ಬದುಕಿನುದ್ದಕ್ಕೂ ಸರ್ವ ಜೀವಿಗೂ ಲೇಸನ್ನೆ ಬಯಸಿದ್ದ ಬಸವಣ್ಣ: ಡಾ.ಶರಣಪ್ರಕಾಶ ಪಾಟೀಲ

| Published : May 01 2025, 12:47 AM IST

ಬದುಕಿನುದ್ದಕ್ಕೂ ಸರ್ವ ಜೀವಿಗೂ ಲೇಸನ್ನೆ ಬಯಸಿದ್ದ ಬಸವಣ್ಣ: ಡಾ.ಶರಣಪ್ರಕಾಶ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಹನ್ನೆರಡನೇ ಶತಮಾನದಲ್ಲಿ ಜಾತಿ ರಹಿತ ಸಮ-ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬದುಕಿನುದ್ದಕ್ಕೂ ಸರ್ವ ಜೀವಿಗೂ ಲೇಸನ್ನೆ ಬಯಸಿದ್ದ ಬಸವಣ್ಣ ಮತ್ತು ಬಸವಾದಿ ಶರಣರ ವಚನಗಳು ಇಡೀ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ವಚನ ಮಂಟಪ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೋವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಹನ್ನೆರಡನೇ ಶತಮಾನದಲ್ಲಿ ಜಾತಿ ರಹಿತ ಸಮ-ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬದುಕಿನುದ್ದಕ್ಕೂ ಸರ್ವ ಜೀವಿಗೂ ಲೇಸನ್ನೆ ಬಯಸಿದ್ದ ಬಸವಣ್ಣ ಮತ್ತು ಬಸವಾದಿ ಶರಣರ ವಚನಗಳು ಇಡೀ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ವಚನ ಮಂಟಪ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೋವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಬುಧವಾರ ಇಲ್ಲಿನ ಜಗತ್ ವೃತ್ತದಲ್ಲಿರುವ ಸಾಂಸ್ಕೃತಿಕ ನಾಯಕ ಬಸವೇಶ್ವರರ ಅಶ್ವಾರೋಹಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಕಳೆದ 2024-25ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಇದನ್ನು ಘೋಷಿಸಿದ್ದು, ಕೂಡಲೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತದಿಂದ ನೀಲಿ ನಕ್ಷೆ ತಯಾರಿಸುವ ಕೆಲಸ ನಡೆದಿದೆ ಎಂದರು.

ಯಾರ ಹಂಗಿಲ್ಲದೆ ಸಹಬಾಳ್ವೆಯ ಜೀವನ ನಡೆಸಿದ ಬಸವಾದಿ ಶರಣರ ಜೀವನ ನಮಗೆಲ್ಲ ಆದರ್ಶಪ್ರಾಯವಾಗಿದೆ. ಅಕ್ಕಮಹಾದೇವಿ, ಸತ್ಯಕ್ಕ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಾರಯ್ಯ ಹೀಗೆ ಅನೇಕ ಶರಣರು ಮನುಕುಲದ ಉದ್ದಾರಕ್ಕೆ ದುಡಿದಿದ್ದಾರೆ. ಬಸವಾದಿ ಶರಣರ ವಚನಗಳಿಗೆ ಬದಕು ಬದಲಾಯಿಸುವ ಬಹುದೊಡ್ಡ ಶಕ್ತಿ ಇದ್ದು, ಮುಂದಿನ ಪೀಳಿಗೆಗೆ ಇದನ್ನು ತಿಳಿಸಬೇಕಿದೆ. ಲಿಂಗ ಪೂಜೆ, ಬಸವ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಬೇಕಿದೆ ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿ, ಲಿಂಗ ಕಟ್ಟಿದವರೆ ಬಸವಣ್ಣನವರ ಅನುಯಾಯಿಗಳಾಗಬೇಕಿಲ್ಲ. ಲಿಂಗ ಕಟ್ಟದವರು ಸಹ ಅನುಯಾಯಿಗಳಾಗಬಹುದು. ಕೆಳ ವರ್ಗದಿಂದ ಬಂದ ಈ ಸಮುದಾಯ ಲಿಂಗ ಕಟ್ಟಿಕೊಂಡಿದ್ದರಿಂದಲೆ ಲಿಂಗಾಯತರಾಗಿದ್ದೇವೆ. ದಲಿತ ಕೇರಿಯಲ್ಲಿ ಹುಟ್ಟಿದ ಅಂಬೇಡ್ಕರ್ ಅವರ ಜಯಂತಿಯನ್ನು ದಲಿತ ಸಂಘರ್ಷ ಸಮಿತಿಯು ನಾಡಿನಾದ್ಯಂತ ಬುದ್ದ-ಬಸವ-ಅಂಬೇಡ್ಕರ್ ಪರಿಕಲ್ಪನೆಯಲ್ಲಿ ರಾಜ್ಯದುದ್ದಕ್ಕೂ ಪಸರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದರು.

ವ್ಯಕ್ತಿಯನ್ನು ವೈಭವೀಕರಿಸುವ ಬದಲು ವಿಚಾರಗಳನ್ನು ವೈಭವೀಕರಿಸಬೇಕಿದೆ. ಅದು ಬಸವಣ್ಣನವರಾಗಲಿ, ಅಂಬೇಡ್ಕರ್‌ರವರಾಗಲಿ. ವ್ಯಕ್ತಿ ವೈಭವೀಕರಿಸಿದರೆ ವಿಚಾರ ಸತ್ತು ಹೋಗುತ್ತದೆ. ಬಸವಣ್ಣ ದೇವರನ್ನು ಹುಡಿಕಿ ದೇವಸ್ಥಾನಕ್ಕೆ ಹೋಗಿಲ್ಲ, ದೇವರನ್ನೆ ಎತ್ತಿಕೊಂಡು ಕೊರಳಲ್ಲಿ ಕಟ್ಟಿಕೊಂಡರು. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ? ಎಂಬ ಅಕ್ಕಮಹಾದೇವಿಯ ವಚನ ಪಠಿಸಿದ ಅವರು, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕೆಂಬ ಸಂದೇಶವನ್ನು ತಮ್ಮಂತಹ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಈ ವಚನಗಳೇ ಸ್ಫೂರ್ತಿಯಾಗಿವೆ ಎಂದರು.

ಅಫಜಲಪೂರ ಶಾಸಕರು ಮತ್ತು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಎಂ.ವೈ.ಪಾಟೀಲ ಮಾತನಾಡಿ, ನಮ್ಮಿಂದ ಕಾಯಕ ಶರಣರು ದೂರಾಗಿದ್ದು, ಅವರೆಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಳ್ಳಬೇಕಿದೆ. ಬುದ್ದ ರಾಜತ್ವವನ್ನು ದಿಕ್ಕರಿಸಿ ಸಮ-ಸಮಾಜ ನಿರ್ಮಾಣಕ್ಕೆ ಕರೆ ಕೊಟ್ಟರು. ಬಸವಣ್ಣ ಜಾತಿ ಪದ್ದತಿ ಹೋಗಲಾಡಿಸಲು ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಬುದ್ದ ಮತ್ತು ಬಸವನ ಆಶಯಗಳನ್ನು ಸಂವಿಧಾನದ ರೂಪದಲ್ಲಿ ಜಾರಿಗೆ ತಂದು ಇಡೀ ದೇಶದ ನಿವಾಸಿಗಳಿಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸಮಾನೆತೆಯ ಹರಿಕಾರನಾಗಿ ಗುರುತಿಸಿಕೊಂಡರು ಎಂದರು.

ಬಸವಣ್ಣನ ಕರ್ಮಭೂಮಿ ಕಲ್ಯಾಣ:

ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ.ದುರ್ಗಾದಾಸ್, ಬಸವಣ್ಣನ ಕರ್ಮಭೂಮಿ ಕಲ್ಯಾಣ ಕರ್ನಾಟಕ ಪ್ರದೇಶ. ಹೀಗಾಗಿ ಇಲ್ಲಿ ಬಸವಣ್ಣ ನಡೆದಾಡಿದ ಅಚ್ಚಳಿಯ ನೆನಪು ಇಂದಿಗೂ ಇದೆ. ಬಳಸಲು ಕಷ್ಟವಾಗಿರುವ ವೇದ, ಸಂಸ್ಕೃತ, ಶ್ಲೋಕ ಪದಗಳ ಬದಲಾಗಿ ಅನುಭವದ ಕುಲುಮೆಯಲ್ಲಿ ಹೊರಹೊಮ್ಮಿದ ವಚನಗಳನ್ನು ಬಸವಾದಿ ಶರಣರು ನಾಡಿಗೆ ನೀಡಿದ್ದಾರೆ. ಬದುಕಿನ ದಾರಿದೀಪವಾಗಿರುವ ಈ ವಚನಗಳು ನಮಗೆ ಚಿನ್ನವಾಗಿವೆ. ಬಾಲ್ಯದಲ್ಲಿಯೆ ಕುಟುಂಬದಲ್ಲಿನ ಮೂಡನಂಬಿಕೆ, ಅಂಧಕಾರ ವಿರೋಧಿಸಿದ್ದ ಬಸವಣ್ಣನವರು ನಂತರ ಬಿಜ್ಜಳದ ರಾಜಧಾನಿ ಕಲ್ಯಾಣಕ್ಕೆ ಬಂದು ಕಾಯಕ ಶರಣರೆಲ್ಲರನ್ನು ಒಗ್ಗೂಡಿಸಿ ಜಾತಿ ರಹಿತ, ಸಮ-ಸಮಾಜ ನಿರ್ಮಾಣ ಮಾಡಿದ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.

ಇದಲ್ಲದೆ ಇತ್ತೀಚೆಗೆ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ 982ನೇ ರ‍್ಯಾಂಕ್ ಗಳಿಸಿದ ಡೋರ ಜಂಬಗಾ ಗ್ರಾಮದ ಯುವಕ ಮೋಹನಕುಮಾರ ಸಾಧನೆ ಗುರುತಿಸಿ ಅವರ ಪೋಷಕರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಶೈಲಂ ಸಾರಂಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ಮಾಡಿದಲ್ಲದೆ ಆಶೀರ್ವಚನ ನೀಡಿದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಶಶೀಲ ಜಿ. ನಮೋಶಿ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು ಮತ್ತು ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಶರಣು ಮೋದಿ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತೆ ಸಾಹಿತ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಅರುಣಕುಮಾರ, ನೀಲಕಂಠ ಮೂಲಗೆ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರೆ ಸೋಮಶೇಖರ್ ಹಿರೇಮಠ ವಂದಿಸಿದರು. ಶ್ರೀಶೈಲ್ ಗೂಳಿ ನಿರೂಪಿಸಿದರು.