ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ವೇಳೆ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ತಾಲೂಕಿನ ಹುಳುವನಹಳ್ಳಿ ಗ್ರಾಮದಲ್ಲಿ ನಡೆದಿದೆ.ಹುಳುವನಹಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಅರುಣ್ ಕುಮಾರ್ ಹಲ್ಲೆಗೊಳಗಾದ ಯುವಕ. ಕಾಂಗ್ರೆಸ್ ಕಾರ್ಯಕರ್ತರಾದ ಕೃಷ್ಣಪ್ಪ, ಸುರೇಂದ್ರ, ರಘುವೀರ್, ಮಂಜುನಾಥ್, ಮನೋಹರ್ ಸೇರಿ 15ಕ್ಕೂ ಹೆಚ್ಚಿನ ಕಾರ್ಯಕರ್ತರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆ ವೇಳೆ ಬಿಜೆಪಿ ಕಾರ್ಯಕರ್ತ ಅರುಣ್ ಕುಮಾರ್ ಅವರ ದೇಹದ ಸಾಕಷ್ಟು ಭಾಗಗಳಿಗೆ ಪೆಟ್ಟಾಗಿದ್ದು, ಮೊಣಕಾಲು ಮೂಳೆ ಮುರಿದಿದ್ದು, ಹೊಸಕೋಟೆ ಎಂವಿಜೆ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಗುರುವಾರ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ಧಾರೆ ಎನ್ನಲಾಗಿದೆ.ಆಸ್ಪತ್ರೆಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಭೇಟಿ:
ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತನ ಯೋಗಕ್ಷೇಮವನ್ನು ಮಾಜಿ ಸಚಿವ ಎಂಟಿಬಿ ನಾಗರಾಜ್ ಆಸ್ಪತ್ರೆಗೆ ತೆರಳಿ ವಿಚಾರಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸಕೋಟೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸುಮಾರು 18, 20 ವರ್ಷಗಳ ಹಿಂದೆ ಹೊಸಕೋಟೆಯಲ್ಲಿ ಈ ರೀತಿಯ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದವು. ಆದರೆ ನಾನು ಅಧಿಕಾರಕ್ಕೆ ಬಂದ ನಂತರ ಇವೆಲ್ಲವಕ್ಕೂ ಕಡಿವಾಣ ಹಾಕಿದ್ದೆ. ಆದರೆ ಈಗ ಎರಡು ಬಾರಿ ಸೋಲನುಭವಿಸಿದ ಮೇಲೆ ಮತ್ತೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿದೆ. ವಿಜಯೋತ್ಸವ ಆಚರಿಸುವಾಗ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಇದನ್ನು ನಾನು ಸಹಿಸಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುವಾಗ ಬಿಜೆಪಿ ಕಾರ್ಯಕರ್ತರು ಏನಾದರೂ ತೊಂದರೆ ಕೊಟ್ಟಿದ್ದರೆ? ಸಂಭ್ರಮಾಚರಣೆ ಮಾಡುವ ಹಕ್ಕು ನಮ್ಮ ಕಾರ್ಯಕರ್ತರಿಗಿಲ್ಲವೇ? ಎಂದು ಶಾಸಕ ಶರತ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧ ಚಲೋ ಎಚ್ಚರಿಕೆ;ಹೊಸಕೋಟೆ ತಾಲೂಕಿನಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿದ್ದು, ಜನಸಾಮಾನ್ಯರಿಗೆ ನ್ಯಾಯ ಧಕ್ಕುತ್ತಿಲ್ಲ. ವಿನಾಕಾರಣವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುತ್ತಿದ್ದು, ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅಸಮರ್ಥರಾಗಿ ಉತ್ತರವನ್ನು ನೀಡುತ್ತಾರೆ. ಈ ವಿಚಾರವಾಗಿ ಐಜಿ ಹಾಗೂ ಎಸ್ಪಿ ಅವರ ಬಳಿ ಚರ್ಚಿಸಿದ್ದೇನೆ. ಹಲ್ಲೆ ಪ್ರಕರಣಗಳ ಸಂಪೂರ್ಣ ಮಾಹಿತಿ ಪಡೆದು ಹೊಸಕೋಟೆಯಿಂದ ವಿಧಾನಸೌಧ ಚಲೋ ನಡೆಸುತ್ತೇನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಟೌನ್ ಬ್ಯಾಂಕ್ ನಿರ್ದೇಶಕ ಬಾಲಚಂದ್ರ ಸೇರಿ ಹಲವರು ಹಾಜರಿದ್ದರು.