ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ಚಿತ್ರರಂಗದ ಮೇರುನಟ ಡಾ। ರಾಜ್ ಕುಮಾರ್ ಅವರ ಸೇವೆ ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಲು ಈ ಮೂಲಕ ಕೇಂದ್ರ ಸರ್ಕಾರವನ್ನು ಮನವಿ ಮಾಡುವುದಾಗಿ ನಗರದ ಶಾಸಕ ಗೋಪಾಲಯ್ಯ ತಿಳಿಸಿದರು.

ನಗರದ ಕಂಠೀರವ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಡಾ। ರಾಜ್ ಕುಮಾರ್ ಅವರ 98ನೇ ಜನ್ಮದಿನಾಚರಣೆಯಲ್ಲಿ ಪುಷ್ಪಾರ್ಚನೆ ಮಾಡಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ। ರಾಜ್ ಅವರು ಕನ್ನಡ ನಾಡು, ನುಡಿಗೆ ಸಲ್ಲಿಸಿರುವ ಸೇವೆ ಅಪಾರವಾದದ್ದು, ರಾಜ್ ಅವರು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಇಡೀ ರಾಜ್ಯದಲ್ಲಿ ಕನ್ನಡಿಗರು ಎಚ್ಚರಗೊಳ್ಳುವಂತೆ ಮಾಡಿದ್ದರಿಂದ ಇಂದು ರಾಜ್ಯದಲ್ಲಿ ಕನ್ನಡ ಉಳಿದಿದೆ. ಇದರಿಂದಾಗಿ ಡಾ.ರಾಜ್ ಅವರಿಗೆ ಭಾರತ ರತ್ನ ಸೂಕ್ತ ಎಂದರು.

ರಾಜ್‌ ಐಕ್ಯ ಸ್ಥಳ ಅಭಿವೃದ್ಧಿ ನನ್ನ ಜವಾಬ್ದಾರಿ:


ಡಾ। ರಾಜ್ ಐಕ್ಯವಾದ ಸ್ಥಳ ನನ್ನ ಕ್ಷೇತ್ರ ವ್ಯಾಪ್ತಿಯಲ್ಲೇ ಇರುವುದರಿಂದ ಇದರ ಅಭಿವೃದ್ಧಿ ನನ್ನ ಜವಾಬ್ದಾರಿ. ಇಲ್ಲಿರುವ ಸೌಲಭ್ಯಗಳು ಸಾಲದು. ಪ್ರತಿದಿನ ಅಭಿಮಾನಿಗಳು ಭೇಟಿ ನೀಡುತ್ತಾರೆ. ಪ್ರತಿ ಭಾನುವಾರ ಐದರಿಂದ ಆರು ಸಾವಿರದವರೆಗೆ ಅಭಿಮಾನಿಗಳು ಈ ಪುಣ್ಯ ನೆಲವನ್ನು ಸ್ಪರ್ಶಿಸಿ ಹೋಗುತ್ತಾರೆ. ಇಲ್ಲಿ ಡಾ। ರಾಜ್ ಕುಟುಂಬದ ಪಾರ್ವತಮ್ಮ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಐಕ್ಯ ಸ್ಥಳವೂ ಇರುವುದರಿಂದ ಸರ್ಕಾರ ಸಮಗ್ರ ಅಭಿವೃದ್ಧಿ ಮಾಡಬೇಕು. ಅಗತ್ಯವಾದ ಹಣ ಬಿಡುಗಡೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವರನಟ ಡಾ। ರಾಜ್ ಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸಲು ಕೇಂದ್ರಸರ್ಕಾರದ ಜೊತೆ ಮಾತನಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್, ಸಾಹಿತಿ ಬರಗೂರು ರಾಮಚಂದ್ರಪ್ಪ, ದೊಡ್ಡಹುಲ್ಲೂರು ರುಕ್ಕೋಜಿ, ರಾಜ್ ಕುಟುಂಬದ ರಾಘವೇಂದ್ರ ರಾಜ್ ಕುಮಾರ್, ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಮೂಬ್ ಪಾಷಾ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳು ರಾಜ್ ಸಮಾಧಿಗೆ ತೆರಳಿ ಪುಷ್ಪಾರ್ಚನೆ ಮಾಡಿದರು. ಬೆಳಗ್ಗೆಯಿಂದಲೇ ಅಭಿಮಾನಿಗಳು ಸೇರಿದ್ದು, ಒಬ್ಬೊಬ್ಬರಾಗಿ ರಾಜ್ ಸಮಾಧಿ ಬಳಿ ತೆರಳಿ ಗೌರವ ಸಲ್ಲಿಸುತ್ತಿದ್ದರು. ದಾನಿಗಳಿಂದ ಅಭಿಮಾನಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಡಾ। ರಾಜ್‌ಗೆ ಭೂಮಿ: ಚೇತನ್‌ ಕ್ಯಾತೆ:

ಬೆಂಗಳೂರಿನ ನಗರ ಮಧ್ಯದಲ್ಲಿ ಡಾ.ರಾಜ್‌ಕುಮಾರ್‌ ಅವರ ಸಮಾಧಿ ಕಾಂಪ್ಲೆಕ್ಸ್‌ಗಾಗಿ ಜಾಗ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.ಡಾ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದಂದೇ ಇಂಥದ್ದೊಂದು ಪೋಸ್ಟ್‌ ಮಾಡುವ ಮೂಲಕ ನಟ ಚೇತನ್‌ ಅವರು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ‘ನಾವು ರಾಜಕುಮಾರ್‌ ಅವರನ್ನು ಒಬ್ಬ ಮಹಾನ್‌ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ ‘ಸಮಾಧಿ ಕಾಂಪ್ಲೆಕ್ಸ್’ಗಾಗಿ 2.5 ಎಕರೆ ಭೂಮಿ ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರ ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ’ ಎಂದು ಚೇತನ್‌ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಣ್ಣಾವ್ರ ಸಮಾಧಿ ಸ್ಥಳಕ್ಕೆ ಜಾಗ ಕೊಟ್ಟಿರುವ ಸರ್ಕಾರದ ಕ್ರಮವನ್ನು ಟೀಕೆ ಮಾಡಿರುವ ನಟ ಚೇತನ್‌ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.