ಸಾರಾಂಶ
ಕರ್ನಾಟಕದಲ್ಲಿ ಶರಣ ಸಂಸ್ಕೃತಿಯ ವಿದ್ಯಾಪೀಠದ ಮೂಲಕ ನಾಡಿನ ತುಂಬೆಲ್ಲ ಬಸವತತ್ವವನ್ನು ಪ್ರಸಾರ ಮಾಡಿದ ದಂಡನಾಯಕ ಲಿಂ.ಡಾ.ಮಹಾಂತಸ್ವಾಮೀಜಿ ಎಂದು ಬಾಲ್ಕಿ ಹಿರೇಮಠ ಸಂಸ್ಥಾನಮಠದ ಪಟ್ಟಾಧ್ಯಕ್ಷ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ಇಡೀ ಕರ್ನಾಟಕದಲ್ಲಿ ಗಟ್ಟಿಯಾಗಿ ಬಸವತತ್ವದ ಧ್ವಜ ಹಿಡಿದ ಏಕೈಕ ಸ್ವಾಮಿಗಳು, ಶರಣ ಸಂಸ್ಕೃತಿಯ ವಿದ್ಯಾಪೀಠದ ಮೂಲಕ ನಾಡಿನ ತುಂಬೆಲ್ಲ ಬಸವತತ್ವವನ್ನು ಪ್ರಸಾರ ಮಾಡಿದ ಬಸವತತ್ವದ ದಂಡನಾಯಕ. ಬಸವಣ್ಣನೇ ಗುರು ಎಂದು ಹೇಳುವ ಮಠ ಚಿತ್ತರಗಿ ಸಂಸ್ಥಾನಮಠದ ಲಿಂ.ಡಾ.ಮಹಾಂತಸ್ವಾಮಿಗಳು ಎಂದು ಬಾಲ್ಕಿಯ ಹಿರೇಮಠ ಸಂಸ್ಥಾನಮಠದ ಪಟ್ಟಾಧ್ಯಕ್ಷ ಡಾ.ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಶ್ರೀ ಬಸವ ಮಂಟಪ ಗುರುವಾರ ನಡೆದ ಶರಣ ಸಿದ್ಧಾಂತ ವಿದ್ಯಾಪೀಠದ 53ನೇ ತರಬೇತಿ ಶಿಬಿರ ಮತ್ತು ಲಿಂ.ಮಹಾಂತ ಶಿವಯೋಗಿಗಳ 6ನೇ ಶರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಚನ ಸಾಹಿತ್ಯ ಜೋಡಿಸಿದ ಕೀರ್ತಿ, ಬಸವತತ್ವದ ನಿಷ್ಠೆ, ಶ್ರದ್ಧೆ, ನಾಡಿನ ತಂಬ ಜನಮಾನಸದಲ್ಲಿ ಬಿತ್ತರಿಸಿದ ಶೇಯಸ್ಸು ಲಿಂ.ಡಾ.ಮಹಾಂತ ಶ್ರೀಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ವಿ.ಮ.ವಿ.ವ. ಸಂಘದ ಕಾಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಭಾರತ ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ನಾಲ್ಕು ದಿನಗಳ ಕಾಲ ಶ್ರೀಮಠದಲ್ಲಿ ನಡೆಯುವ ಇಷ್ಟಲಿಂಗ ಪೂಜೆ, ವಚನಪಠಣ, ಶಿವಾನುಭವ ಪಾಠ, ವಚನ ಅಧ್ಯಯನ ಕಾರ್ಯಕ್ರಮಗಳು ಜನರಿಗೆ ಉಪಯುಕ್ತವಾಗಲಿದೆ. ಇಲ್ಲಿನ ಅನುಭವಗಳನ್ನು ಮನಸ್ಸಿನಲ್ಲಿ ಅಳವಡಿಸಿಕೊಂಡರೆ ಈ ಕಾರ್ಯಕ್ರಮಗಳು ಸಾರ್ಥಕವಾಗುತ್ತದೆ. ಹಲವಾರು ಜನರ ಹಿರಿಯರ ಅನುಭವಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.ವಿ.ಮ.ವಿ.ವ. ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ, ವಿಜಯ ಮಹಾಂತ ಶಿವಯೋಗಿಗಳು ತಮ್ಮ ಜೋಳಿಗೆಗೆ ದುಶ್ಚಟಗಳನ್ನು ಬೇಡುವ ಮೂಲಕ ಸಮಾಜ ಸುಧಾರಣೆಗೆ ಸಾಕ್ಷಿಯಾಗಿ ಸದಾ ಕಾಲಕ್ಕೂ ನಡೆದಾಡುವ ದೇವರಾಗಿದ್ದಾರೆ ಎಂದರು.
ರಾಮದುರ್ಗದ ಸಿದ್ದಣ್ಣ ಲಂಗೋಟಿ ಮಾತನಾಡಿ, 20ನೇ ಪೀಠಾಧ್ಯಕ್ಷರಾದ ಮಹಾಂತ ಶಿವಯೋಗಿಗಳು ಬಸವ ತತ್ವಗಳನ್ನು ಬೆನ್ನಿಗೇರಿಸಿಕೊಂಡು ಸಮಾಜದ ಒರೆಕೋರೆಗಳನ್ನು ತಿದ್ದುತ್ತ ಬಸವ ಭಕ್ತ ಸಮೂಹವನ್ನು ಹೆಚ್ಚಿಸುತ್ತ ಗುರು ಮಾಹಾಂತ ಶ್ರೀಗಳ ಮಾರ್ಗವನ್ನು ಪಾಲಿಸುತ್ತ ಶರಣ ಸಂಸ್ಕೃತಿ ಬಿತ್ತುತ್ತಿದ್ದಾರೆ ಎಂದು ಹೇಳಿದರು.ಶಿರೂರ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಮರೆಗುದ್ದಿಯ ಬಸವರಾಜ ದೇವರು, ಮನಗೂಳಿಯ ವಿರತಿಶಾಯನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಕ್ಕನ ಬಳಗದ ಅಧ್ಯಕ್ಷೆ ದೊಡ್ಡಮ್ಮ ಹವಾಲ್ದಾರ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು.
ಬಾಗಲಕೋಟೆಯ ಬಿ.ವಿ.ವಿ. ಸಂಘದ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಬರಗುಂಡಿ, ವಿ.ಮ.ಬ್ಯಾಂಕ್ ಅಧ್ಯಕ್ಷ ಶಿವಾನಂದ ಕಂಠಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ನಾಗರಾಜ ನಾಡಗೌಡ ಸ್ವಾಗತಿಸಿದರು. ಸಂತೋಷ ರಾಜಮನಿ ಅವರ ಮಕ್ಕಳಿಂದ ವಚನ ನೃತ್ಯ ಜರುಗಿತು. ಡಾ.ಶಿವಗಂಗಾ ರಂಜಾಗಿ ನಿರೂಪಿಸಿದರು. ಅರುಣೋದಯ ದುದ್ಗಿ ವಂದಿಸಿದರು.