ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಮುಧೋಳದಲ್ಲಿ ಫೆ.22 ರಿಂದ 24 ವರೆಗೆ ಜರುಗಲಿರುವ ರನ್ನ ವೈಭವ ನಿಮಿತ್ತ ಮುಧೋಳ ರನ್ನ ಪ್ರತಿಷ್ಠಾನ ವತಿಯಿಂದ ನೀಡಲಾಗುವ ರನ್ನ ಹಳಗನ್ನಡ ಪ್ರಶಸ್ತಿಗೆ ವಿಶ್ರಾಂತ ಕುಲಸಚಿವ ಡಾ.ಶಾಂತಿನಾಥ ದಿಬ್ಬದ ಹಾಗೂ ವಿಶ್ರಾಂತ ಶಿಕ್ಷಕ ಶಂಕರಯ್ಯ ಉಕ್ಕಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.ಮುಧೋಳ ನೀರಿಕ್ಷಣಾ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ರನ್ನ ರಥಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು, ರಾಜ್ಯ ಮಟ್ಟದ ರಥ ಶನಿವಾರ ರನ್ನ ಬೆಳಗಲಿಗೆ ಬಂದು ತಲುಪಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಜೊತೆಗೆ ಕ್ರೀಡಾಕೂಟ ಸಹ ಹಮ್ಮಿಕೊಳ್ಳಲಾಗಿದೆ. ಅಂತಾರಾಜ್ಯ ಮಹಿಳಾ ಮತ್ತು ಪುರುಷರ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಮಹಾರಾಷ್ಟ್ರ, ಪಂಜಾಬ, ದೆಹಲಿ, ತಮಿಳುನಾಡು, ಕೇರಳ ರಾಜ್ಯ ಸೇರಿದಂತೆ ಇತರೆ ರಾಜ್ಯದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಸಂಗ್ರಾಣಿ ಕಲ್ಲು, ಗುಂಡು ಹಾಗೂ ಚೀಲ ಎತ್ತುವುದು, ಮಲ್ಲಕಂಬ, ಹಗ್ಗ ಜಗ್ಗಾಟದಂತಹ ಸ್ಪರ್ಧೆಗಳು ನಡೆಸಲಾಗುತ್ತಿದೆ..
ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕವಿ ಚಕ್ರವರ್ತಿ ರನ್ನ ಸಾಹಿತ್ಯ ಕುರಿತಂತೆ ವಿಚಾರಗೋಷ್ಠಿ, ಕವಿಗೋಷ್ಠಿ ಏರ್ಪಡಿಸಲಾಗಿದೆ. ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ಶ್ರೇಷ್ಠ ಕಲಾವಿದರಿಂದ ಓಡಿಸ್ಸಿ ನೃತ್ಯ, ಕಥಕ್ಕಳಿ, ಖ್ಯಾತ ಗಾಯಕರಾದ ಗುರುಕಿರಣ, ಅರ್ಜುನ ಜನ್ಯ, ರಾಜೇಶ ಕೃಷ್ಣನ್, ವಿಜಯ ಪ್ರಕಾಶ, ಅನುಪಮಾ ಭಟ್, ಆರ್.ಜೆ. ರಶೀದ್ ತಂಡದಿಂದ ಸಂಗೀತ ರಸದೌತನ ನೀಡಲಿದ್ದಾರೆ. ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಟಿ ರಚಿತಾ ರಾಮ್, ನಿರೂಪಕಿ ಅನುಶ್ರೀ ಪಾಲ್ಗೊಳ್ಳಲಿದ್ದಾರೆ. ಸರ್ಕಾರದಿಂದ ₹ 2 ಕೋಟಿ ಬಿಡುಗಡೆಯಾಗಿದ್ದು, ಪ್ರಾವಾಸೋದ್ಯಮ ಇಲಾಖೆಯಿಂದ ₹20 ಲಕ್ಷ ಬಿಡುಗಡೆಯಾಗಿದೆ ಎಂದು ತಿಳಿಸಿದರು.22ರಂದು ರನ್ನ ಬೆಳಗಲಿಯ ಕವಿಚಕ್ರವರ್ತಿ ರನ್ನವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಪ್ರವಾಸೋದ್ಯಮ ಸಚಿವ ಎಚ್.ಕೆ .ಪಾಟೀಲ ಚಾಲನೆ ನೀಡಿದರೆ, ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಪ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸಲಿದ್ದಾರೆ. 3ನೇ ದಿನ ದಿನ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಶ್ರೀ ಮುಕುಟ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಿದ್ದಾರೆಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಸಚಿವರಾಗಿ ಡಾ.ಎಚ್.ಸಿ. ಮಹಾದೇವಪ್ಪ, ಪ್ರೀಯಾಂಕ ಖರ್ಗೆ, ಶಿವಾನಂದ ಪಾಟೀಲ, ಎಸ್.ಎಸ್. ಮಲ್ಲಿಕಾರ್ಜುನ, ಲಕ್ಷ್ಮೀ ಹೆಬ್ಬಾಳಕರ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಅಥಣಿ ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿ.ಪ. ಶಾಸಕರು ಹಾಗೂ ಇತರೆ ಗಣ್ಯರು ಆಗಮಿಸಲಿದ್ದಾರೆ ಎಂದರು.