ಸಾರಾಂಶ
ಫೋಟೋ 11 ಎಂವೈಎಸ್ 30
--ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯ ಲಲಿತಕಲಾ ಕಾಲೇಜಿನ ಪ್ರಾಧ್ಯಾಪಕ, ಮಂಚೇಗೌಡನ ಕೊಪ್ಪಲಿನ ಕಲೆಮನೆ ಸಂಸ್ಥಾಪಕ ಡಾ.ಕೆ. ಕುಮಾರ್ ಅವರಿಗೆ ಈ ಸಾಲಿನ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ ದೊರೆತಿದೆ.ಮಾ.17 ರಂದು ಸಂಜೆ 4.30ಕ್ಕೆ ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 2001 ರಲ್ಲಿ ಸರ್. ಎಂ ವಿಶ್ವೇಶ್ವರಯ್ಯ ರಾಷ್ಟ್ರಪ್ರಶಸ್ತಿಯನ್ನು ಅಂದಿನ ರಾಯರ ಮಠದ ಗುರುಗಳಾಗಿದ್ದ ಸುಶ್ಮಿಂದ್ರ ಸ್ವಾಮೀಜಿಗಳಿಂದ ಸ್ವೀಕರಿಸಿದ್ದರು.
ಸ್ವಂತಕ್ಕೂ ಮೊದಲು ಕಲಾ ಸೇವೆ ಎಂದು ತಿಳಿದಿರುವ ಅಪರೂಪದ ಕಲಾವಿದರಾದ ಕುಮಾರ್ ಅವರು ಕಳೆದ 40 ವರ್ಷಗಳಿಂದ ಭರತನಾಟ್ಯ ನೃತ್ಯ ಕ್ಷೇತ್ರದಲ್ಲಿ ಪ್ರದರ್ಶಕ, ನಟುವನಾರ, ನೃತ್ಯ ಸಂಯೋಜಕ, ನೃತ್ಯದ ಹಿನ್ನೆಲೆ ಗಾಯಕ, ಕಲಾ ವಿಮರ್ಶಕ, ವಾಗ್ಗೇಯಕಾರ, ಗ್ರಂಥ ಕರ್ತೃ, ನೃತ್ಯ ರೂಪಕ ಹಾಗೂ ನಾಟಕಗಳ ನಿರ್ದೇಶಕರಾಗಿ, ಪ್ರಸ್ತುತ ಈ ವಯಸ್ಸಿನಲ್ಲೂ ಅತ್ಯದ್ಭುತ ನೃತ್ಯ ಪ್ರದರ್ಶಕರಾಗಿಯೂ ಹಾಗೂ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.ಪದ್ಮಭೂಷಣ ಡಾ.ಕೆ. ವೆಂಕಟಲಕ್ಷ್ಮಮ್ಮ, ಪ್ರೊ.ಎಂ. ಶಕುಂತಲಾ ಹನುಮಂತಪ್ಪ, ವಿದುಷಿ ನಂದಿನಿ ಈಶ್ವರ್, ಪ್ರೊ. ಉಮಾ ರಾವ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಶಿಕ್ಷಣ ಪಡೆದ ಇವರು,
ಸಂಗೀತದಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವಿದುಷಿ ಪಿ ರಮಾ, ಡಾ. ಗೌರಿ ಕುಪ್ಪು ಸ್ವಾಮಿ, ಡಾ. ಟಿ. ಎನ್ ಪದ್ಮಾ ಶಾಸ್ತ್ರಿ, ಡಾ. ಬಿ.ಎಸ್ ವಿಜಯ ರಾಘವನ್, ಡಾ. ಆರ್. ಎನ್ ಶೀಲತಾ, ಪ್ರೊ.ಎಂ.ವಿ ರತ್ನಾ, ಪ್ರೊ. ಶಾರದಮ್ಮ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ತರಬೇತಿ ಪಡೆದಿದ್ದಾರೆ.ನಾಟಕ ಶಾಸ್ತ್ರದಲ್ಲಿ ಡಾ. ಸಿಂಧುವಳ್ಳಿ ಅನಂತಮೂರ್ತಿ, ವಿ. ರಾಮಮೂರ್ತಿ, ಯೋಗಾನರಸಿಂಹ, ಶಿವಾನಂದ, ವೆಂಕಟಸುಬ್ಬಯ್ಯ, ನಾಣಿ ಅವರ ಬಳಿ ಲೈಟಿಂಗ್, ಮೇಕಪ್, ಕಾಸ್ಚ್ಯೂಮ್ ಡಿಸೈನ್, ಮುಂತಾದ ವಿಷಯಗಳಲ್ಲಿ ತರಬೇತಿ ಗಳಿಸಿದ್ದಾರೆ.
ಬಿ.ಕಾಂ, ಎಲ್ ಎಲ್ ಬಿ, ಬಿ. ಮ್ಯೂಸಿಕ್, ನೃತ್ಯ ವಿಶಾರದ, ಸಂಗೀತ ವಿಶಾರದ, ನೃತ್ಯ ಪ್ರಭಾಕರ- ಆರು ಸ್ನಾತಕ ಪದವಿಗಳು, ಎಂ.ಎ ಮ್ಯೂಸಿಕ್, ಎಂ.ಎ. ಭರತನಾಟ್ಯ, ಎಂ.ಎ ಸಂಸ್ಕೃತ- ಮೂರು ಸ್ನಾತಕೋತ್ತರ ಪದವಿ, ನೃತ್ಯದಲ್ಲಿ ಪಿ ಎಚ್ ಡಿ, ಡಿ.ಲಿಟ್, ಹಾಗೂ ಯುಜಿಸಿ ಯವರು ನಡೆಸುವ ಎನ್ಇಟಿ, ಒಟ್ಟಾರೆ 12 ಪದವಿಗಳನ್ನು ಗಳಿಸಿದ್ದಾರೆ. ಬಿ. ಮ್ಯೂಸಿಕ್, ಎಂ.ಎ ಭರತನಾಟ್ಯ, ಮತ್ತು ನೃತ್ಯ ಪ್ರಭಾಕರ, ಇವುಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಗಳಿಸಿ ನಾಲ್ಕು ಚಿನ್ನದ ಪದಕ, ನಾಲ್ಕು ನಗದು ಬಹುಮಾನ, 8 ಪ್ರತಿಭಾವಂತ ವಿದ್ಯಾರ್ಥಿ ವೇತನವನ್ನು ಪಡೆದ ಹೆಗ್ಗಳಿಕೆ ಇವರದು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ಪ್ರತಿಭಾವಂತ ನೃತ್ಯ ವಿದ್ಯಾರ್ಥಿ ವೇತನವನ್ನು ಸತತವಾಗಿ ಮೂರು ವರ್ಷಗಳ ಕಾಲ ಪಡೆದಿದ್ದಾರೆ.ವಿ. ರಾಮಮೂರ್ತಿ, ಡಾ. ಸಿಂಧುವಳ್ಳಿ ಅನಂತಮೂರ್ತಿ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ, ಮೈಮ್ ಶೋ ಗಳಲ್ಲಿ ಅಭಿನಯಿಸಿದ್ದಾರೆ. ಅಮೆರಿಕದ ಕನೆಕ್ಟಿಕೆಟ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 35 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜಿನ ನೃತ್ಯ ವಿಭಾಗದಲ್ಲಿ ಕರ್ತವ್ಯಕ್ಕೆ ಸೇರಿ ಪ್ರಸ್ತುತ ನೃತ್ಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಗರದಲ್ಲಿ ತಮ್ಮದೇ ಆದ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರವನ್ನು ಸ್ಥಾಪಿಸಿ ಕಳೆದ 35 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, ನಟುವಾಂಗ, ಮುಂತಾದ ವಿಷಯಗಳಲ್ಲಿ ತರಬೇತಿಯನ್ನು ನೀಡುವುದರ ಜೊತೆಗೆ ವಿಶ್ವದಾದ್ಯಂತ ಕಲಾವಿದರನ್ನು ಆಹ್ವಾನಿಸಿ ಹತ್ತು ಸಾವಿರಕ್ಕಿಂತ ಮಿಗಿಲಾಗಿ ನೃತ್ಯ ಕಲಾವಿದರು ಹಾಗೂ ಸಂಗೀತ ಕಲಾವಿದರನ್ನು ಆಹ್ವಾನಿಸಿ ವೇದಿಕೆಯನ್ನು ಸೃಷ್ಟಿಸಿ ಕೊಟ್ಟಿದ್ದಾರೆ, ಸಾವಿರಕ್ಕಿಂತ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ "ಕಲೆಮನೆ ಕಲಾಶ್ರೀ " ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮಂಚೇಗೌಡನ ಕೊಪ್ಪಲಿನಲ್ಲಿ ಕಳೆದ ಮೂರು ವರ್ಷಗಳಿಂದ ತಮ್ಮದೇ ಆದ ಕಲೆಮನೆ ಸಭಾಂಗಣವನ್ನು ನಿರ್ಮಿಸಿ ಪ್ರತಿ ತಿಂಗಳು ಸತತವಾಗಿ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವ ಹಮ್ಮಿಕೊಂಡು ಸಾವಿರಾರು ಕಲಾವಿದರಿಗೆ ವೇದಿಕೆಯನ್ನು ಸೃಷ್ಟಿಸಿಕೊಟ್ಟಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ ಯುನೆಸ್ಕೋ, ಆರ್ಯಭಟ ಮುಂತಾದ ಐದು ಸಂಸ್ಥೆಗಳಿಂದ ಐದು ಅಂತರರಾಷ್ಟ್ರೀಯ ಪ್ರಶಸ್ತಿಗಳು, ಭಾರತೀಯ ಶಿಕ್ಷಾ ರತನ್, ಜೆಮ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಸಂಸ್ಥೆಗಳಿಂದ 16 ಕ್ಕಿಂತ ಹೆಚ್ಚು ರಾಷ್ಟ್ರ ಪ್ರಶಸ್ತಿಗಳು, ಕರ್ನಾಟಕ ಸರ್ಕಾರ ನೀಡುವ "ಕರ್ನಾಟಕ ಕಲಾಶ್ರೀ " ಪ್ರಶಸ್ತಿ ಸೇರಿದಂತೆ 20ಕ್ಕಿಂತ ಹೆಚ್ಚು ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ನೆಲೆಸಿ ಇವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
(ಮಾಹಿತಿ- ಜಮುನಾರಾಣಿ ವಿ. ಮಿರ್ಲೆ, ಮೈಸೂರು)