ಸಾರಾಂಶ
ತುಮಕೂರು : ಕಲಾವಿದರು, ಸಾಹಿತಿಗಳು , ರಾಜಕಾರಣಿಗಳ ನುಡಿ, ನಡೆಗಳಲ್ಲಿ ನೈತಿಕತೆ ಕಾಣೆಯಾಗುತ್ತಿರುವ ಈ ಕಾಲದಲ್ಲಿ, ಡಾ.ರಾಜ್‌ಕುಮಾರ್ ತಾವು ಬದುಕಿರುವಷ್ಟು ಕಾಲವೂ ನುಡಿ, ನಡೆಯಲ್ಲಿ ನೈತಿಕತೆಯನ್ನು ಉಳಿಸಿಕೊಂಡು, ಜನರ ಅಭಿರುಚಿ ಕೆಡಿಸದೆ ಕಲಾಸೇವೆ ಮಾಡಿದ ಮಹಾನ್ ಕಲಾವಿದರು ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಅಮರ ಜ್ಯೋತಿ ಸಾಂಸ್ಕೃತಿಕ ಟ್ರಸ್ಟ್ ದಿಬ್ಬೂರು ಆಯೋಜಿಸಿದ್ದ ಡಾ.ರಾಜ್‌ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಮತ್ತು ಸಂಗೀತ ನಿರ್ದೇಶಕ ಐ.ಎಲ್.ರಂಗಸ್ವಾಮಯ್ಯ ಅವರಿಗೆ 2025ನೇ ಸಾಲಿನ ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಚಮ್ಮಾರನಿಂದ ಹಿಡಿದು, ಚಕ್ರವರ್ತಿಯವರೆಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವ ಮೂಲಕ ಎಲ್ಲಾ ವರ್ಗದ ಜನರನ್ನು ಪ್ರತಿನಿಧಿಸಿದ ಏಕೈಕ ಕಲಾವಿದ ಡಾ.ರಾಜ್. ಕನ್ನಡ ಕಲಾವಿದರಲ್ಲಿ ಜಾತಿ ಮೀರಿ ಕಲಿತವರು ಇದ್ದಾರೆ, ಕಲಿಸಿದವರು ಇದ್ದಾರೆ. ಇದೇ ನಿಜವಾದ ಅಂತಃಸತ್ವ. ಆದರೆ ರಾಜಕುಮಾರ್ ಎಂದಿಗೂ ತನ್ನ ತಾರಮೌಲ್ಯವನ್ನು ತಲೆಗೆ ಏರಿಸಿಕೊಳ್ಳದೆ ಅದನ್ನು ಪ್ರೇಕ್ಷಕರ ಹೃದಯಕ್ಕೆ ತಲುಪಿಸಿದರು. ಹಾಗಾಗಿಯೇ ಅವರು ಚಲನಚಿತ್ರರಂಗದಲ್ಲಿ ಡಾ.ರಾಜಕುಮಾರ್ ಆಗಿದ್ದರೂ, ಪ್ರೇಕ್ಷಕರ ಪಾಲಿಗೆ ಮುತ್ತುರಾಜ್ ಆಗಿಯೇ ಉಳಿದರು ಎಂದರು.
1968 ಕ್ಕೆ ಡಾ.ರಾಜ್ ಕನ್ನಡ ಚಿತ್ರರಂಗ ಪ್ರವೇಶಿಸಿದ ನಂತರ ಚಲನಚಿತ್ರ ತಯಾರಿಕಾ ವೇಗ ಹೆಚ್ಚಳವಾಯಿತು. ಕನ್ನಡ ಚಲನಚಿತ್ರವನ್ನು ಏಕಾಂಗಿಯೇ ಹೆಗಲ ಮೇಲೆ ಹೊತ್ತು ಬೆಳೆಸಿದ ಕೀರ್ತಿ ಡಾ.ರಾಜಕುಮಾರ್ ಅವರಿಗೆ ಸಲ್ಲುತ್ತದೆ. ಜನರಿಗೆ ಕೆಟ್ಟ ಸಿನಿಮಾಗಳನ್ನು ನೀಡಿ ಮೋಸ ಮಾಡಲಿಲ್ಲ. ಜನರ ಸದಭಿರುಚಿಯನ್ನು ಬೆಳೆಸಿದವರು ಡಾ.ರಾಜ್, ಅವರ ಹೆಸರಿನಲ್ಲಿ ಡಾ.ರಾಜಕುಮಾರ್ ಅವರ ಧ್ವನಿಯನ್ನೇ ಹೊಂದಿರುವ ದಿಬ್ಬೂರು ಮಂಜು ಅವರು ಅಮರಜೋತಿ ಸಾಂಸ್ಕೃತಿಕ ಟ್ರಸ್ಟ್ ಹೆಸರಿನಲ್ಲಿ ನೀಡಿರುವುದು ಸಂತೋಷದ ವಿಚಾರವಾಗಿದೆ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ನುಡಿದರು.
ಡಾ.ರಾಜರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಗಂಗಾಧರ ಮೊದಲಿಯಾರ್ ಕನ್ನಡ ಸಿನಿ ಪ್ರೇಕ್ಷಕರಿಂದ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಅಮರಜೋತಿ ಸಾಂಸ್ಕೃತಿಕ ಟ್ರಸ್ಟ್ ಡಾ.ರಾಜ್‌ರತ್ನ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರನ್ನು ನೆನಪಿಸುವ ಕೆಲಸ ಮಾಡುತ್ತಿದೆ. ಇದೊಂದು ಒಳ್ಳೆಯ ಕೆಲಸ. ಈ ಪ್ರಶಸ್ತಿ ಮತ್ತಷ್ಟು ಅರ್ಹರಿಗೆ ತಲುಪವಂತಾಗಲಿ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಅಮರಜ್ಯೋತಿ ಸಾಂಸ್ಕೃತಿಕ ಟ್ರಸ್ಟ್ ನ ದಿಬ್ಬೂರು ಮಂಜು ಮಾತನಾಡಿ, ಡಾ.ರಾಜ್‌ಕುಮಾರ್ ಅವರ ಸಿನಿಮಾ ಹಾಡುಗಳನ್ನು ಕೇಳುತ್ತಾ ಬೆಳೆದ ನನಗೆ, ಅವರಂತೆಯೇ ಹಾಡಬೇಕೆಂಬ ಬಯಕೆ ಇತ್ತು. ಶಿಕ್ಷಣ ಹೈಸ್ಕೂಲ್ ಹಂತಕ್ಕೆ ಮೊಟಕುಗೊಂಡಾಗ, ಸಮಯ ಕಳೆಯಲು ಹಾಡುವುದನ್ನು ಕಲಿತು, ಅದನ್ನೇ ರೂಢಿಸಿಕೊಂಡೇ, 2004 ರಿಂದಲೂ ಹಾಡುಗಾರಿಕೆಯಿಂದ ಬಂದ ಹಣವನ್ನು ಕ್ರೂಢಿಕರಿಸಿ, ಡಾ.ರಾಜ್ ಹುಟ್ಟು ಹಬ್ಬದ ನೆನಪಿನಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಲಹೆಯಂತೆ ಕಳೆದ ಎರಡು ವರ್ಷಗಳಿಂದ ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ರಂಗಭೂಮಿ, ಚಲನಚಿತ್ರ ರಂಗದಲ್ಲಿ ಕೆಲಸ ಮಾಡಿದವರನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ಹಾರೋನ್ಮಿಯಂ ವಾದಕರಾದ ಬಿ.ಎಸ್.ಶ್ರೀನಿವಾಸಮೂರ್ತಿ, ತಬಲವಾದಕರಾದ ಎಂ.ಪಿ.ಪುಟ್ಟಶಾಮಯ್ಯ, ನಾಗಾರ್ಜುನ ಕಲಾ ಸಂಘದ ಸಂಸ್ಥಾಪಕರಾದ ಕೆ.ಸಿ.ನರಸಿಂಹಮೂರ್ತಿ, ಹಿರಿಯ ಗಾಯಕರಾದ ಎ.ಎನ್.ನಾರಾಯಣಪ್ರಸಾದ್,ಸಂಗೀತ ನಿರ್ದೇಶಕ ಸಂಗೀತ್ ಶ್ರೀನಿವಾಸ್,ಈಶ್ವರಿ ಮಹಿಳಾ ಸಮಾಜದ ಆಧ್ಯಕ್ಷರಾದ ಎಂ.ಆರ್.ರಂಗಮ್ಮ, ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಚಲನಚಿತ್ರ ನಿರ್ಮಾಪಕ ಚಿಂದೋಡಿ ಬಂಗಾರೇಶ್,ಕಲಾಶ್ರೀ ಡಾ.ಲಕ್ಷö್ಮಣದಾಸ್,ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿದರು. ಅಮರಜೋತಿ ಸಾಂಸ್ಕೃತಿಕ ಟ್ರಸ್ಟ್ ನ ದಿಬ್ಬೂರು ಮಂಜು ಮತ್ತಿತರರು ಉಪಸ್ಥಿತರಿದ್ದರು.