ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಿ

| Published : Sep 29 2024, 01:41 AM IST

ಸಾರಾಂಶ

ಇಡೀ ದೇಶದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿರುವ ರಾಜ್ಯ ಕರ್ನಾಟಕ.

ಕನ್ನಡಪ್ರಭ ವಾರ್ತೆ ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವು ಪ್ರಶಸ್ತಿ ಸ್ಥಾಪಿಸಿ, ಅವರ ಜನ್ಮ ದಿನದಂದು ಪ್ರತಿವರ್ಷ ಸಾಧಕರಿಗೆ ನೀಡಬೇಕು ಎಂದು ಸಾಹಿತಿ ಹಾಗೂ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಮೈಸೂರು ಜಿಲ್ಲೆ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆಯು ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಎನ್.ಎನ್. ಚಿಕ್ಕಮಾದು ಅವರ ‘ಪ್ರಜಾಮಾತೆ’ ಮತ್ತು ‘ಕೃಷ್ಣರಾಜಭೂಪ ಮನೆಮನೆ ದೀಪ’ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.ಇಡೀ ದೇಶದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿರುವ ರಾಜ್ಯ ಕರ್ನಾಟಕ. ಪಂಪ, ವಾಲ್ಮೀಕಿ ಸೇರಿದಂತೆ ಅನೇಕರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸ್ಥಾಪನೆ ಮಾಡಲಾಗಿದೆ. ಅದೇ ರೀತಿ ನಾಲ್ವಡಿ ಅವರ ಹೆಸರಿನಲ್ಲೂ ಪ್ರಶಸ್ತಿ ಸ್ಥಾಪಿಸಬೇಕು ಎಂದು ಅವರು ಸಲಹೆ ನೀಡಿದರು.ಎಲ್ಲಾ ಸ್ವಾತಂತ್ರ್ಯಕ್ಕೂ ಸ್ತ್ರೀಯರು ಅರ್ಹರು ಎನ್ನುವ ಕಾರಣಕ್ಕೆ ದೇಶದಲ್ಲಿ ಶತಶತಮಾನಗಳಿಂದಲೇ ಸ್ತ್ರೀಯರ ಪರವಾಗಿ ಅನೇಕ ಚಳವಳಿಗಳು ಹುಟ್ಟಿಕೊಂಡಿವೆ. ಸಂರ್ಕೀಣ ಸಮಾಜದ ಸಂದರ್ಭದಲ್ಲಿ ನಾವು ಸ್ತ್ರೀಯರ ಸ್ಥಾನಮಾನದ ಚರ್ಚೆ ನಡೆಸಬೇಕಾಗಿದೆ. ದೇಶದಲ್ಲಿ ಮಧ್ಯಮ ವರ್ಗ ಹುಟ್ಟಿದ್ದ ಫಲವಾಗಿ ಸ್ತ್ರೀಯರಿಗೆ ಅನೇಕ ನಿಷೇಧಗಳು ಬಂದವು. ಹಿಂದೆಯೂ ನಿಷೇಧಗಳಿದ್ದವು. ಪುರುಷ ಯಾವಾಗ ಆರ್ಥಿಕ ಪದ್ಧತಿಯನ್ನು ನಿಯಂತ್ರಿಸಲು ತೊಡಗಿದ್ದ ಅದರ ಫಲವಾಗಿ ಸಾಮಾಜಿಕ, ಆರ್ಥಿಕ ಚಟುವಟಿಕೆಗಳಲ್ಲಿ ಸ್ತ್ರೀಯರನ್ನು ಅಲ್ಲಗೆಳೆಯಲಾಯಿತು. ನಿರಾಕರಿಸಿ, ದೂರ ಇಡಲಾಯಿತು. ಅಂತಹ ಚರ್ಚೆ ಅಗತ್ಯ. ಅದು ಚರಿತ್ರೆಯ ಚರ್ಚೆ ಎಂದು ಅವರು ಹೇಳಿದರು.ನಾನು ಸರ್ಕಾರದ ಜೊತೆಗೆ ಸಂಧಾನ, ಸಂಘರ್ಷವನ್ನು ಮಾಡಿದ್ದೀನಿ. ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗ ಉಪಾಯಗಳನ್ನು ಕಂಡು ಹಿಡಿಯೋಣ. ನಿಮ್ಮ ಬೇಡಿಕೆಗಳು ನಿಜವಾಗಿ ಸರಿ ಅನ್ನಿಸಿದ್ದರೇ ಸರ್ಕಾರದ ಜೊತೆಗೆ ಜಗಳವಾಡಲು ಸಿದ್ಧನಾಗಿದ್ದೇನೆ ಎಂದರು.ಪ್ರಜಾಮಾತೆ ಕೃತಿ ಕುರಿತು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎಸ್.ಡಿ. ಶಶಿಕಲಾ, ಕೃಷ್ಣರಾಜಭೂಪ ಮನೆಮನೆ ದೀಪ ಕೃತಿ ಕುರಿತು ಸಾಹಿತಿ ಬನ್ನೂರು ಕೆ. ರಾಜು ಮಾತನಾಡಿದರು.ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಎಂ. ಮಹೇಶ, ಕೃತಿಗಳ ಲೇಖಕ ಡಾ.ಎನ್.ಎನ್. ಚಿಕ್ಕಮಾದು, ಪ್ರಕಾಶಕ ಓಂಕಾರಪ್ಪ, ನಾಟಕಕಾರ ಪ್ರೊ. ರಾಜಪ್ಪ ದಳವಾಯಿ ಮೊದಲಾದವರು ಇದ್ದರು.