ಮಾಜಿ ಸಚಿವ ಸುಧಾಕರ್‌ಗೆ ಒಲಿದ ಟಿಕೆಟ್

| Published : Mar 25 2024, 12:50 AM IST

ಸಾರಾಂಶ

ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ರ ಪುತ್ರ ಅಲೋಕ್ ವಿಶ್ವನಾಥ್, ಮಾಜಿ ಸಚಿವ ಎಂಟಿಬಿ ನಾಗರಾಜ್ ಆಕಾಂಕ್ಷಿಗಳಾಗಿದ್ದರೂ ಕೊನೆಗೆ ಅಖಾಡದಲ್ಲಿ ಡಾ.ಕೆ.ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ಮಾತ್ರ ಉಳಿದಿದ್ದರು. ಜೊತೆಗೆ, ಸುಮಲತಾ ಅಂಬರೀಶ್, ಸದಾನಂದ ಗೌಡರ ಹೆಸರುಗಳು ಸಹಾ ತೇಲಿ ಬಂದಿದ್ದವು. ಅಂತಿಮವಾಗಿ ಬಿಜೆಪಿ ನಡೆಸಿದ ಸಮೀಕ್ಷೆಯಲ್ಲಿ ಸುಧಾಕರ್ ಪರವಾಗಿ ವರದಿ ಬಂದಿದ್ದ ಹಿನ್ನೆಲೆಯಲ್ಲಿ ಡಾ.ಕೆ.ಸುಧಾಕರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಡಾ.ಕೆ.ಸುಧಾಕರ್, ನಂತರ ಕೋವಿಡ್ ಸಂಕಷ್ಟ ಕಾಲದಲ್ಲಿ ಆರೋಗ್ಯ ಸಚಿವರಾಗಿ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಮಾಡಿ ದೇಶಕ್ಕೆ ಮಾದರಿಯಾಗಿದ್ದರು. ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದು ತರಗತಿಗಳನ್ನು ಆರಂಭ ಸಹ ಮಾಡಿದ್ದರು. ಬರದಿಂದ ಕಂಗೆಟ್ಟು ನೀರಿಲ್ಲದ ಜಿಲ್ಲೆಗೆ ಹೆಚ್ ಎನ್ ವ್ಯಾಲಿ ನೀರು ಹರಿಸಿ ಅಂತರ್ ಜಲಮರುಪೂರಣ ಮಾಡಿ ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ತಂದಿದ್ದರು. ಅಭಿವೃದ್ಧಿ ಮಾನದಂಡದ ಮೇಲೆ ಟಿಕೆಟ್‌ ಕೇಳಿದ್ದರು. ಬಿಜೆಪಿ ಹೈಕಮಾಂಡ್‌ಗೆ ಜೆಡಿಎಸ್‌ನಿಂದಲೂ ಸುಧಾಕರ್‌ಗೆ ಟಿಕೆಟ್‌ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸುಧಾಕರ್ ಪರ ನಿಂತಿದ್ದರು. ಯಡಿಯ್ಯೂರಪ್ಪ ಮತ್ತು ವಿಜಯೇಂದ್ರಗೆ ಅತ್ಯಾಪ್ತರಾಗಿರುವ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರು ತಮ್ಮ ಪುತ್ರ ಅಲೋಕ್‌ ಗೆ ಟಿಕೆಟ್‌ ಕೊಡಿಸಲು ಎಲ್ಲ ರೀತಿಯ ಶ್ರಮ ಹಾಕಿದ್ದರು. ಆದರೆ, ಟಿಕೆಟ್ ಅಂತಿಮವಾಗಿ ಸುಧಾಕರ್ ಪಾಲಾಗಿದೆ.

ಕಾಂಗ್ರೆಸ್‌ನಿಂದ ಎಐವೈಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾರಾಮಯ್ಯಗೆ ಟಿಕೆಟ್ ಸಿಗುವ ಸಾಧ್ಯತೆ ಇದ್ದು, ಅವರು ಸುಧಾಕರ್‌ಗೆ ಎದುರಾಳಿಯಾಗುವ ಸಾಧ್ಯತೆಯಿದೆ.

ರಾಯಚೂರು: ಕೊನೆ ಗಳಿಗೆಯಲ್ಲಿ ಅಮರೇಶ್ವರಗೆ ಮತ್ತೆ ಅವಕಾಶ:ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್‌ , ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಮತ್ತೊಮ್ಮೆ ಅವಕಾಶ ನೀಡಿದೆ. ಪಕ್ಕದ ಕೊಪ್ಪಳ ಕ್ಷೇತ್ರದ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಈ ಸಲ ಟಿಕೆಟ್‌ ಕೈತಪ್ಪಿತ್ತು. ಅದೇ ರೀತಿ ರಾಯಚೂರು ಕ್ಷೇತ್ರದಲ್ಲೂ ಹಾಲಿ ಸಂಸದರಿಗೆ ಟಿಕೆಟ್‌ ದೊರಕುವುದಿಲ್ಲ ಎನ್ನುವ ಸಂದೇಶ ಇಡೀ ಕ್ಷೇತ್ರದಲ್ಲಿ ಹರಿದಾಡಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಹಾಲಿ ಸಂಸದರಿಗೆ ಮತ್ತೊಮ್ಮೆ ಅವಕಾಶ ಕೊಟ್ಟು ಅಚ್ಚರಿ ಮೂಡಿಸಿದೆ. ಆರಂಭದಲ್ಲಿ ಅಮರೇಶ್ವರ ಅವರು ಸ್ಪರ್ಧೆಗೆ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ನಂತರ, ತಮ್ಮ ಆಸಕ್ತಿಯನ್ನು ಹೊರಹಾಕಿದ್ದರು.ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ಇವರ ಜೊತೆಗೆ ರಾಯಚೂರಿನ ಮಾಜಿ ಸಂಸದ ಬಿ.ವಿ.ನಾಯಕ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜು ಸಹ ಟಿಕೆಟ್‌ ಗಿಟ್ಟಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು. ಕೊನೆಗೂ ಅವರಿಗೆ ನಿರಾಸೆ ದಕ್ಕಿದಂತಾಗಿದೆ.

ಚಿತ್ರದುರ್ಗ ಬಿಜೆಪಿ ಟಿಕೆಟ್ ಮತ್ತಷ್ಟು ಸಸ್ಪೆನ್ಸ್

ಚಿತ್ರದುರ್ಗ: ಲೋಕಸಭೆ ಚುನಾವಣೆಯ ಕರ್ನಾಟಕದ ಎಲ್ಲ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದ್ದು ಚಿತ್ರದುರ್ಗದ್ದು ಮಾತ್ರ ಬಾಕಿ ಉಳಿದಿರುವುದು ಅಚ್ಚರಿ ಮೂಡಿಸಿದೆ. ರಾಷ್ಟ್ರೀಯ ಪಕ್ಷವೊಂದಕ್ಕೆ ಅದೂ ಮೋದಿ ಅವರ ನೇತೃತ್ವದಲ್ಲಿ ಚಿತ್ರದುರ್ಗ ಕ್ಷೇತ್ರ ಅಭ್ಯರ್ಥಿಗಳ ಬರ ಎದುರಿಸಬೇಕಾಗಿ ಬಂತಾ ಎಂಬ ಸಹಜ ಪ್ರಶ್ನೆ ಮೂಡಿದೆ. ಕರ್ನಾಟಕದ ಯೋಗಿಯಾಗಿ ಬಿಂಬಿಸಲು ಮಾದಾರ ಚೆನ್ನಯ್ಯ ಶ್ರೀಗಾಗಿಯೇ ಟಿಕೆಟ್ ಹಂಚಿಕೆ ವಿಳಂಬವಾಗುತ್ತಿದೆಯಾ ಎಂಬ ಶಂಕೆಗಳು ಮೂಡಿವೆ.ಚಿತ್ರದುರ್ಗ ಲೋಕಸಭೆ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗಿದೆ. ಮಧ್ಯ ಕರ್ನಾಟಕದಲ್ಲಿ ಮಾದಿಗ ಸಮುದಾಯ ವಿಸ್ತೃತವಾಗಿ ಹರಡಿರುವುದರಿಂದ ಆ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬಿಗಿ ಪಟ್ಟು ಬಿಜೆಪಿಯಲ್ಲಿದೆ. ಕಾಂಗ್ರೆಸ್ ಕೂಡಾ ಇದಕ್ಕೆ ಹೊರತಾಗಿಲ್ಲ. ಮಾದಿಗ ಸಮುದಾಯಕ್ಕೆ ಸೇರಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪಗೆ ಕಾಂಗ್ರೆಸ್ ಈಗಾಗಲೇ ಟಿಕೆಟ್ ನೀಡಿದೆ. ಹಾಗಾಗಿ ಬಿಜೆಪಿ ಯಾರಿಗೆ ನೀಡುತ್ತದೆ ಎಂಬ ಕುತೂಹಲ ರಾಜಕೀಯದಲ್ಲಿದೆ.ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಾವು ಈ ಬಾರಿ ಸ್ಪರ್ಧೆ ಮಾಡುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಈಗಾಗಲೇ ರವಾನಿಸಿದ್ದಾರೆ. ಹಾಗಾಗಿ ಎಡಗೈಗೆ ಸೇರಿರುವ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಹೆಸರು ಮುಂಚೂಣಿಗೆ ಬಂದಿದೆ. ನಾನು ನಿಲ್ಲಲ್ಲ, ನಾರಾಯಣಸ್ವಾಮಿಗೆ ನೀವೇ ನಿಲ್ಲಿ ಅಂತ ಕಾರಜೋಳ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಉಳಿದಂತೆ ಬಿಜೆಪಿಯಲ್ಲಿ ಭೋವಿ ಸಮುದಾಯಕ್ಕೆ ಸೇರಿದ ರಘು ಚಂದನ್ ಸ್ಫರ್ಧೆಗೆ ತುದಿಗಾಲಲ್ಲಿದ್ದಾರೆ. ಮಾದಿಗರಿಗೆ ಟಿಕೆಟ್ ನೀಡಿದರೆ ಶಿವಮೊಗ್ಗ, ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ, ಕೊಪ್ಪಳದಲ್ಲಿ ಸಹಾಯವಾಗುತ್ತದೆ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. ಮಾದಿಗರೇತರಿಗೆ ಟಿಕೆಟ್ ನೀಡಿದರೆ ಉಳಿದ ಕ್ಷೇತ್ರಗಳಲ್ಲಿ ಹಿನ್ನಡೆಯಾಗುವ ಆತಂಕ ಇದೆ. ಹಾಗಾಗಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಇಬ್ಬರೂ ಬೇಡವೆಂದಾದರೆ ಕೊನೆಗೆ ಮಾದಾರ ಶ್ರೀ ಉಳಿದುಕೊಳ್ಳುತ್ತಾರೆ. ಹಾಗಾಗಿಯೇ ಟಿಕೆಟ್ ಘೋಷಣೆ ವಿಳಂಬವಾಗುತ್ತಿದೆ ಎನ್ನಲಾಗಿದೆ.