಪ್ರಕಟಿತ ಕೃತಿಗಳು. ಸಂಸ್ಕೃತದಲ್ಲಿ ವಿದೂಲಾಪುತ್ರೀಯಮ್, ಸಮುದ್ಯತಾ ಮತ್ತು ದಾಂಪತ್ಯಕಲಹಃ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಡಾ. ಹಾ.ಮಾ. ನಾಯಕ್, ಎಸ್.ಎಲ್. ಭೈರಪ್ಪ ಮೊದಲಾದ ಹಿರಿಯ ಲೇಖಕರ ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಮೈಸೂರಿನ ಪ್ರಾಚ್ಯ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಯುನಿವರ್ಸಿಟಿ ಅಫ್ ಚಿಕಾಗೊ, ಯುನಿವರ್ಸಿಟಿ ಆಫ್ ವಿಸ್ಕಾನ್ಸಿನ್ ಮತ್ತು ಹಿಬ್ರೂ ಯುನಿವರ್ಸಿಟಿ ಆಫ್ ಜೆರುಸಲೆಂನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಾಧನೆಗಾಗಿ ಮಹರ್ಷಿ ವೇದವ್ಯಾಸ ಪ್ರಶಸ್ತಿ, ಕಾವ್ಯಶಾಸ್ತ್ರ ವಿಶಾರದ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಅವರು ಮೈಸೂರಿನಿಂದ ಪ್ರಕಟವಾಗುವ ದಿನಪತ್ರಿಕೆ ಸುಧರ್ಮಾ ಇದರ ಗೌರವ ಸಂಪಾದಕರಾಗಿದ್ದಾರೆ.